ಅಹ್ಮದಾಬಾದ್: ‘ಪ್ರಧಾನಿ ನರೇಂದ್ರ ಮೋದಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಇಬ್ಬರೂ ಬ್ರಾಹ್ಮಣರು’ ಎಂದು ಹೇಳುವ ಮೂಲಕ ಗುಜರಾತ್ ಅಸೆಂಬ್ಲಿ ಸ್ಪೀಕರ್ ರಾಜೇಂದ್ರ ತ್ರಿವೇದಿ ವಿವಾದ ಸೃಷ್ಟಿಸಿದ್ದಾರೆ. ಈ ಬಗ್ಗೆ ಕಿಡಿಕಾರಿರುವ ಬಿಜೆಪಿ ಸಂಸದ ಉದಿತ್ ರಾಜ್, ಇಂಥ ಹೇಳಿಕೆಗಳ ಮೂಲಕ ಪಕ್ಷದ ವರ್ಚಸ್ಸನ್ನು ಹಾಳು ಮಾಡುತ್ತಿದ್ದೀರಿ ಎಂದು ಗುಡುಗಿದ್ದಾರೆ.
ಸೋಮವಾರ ಸಮಸ್ತ ಗುಜರಾತ್ ಬ್ರಹ್ಮ ಸಮಾಜ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಮಾತನಾಡಿದ ತ್ರಿವೇದಿ, “ಜಾತಿ ಎಂಬುದು ವ್ಯಕ್ತಿಯ ಕೆಲಸವನ್ನು ಅವಲಂಬಿಸಿರುತ್ತದೆ. ಅವನು ಮಾಡುವ ಕೆಲಸಗಳಿಂದ ಆತ ಬ್ರಾಹ್ಮಣನಾಗುತ್ತಾನೆ. ಭಗವದ್ಗೀತೆಯ ಪ್ರಕಾರ ಕಲಿಯವರೆಲ್ಲರೂ ಬ್ರಾಹ್ಮಣರು. ಅವರು ಹಾಲನ್ನು ಕುದಿಸಿದಾಗ ಮೇಲೆ ಕಾಣುವ ಕೆನೆಯಿದ್ದಂತೆ. ಅಂಬೇಡ್ಕರ್ ಅವರೂ ಬ್ರಾಹ್ಮಣರೇ. ಅವರ ಉಪನಾಮವು ಅದನ್ನು ಸೂಚಿಸುತ್ತದೆ. ಇನ್ನು ಪ್ರಧಾನಿ ಮೋದಿ ಅವರನ್ನೂ ಬ್ರಾಹ್ಮಣ ಎನ್ನಲು ನನಗೆ ಯಾವ ಹಿಂಜರಿಕೆಯೂ ಇಲ್ಲ,’ ಎಂದಿದ್ದಾರೆ.
ಅಷ್ಟೇ ಅಲ್ಲ, ‘ಬ್ರಾಹ್ಮಣರೇ ದೇವರನ್ನು ಸೃಷ್ಟಿಸಿದ್ದು.
ಶ್ರೀರಾಮನು ವಾಸ್ತವದಲ್ಲಿ ಕ್ಷತ್ರಿಯ. ಆದರೆ, ಋಷಿಗಳು ಅವರನ್ನು ದೇವರನ್ನಾಗಿ ಮಾಡಿದರು. ಹಾಗೆಯೇ ಶ್ರೀಕೃಷ್ಣ ಒಬಿಸಿ (ಇತರೆ ಹಿಂದುಳಿದ ವರ್ಗ)ಗೆ ಸೇರಿದವರು. ಅವರನ್ನು ದೇವರಾಗಿ ಮಾಡಿದ್ದು ಸಂದಿಪಾಣಿ ಋಷಿ. ಈ ಋಷಿಯೂ ಒಬ್ಬ ಬ್ರಾಹ್ಮಣ’ ಎಂದೂ ತ್ರಿವೇದಿ ಹೇಳಿದ್ದಾರೆ.
ತಿಂಗಳ ಹಿಂದೆಯೇ ಬಿಪ್ಲಬ್ ಗೆ ಬುಲಾವ್: ಇದೇ ವೇಳೆ, ತ್ರಿಪುರ ಸಿಎಂ ಬಿಪ್ಲಬ್ ದೇಬ್ ಗೆ ತಮ್ಮನ್ನು ಭೇಟಿಯಾಗುವಂತೆ ಪ್ರಧಾನಿ ಮೋದಿ ಸೂಚಿಸಿರುವ ಕುರಿತು ಸಿಎಂ ಕಾರ್ಯಾಲಯ ಸ್ಪಷ್ಟನೆ ನೀಡಿದೆ. ಬಿಪ್ಲಬ್ ರನ್ನು ಪ್ರಧಾನಿ ಮೋದಿ ಒಂದು ತಿಂಗಳ ಹಿಂದೆಯೇ ಸಿಎಂಗಳ ಸಭೆಗೆಂದು ಆಹ್ವಾನಿಸಿದ್ದರು ಎಂದು ಕಾರ್ಯಾಲಯ ಹೇಳಿದೆ. ಹಲವು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾರಣ ಬಿಪ್ಲಬ್ ಗೆ ಎಚ್ಚರಿಕೆ ನೀಡಲು ಮೋದಿ ಕರೆಸಿಕೊಳ್ಳುತ್ತಿದ್ದಾರೆ ಎಂದು ವರದಿಯಾದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ಹೊರಬಿದ್ದಿದೆ.