ಬಂಟ್ವಾಳ: ಯಾರ ಸಹಾಯವೂ ಪಡೆಯದೆ ಕಾಲಿನ ಬೆರಳಿನ ಮೂಲಕ ಎಸ್ಎಸ್ಎಲ್ ಸಿ ಪರೀಕ್ಷೆ ಬರೆದ ಬಂಟ್ವಾಳದ ವಿದ್ಯಾರ್ಥಿಯ ಬಗ್ಗೆ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಟ್ವಿಟರ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೌಶಿಕ್ ಆಚಾರ್ಯ ಬಂಟ್ವಾಳದ ಎಸ್ ವಿಎಸ್ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಕಾಲಿನ ಬೆರಳುಗಳ ಮೂಲಕ ಪರೀಕ್ಷೆ ಬರೆದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಸುರೇಶ್ ಕುಮಾರ್, ಬಂಟ್ವಾಳ ಎಸ್.ವಿಎಸ್ ಪ್ರೌಡ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿ ಯಾರ ಸಹಾಯವೂ ಪಡೆಯದೆ ಕಾಲಿನ ಬೆರಳುಗಳ ಮೂಲಕ ಮೂಲಕವೇ ಉತ್ತರ ಬರೆದ ಈ ಪೋರ ಕೌಶಿಕ್ ನಿಗೆ ನನ್ನ ಹೃದಯಪೂರ್ವ ಮೆಚ್ಚುಗೆ . ಇಂತಹ ವ್ಯಕ್ತಿಗಳು ಬದುಕಿನ ಸಾರ್ಥಕ ಅರ್ಥ ಕಲ್ಪಿಸಿತ್ತಾರೆ. ಸಮಾಜದ ಎಲ್ಲ ಮಾನವೀಯ ನಿಲುವುಗಳನ್ನು ಸಮರ್ಥಿಸುತ್ತಾರೆ ಎಂದು ಬೆಂಬಲ ಸೂಚಿಸಿದ್ದಾರೆ.
ಬಹುಮುಖ ಪ್ರತಿಭೆ ಕೌಶಿಕ್: ಬಂಟ್ವಾಳದ ಕಂಚಿಕಾರ ಪೇಟೆ ರಾಜೇಶ್ ಆಚಾರ್ಯ ಮತ್ತು ಜಲಜಾಕ್ಷಿ ಆಚಾರ್ಯ ಅವರ ದ್ವಿತೀಯ ಪುತ್ರನಾಗಿರುವ ಕೌಶಿಕ್ ಗೆ ಹುಟ್ಟಿದಾಗಲೇ ಎರಡು ಕೈಗಳಿರಲಿಲ್ಲ. ಆದರೂ ಯಾವುದೇ ಅಂಜಿಕೆಯಿಲ್ಲದೆ ಯಾರಿಗೂ ಕಡಿಮೆಯಿಲ್ಲದಂತೆ ಸಾಧಿನೆ ತೋರಿದ್ದಾನೆ.
ಪಾಠದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿಯೂ ನಿಪುಣನಾಗಿರುವ ಈತ ಒಂದನೇ ತರಗತಿಯಿಂದಲೇ ಕಾಲಿನ ಬೆರಳಿನ ಮೂಲಕ ಪರೀಕ್ಷೆ ಬರೆಯಲು ಆರಂಭಿಸಿದ್ದ. ಹಾಗಾಗಿ ಎರಡು ಕೈಗಳಿಲ್ಲದ ಕೌಶಿಕ್ ನಿಗೆ ಆತನ ಕಾಲುಗಳೇ ಕೈಯಾಗಿ ತನ್ನೆಲ್ಲಾ ಕೆಲಸ ಮಾಡುತ್ತಿದ್ದಾನೆ.
ಓದಿನ ಜೊತೆ ಕೌಶಿಕ್ ನೃತ್ಯ, ಚಿತ್ರಕಲೆ, ಈಜು, ಕ್ರಿಕೆಟ್, ಹೀಗೆ ಎಲ್ಲಾ ಚಟುವಟಿಕೆಗಳಲ್ಲಿ ಎತ್ತಿದ ತನ್ನ ಸಾಮರ್ಥ್ಯ ಪ್ರದರ್ಶನ ನೀಡಿದ್ದಾನೆ. ಗುರುವಾರದಿಂದ ಆರಂಭವಾದ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಕಾಲಿನಿಂದ ಬರೆದು ಮೆಚ್ಚುಗೆ ಪಡೆದಿದ್ದಾನೆ.