ಲಕ್ನೋ: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದ ಗರ್ಭಿಣಿಯೊಬ್ಬಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂರು ದಿನಗಳ ಬಳಿಕ ಪ್ರಿಯಕರ ಹಾಗೂ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಹಿನ್ನೆಲೆ: 2015 ರಲ್ಲಿ ರಾಂಬಿರಿ ಎನ್ನುವಾಕೆ ವಿನೋದ್ ಎನ್ನುವವರನ್ನು ಮದುವೆಯಾಗಿದ್ದರು. ವರ್ಷದ ಬಳಿಕ ದಂಪತಿ ವಿಚ್ಚೇದನ ಪಡೆದು ದೂರವಾಗಿದೆ. ಇದಾದ ಬಳಿಕ ರಾಂಬಿರಿ ತನ್ನ ತಂದೆಯ ಮನೆಯಲ್ಲಿ ವಾಸವಾಗಿದ್ದಳು. ಅಲ್ಲಿ ಅವಳು ಆದೇಶ್ ಎನ್ನುವ ಯುವಕನ ಪರಿಚಯವಾಗಿದೆ. ಇಬ್ಬರ ನಡುವಿನ ಆತ್ಮೀಯತೆ ಪ್ರೀತಿಗೆ ತಿರುಗಿದೆ. ಈ ವೇಳೆ ರಾಂಬಿರಿ ಗರ್ಭಿಣಿಯಾಗಿದ್ದಾಳೆ. ರಾಂಬಿರಿ ತನ್ನನು ಮದುವೆಯಾಗುವಂತೆ ಮತ್ತೆ ಮತ್ತೆ ಆದೇಶ್ ಬಳಿ ಒತ್ತಾಯಿಸುತ್ತಿದ್ದಳು. ಇದರಿಂದ ಆದೇಶ್ ಸ್ನೇಹಿತರೊಂದಿಗೆ ಸೇರಿ ರಾಂಬಿರಿಯನ್ನು ಕೊಲೆಗೈಯುವ ಸಂಚನ್ನು ರೂಪಿಸಿದ್ದ ಎಂದು ಪ್ರಕರಣದ ಬಗ್ಗೆ ಪೊಲೀಸರು ಹೇಳಿದ್ದಾರೆ.
ಜು.2 ರಂದು ಆದೇಶ್ ತನ್ನ ಮನೆಗೆ ರಾಂಬಿರಿಯನ್ನು ಕರೆದಿದ್ದ. ಭೇಟಿಯ ನೆಪದಲ್ಲಿ ಕರೆದು ತನ್ನ ನಾಲ್ವರು ಸ್ನೇಹಿತರೊಂದಿಗೆ ಸೇರಿಕೊಂಡು ರಾಂಬಿರಿ ಮೇಲೆ ಹಲ್ಲೆಗೈದು, ಇಟ್ಟಿಗೆಯಿಂದ ಹೊಡೆದು ಸಾಯಿಸಿದ್ದಾರೆ. ಇದಾದ ಬಳಿಕ ಶವವನ್ನು ಹೊಲದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ರಾಂಬಿರಿಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ಮೃತಳ ಕುಟುಂಬ ದೂರು ನೀಡಿದ್ದಾರೆ.
ಪೊಲೀಸರು ಕಾರ್ಯಾಚರಣೆ ನಡೆಸಿ ಮೃತ ದೇಹವನ್ನು ವಶಕ್ಕೆ ಪಡೆದ ಬಳಿಕ ಪ್ರಿಯಕರ ಆದೇಶ್ ಆತನ ಸ್ನೇಹಿತರಾದ ದೀಪಕ್, ಆರ್ಯನ್, ಸಂದೀಪ್ ಮತ್ತು ರೋಹಿತ್ ರನ್ನು ಬಂಧಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.