ಹುಬ್ಬಳ್ಳಿ: ಉತ್ತರ ಪ್ರದೇಶದ ಬುಲ್ಡೋಜರ್ ಮಾದರಿ ರಾಜ್ಯದಲ್ಲೂ ಜಾರಿಯಾದರೆ ಕಾನೂನು ಕೈಗೆತ್ತಿಕೊಳ್ಳುವ ಕಿಡಿಗೇಡಿಗಳ ದುಷ್ಕೃತ್ಯ ತಡೆಯಲು ಸಾಧ್ಯ. ಈ ಕುರಿತು ಚಿಂತನೆ ನಡೆದಿದ್ದು,ಸರಕಾರ ಆ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೋಮವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಡಿ.ಜೆ. ಹಳ್ಳಿ, ಕೆ.ಜೆ. ಹಳ್ಳಿ ಹಾಗೂ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪೂರ್ವ ನಿಯೋಜಿತ. ಕೆಲವು ಸಂಘಟನೆಗಳ ಮುಖಂಡರು ಇದರಲ್ಲಿ ಪಾಲ್ಗೊಂಡು ಸಮಾಜದಲ್ಲಿ ಆತಂಕ ಸೃಷ್ಟಿಸಿದ್ದಾರೆ. ಕಾನೂನು-ಸುವ್ಯವಸ್ಥೆ ಬಲಿಷ್ಠವಾದರೆ ಕಿಡಿಗೇಡಿಗಳ ಕೃತ್ಯಕ್ಕೆ ಕಡಿವಾಣ ಹಾಕಬಹುದು. ಈ ಹಿನ್ನೆಲೆಯಲ್ಲಿ ಬುಲ್ಡೋಜರ್ ಮಾದರಿ ಜಾರಿಗೆ ತರಲು ಪಕ್ಷದ ಕೆಲವು ಮುಖಂಡರು ಸರಕಾರಕ್ಕೆ ಒತ್ತಾಯಿಸಿದ್ದಾರೆ ಎಂದರು.
ಕಳೆದ 25 ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಸೌಹಾರ್ದತೆ ನೆಲೆಸಿತ್ತು. ಸಣ್ಣ ಪುಟ್ಟ ಗಲಾಟೆಗಳು ಹೊರತುಪಡಿಸಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಘಟನೆ ನಡೆದಿರಲಿಲ್ಲ. ಈಗ ನಗರದಲ್ಲಿ ಆರ್ಥಿಕ ಚಟುವಟಿಕೆ, ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಗಲಭೆ ನಡೆದಿದ್ದು ದುರದೃಷ್ಟಕರ ಎಂದರು.
ಪಿಎಸ್ಐ ಆಯ್ಕೆ ಪರೀಕ್ಷೆಯ ಅಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾದ ಎಲ್ಲರನ್ನು ಪಕ್ಷಭೇದ ಮರೆತು ಬಂಧಿಸಲಾಗಿದೆ. ಇದರಲ್ಲಿ ಭಾಗಿಯಾದ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡಾಗ ಸರಕಾರಕ್ಕೆ ದೃಢತೆ ಬರಲಿದೆ. ಆಗ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ನ್ಯಾಯ ಸಿಗಲಿದೆ. ಈ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗೆ ಬಿಟ್ಟ ವಿಚಾರ. ಸಂಪುಟ ಪುನರ್ ರಚನೆ ಮಾಡಬೇಕೋ, ವಿಸ್ತರಿಸಬೇಕೋ ಎಂದು ವರಿಷ್ಠರ ಜೊತೆ ಸಿಎಂ ಸಮಾಲೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ಮುಸ್ಲಿಂ ವಿರುದ್ಧದ ಬಹಿಷ್ಕಾರದ ಅಭಿಯಾನದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶೆಟ್ಟರ್ , ಸರಕಾರಕ್ಕೆ ತನ್ನದೇ ಒಂದು ವ್ಯವಸ್ಥೆಯಿದೆ. ಬಹಿಷ್ಕಾರ ಇಂದು ನಿನ್ನೆಯದಲ್ಲ, ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಸಂಘಟನೆಗಳ ಹೇಳಿಕೆ ಅವರಿಗೆ ಬಿಟ್ಟಿದ್ದು ಎಂದರು.