ಮುಂಬೈ: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಪ್ರದರ್ಶನದ ಬಳಿಕ ಚೇತೇಶ್ವರ ಪೂಜಾರ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಬೇಕು ಎನ್ನುವ ಕೂಗು ಕೇಳಿಬರುತ್ತಿದೆ. ಒಂದು ವೇಳೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಿಂದ ಪೂಜಾರರನ್ನು ಹೊರಗಿಟ್ಟರೆ ಅವರ ಬದಲಿಗೆ ಪೃಥ್ವಿ ಶಾ ರನ್ನು ಆಡಿಸಬೇಕು ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರಾಡ್ ಹಾಗ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತಿರಿಸುವ ವೇಳೆ ಬ್ರಾಡ್ ಹಾಗ್ ಈ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:ಯಶಸ್ವಿ ನಾಯಕತ್ವವೆಂದರೆ ಟ್ರೋಫಿ ಗೆಲ್ಲುವುದು ಮಾತ್ರವೇ..?
ಯಾರಾದರೂ ಪೂಜಾರ ಬದಲು ಆಡುವುದಾದರೆ ಅದು ಪೃಥ್ವಿ ಶಾ. ಇನ್ನಿಂಗ್ಸ್ ಆರಂಭಿಸುವುದಕ್ಕಿಂತ ಶಾ ಮೂರನೇ ಕ್ರಮಾಂಕದಲ್ಲೇ ಹೆಚ್ಚು ಸೂಕ್ತವೆಂದು ನನ್ನ ಭಾವನೆ. ಆತ ಸಾಕಷ್ಟು ಪ್ರತಿಭೆ ಮತ್ತು ದೀರ್ಘ ಭವಿಷ್ಯವನ್ನು ಹೊಂದಿದ್ದಾನೆ ಎಂದು ಹಾಗ್ ಹೇಳಿದ್ದಾರೆ.
ಚೇತೇಶ್ವರ ಪೂಜಾರ ಅವರು ನಿಧಾನ ಮತ್ತು ‘ಉದ್ದೇಶರಹಿತ’ ಬ್ಯಾಟಿಂಗ್ ಬಗ್ಗೆ ಈ ಹಿಂದೆ ಟೀಕೆಗೆ ಗುರಿಯಾಗಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ನಲ್ಲಿ ಭಾರತದ ಸೋಲಿನ ನಂತರ ಈ ಟೀಕೆಗಳು ಹೆಚ್ಚಿವೆ, ಆ ಪಂದ್ಯದಲ್ಲಿ ಪೂಜಾರ ಮೊದಲ ಇನ್ನಿಂಗ್ಸ್‌ನಲ್ಲಿ 54 ಎಸೆತದಲ್ಲಿ 8 ರನ್ ಮತ್ತು ಎರಡನೆ ಇನ್ನಿಂಗ್ಸ್ ನಲ್ಲಿ 80 ಎಸೆತದಲ್ಲಿ 15 ರನ್ ಗಳಿಸಿದ್ದರು.
” ನಾವು ಸರಿಯಾದ ಮನಸ್ಥಿತಿ ಹೊಂದಿರುವ ಸರಿಯಾದ ಆಟಗಾರರೊಂದಿಗೆ ಆಡಬೇಕಿದೆ” ಎಂದು ಕ್ಯಾಪ್ಟನ್ ವಿರಾಟ್ ಕೊಹ್ಲಿ ಪಂದ್ಯದ ನಂತರ ಮಾತನಾಡಿದ್ದರು.