ಚಿಕ್ಕೋಡಿ: ಹೆಚ್ಚು ಆದಾಯ ಹೊಂದಿರುವ, ಸರ್ಕಾರಿ ನೌಕರರು ಮತ್ತು ಪಿಂಚಣಿ ಸಿಬ್ಬಂದಿ ಅಕ್ರಮವಾಗಿ ಪಡೆದುಕೊಂಡಿರುವ ಬಿಪಿಎಲ್ ಪಡಿತರ ಕಾರ್ಡ್‌ಗಳನ್ನು ಮರಳಿ ಸರ್ಕಾರಕ್ಕೆ ಒಪ್ಪಿಸುತ್ತಿದ್ದು, ಚಿಕ್ಕೋಡಿ ತಾಲೂಕಿನ 579 ಜನರು ಇಂಥ ಕಾರ್ಡುಗಳನ್ನು ಸರ್ಕಾರಕ್ಕೆ ಮರಳಿಸಿದ್ದಾರೆ.
ಅಕ್ರಮ ಬಿಪಿಎಲ್ ರೇಶನ್ ಕಾರ್ಡ್ ಬಳಕೆ ಮಾಡಿದ ಆರೋಪದ ಮೇಲೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು 81 ಜನರಿಂದ 2.69 ಲಕ್ಷ ರೂ ದಂಡ ವಸೂಲಿ ಮಾಡಿದೆ. ಚಿಕ್ಕೋಡಿ ತಾಲೂಕಿನಲ್ಲಿ 1,97,026 ಪಡಿತರ ಕಾರ್ಡ್‌ಗಳಲ್ಲಿ 6,27,786 ಫಲಾನುಭವಿಗಳು ಇದ್ದಾರೆ. ಇದರಲ್ಲಿ 3,490 ಅಂತ್ಯೋದಯ, 16,614 ಎಪಿಎಲ್ ಮತ್ತು 1,50,264 ಬಿಪಿಎಲ್ ಕಾರ್ಡ್‌ಗಳನ್ನು ಸರ್ಕಾರ ನೀಡಿದೆ. ನಿಗದಿಗಿಂತ ಹೆಚ್ಚು ಆದಾಯ ಇದ್ದರೂ ಬಿಪಿಎಲ್ ರೇಶನ್ ಕಾರ್ಡ್ ಬಳಸುತ್ತಿದ್ದವರಿಂದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮರಳಿ ಪಡೆಯುತ್ತಿದೆ.
ಈ ಮೊದಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಇಂತಹ ರೇಶನ್ ಕಾರ್ಡ್‌ಗಳನ್ನು ಮರಳಿ ಇಲಾಖೆಗೆ ಒಪ್ಪಿಸಬೇಕೆಂದು ಕಾಲಾವಕಾಶ ನೀಡಿತ್ತು. ಈ ನಿಟ್ಟಿನಲ್ಲಿ 579 ಜನರು ಮರಳಿ ಸರ್ಕಾರಕ್ಕೆ ಕಾರ್ಡ್ ಜಮಾ ಮಾಡಿದ್ದಾರೆ. ರಾಜ್ಯ ಸರ್ಕಾರ ನಾಗರಿಕರ ಹಸಿವು ನೀಗಿಸಲು ಅಕ್ಕಿ ಖರೀದಿ ಮಾಡಿ ಉಚಿತವಾಗಿ ವಿತರಣೆ ಮಾಡುತ್ತಿದೆ. ಬಿಪಿಎಲ್ ರೇಶನ್ ಕಾರ್ಡ್‌ನಲ್ಲಿ ಹೆಸರು ಇರುವ ಪ್ರತಿ ವ್ಯಕ್ತಿಗೆ ತಿಂಗಳಿಗೆ 7 ಕೆಜಿ ಅಕ್ಕಿ ನೀಡಲಾಗುತ್ತಿದೆ.
ನೈಜ ಫಲಾನುಭವಿಗಳು ಬಿಟ್ಟು ಇತರ ಉಳ್ಳವರು ಹಾಗೂ ಹಾಗೂ ಸರ್ಕಾರಿ ಸಿಬ್ಬಂದಿ ಇಮಥ ಕಾರ್ಡ್ ಪಡೆದಿದ್ದರಿಂದ ಖಜಾನೆಗೆ ನಷ್ಟವಾಗುವುದನ್ನು ತಪ್ಪಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಇಂತಹ ಕಾರ್ಯಾಚರಣೆ ನಡೆಸುತ್ತಿದೆ. ರಾಜ್ಯ ಮತ್ತು ಕೇಂದ್ರ ಸಿಬ್ಬಂದಿ ಹಾಗೂ ಪಿಂಚಣಿದಾರರು, ಆದಾಯ ತೆರಿಗೆ ತುಂಬುವ ವ್ಯಕ್ತಿ, ಜಮೀನುದಾರರು ಇಂಥವರ ಕಾರ್ಡ್‌ಗಳನ್ನು ರದ್ದು ಮಾಡಲಾಗುತ್ತಿದ್ದು, ಹೆಚ್ಚು ಆದಾಯ ಹೊಂದಿದ ವ್ಯಕ್ತಿಗಳು ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುವ ಮುನ್ನವೇ ಬಿಪಿಎಲ್ ಕಾರ್ಡ್‌ಗಳನ್ನು ಮರಳಿ ಸರ್ಕಾರಕ್ಕೆ ಒಪ್ಪಿಸಬೇಕೆಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ ಆದಾಯ ಹೆಚ್ಚಿರುವ ವ್ಯಕ್ತಿಗಳಿಂದ ಪಡಿತರ ಕಾರ್ಡ್‌ಗಳನ್ನು ಮರಳಿ ಪಡೆದುಕೊಳ್ಳುತ್ತಿದ್ದೇವೆ. ಚಿಕ್ಕೋಡಿ ತಾಲೂಕಿನ 579 ಬಿಪಿಎಲ್ ರೇಶನ್ ಕಾರ್ಡ್‌ಗಳನ್ನು ಮರಳಿ ಪಡೆದಿದೆ. ಬಿಪಿಎಲ್ ಕಾರ್ಡ್ ಮರಳಿ ನೀಡದ ಇರುವ ವ್ಯಕ್ತಿಗಳನ್ನು ಗುರ್ತಿಸಿ 81 ಜನರಿಂದ 2.69 ಲಕ್ಷ ರೂ ದಂಡ ವಸೂಲಿ ಮಾಡಲಾಗಿದೆ.
-ಎಂ.ಬಿ.ಡಂಗಿ, ನಿರೀಕ್ಷಕರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಚಿಕ್ಕೋಡಿ.