ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ನಗರದಲ್ಲಿ ರೋಡ್ ಶೋ ನಡೆಸುತ್ತಿದ್ದ ವೇಳೆ ಎಸ್ ಪಿಜಿ ಮತ್ತು ಪೊಲೀಸ್ ಭದ್ರತೆ ಭೇದಿಸಿ ಹಾರ ಹಾಕಲು ಯತ್ನಿಸಿದ್ದ ಬಾಲಕನು, ಮೋದಿ ಎಂದರೆ ನನಗೆ ಬಹಳ ಇಷ್ಟ. ಹೀಗಾಗಿ ಅವರನ್ನು ಪ್ರೀತಿಯಿಂದ ನೋಡೋಕೆ ಹೋಗಿದ್ದೆ ಎಂದು ಹೇಳಿಕೊಂಡಿದ್ದಾನೆ.
ಪ್ರಧಾನಿ ಮೋದಿ ರೋಡ್ ಶೋ ವೇಳೆ ಮಾರ್ಗ ಮಧ್ಯೆ ಇಲ್ಲಿನ ಗೋಕುಲ ರಸ್ತೆ ಕೆಎಸ್ ಆರ್ ಟಿಸಿ ಕ್ವಾರ್ಟರ್ಸ್ ಬಳಿ ತೊರವಿ ಹಕ್ಕಲದ 11ವರ್ಷದ ಬಾಲಕ ಕುನಾಲ್ ಭದ್ರತೆ ಭೇದಿಸಿ ಪ್ರಧಾನಿ ಮೋದಿಗೆ ಹಾರ ಹಾಕೋಕೆ ಹೋಗಿದ್ದ. ಎಸ್ಪಿಜಿ ಸಿಬ್ಬಂದಿ ತಡೆದು ಕಳುಹಿಸಿದ್ದರು.
6ನೇ ತರಗತಿ ಓದುತ್ತಿರುವ ಕುನಾಲ್ ಮೋದಿ ನೋಡಲೆಂದು ಅಜ್ಜ, ಮಾವ ಹಾಗೂ ಎರಡೂವರೆ ವರ್ಷದ ಮಗುವಿನೊಂದಿಗೆ ಹೋಗಿದ್ದ.
ಇದನ್ನೂ ಓದಿ:ಶಿವಮೊಗ್ಗದ ಅಕ್ರಮ ಕಸಾಯಿಖಾನೆಯಲ್ಲಿ 7 ಹಸುಗಳ ಕತ್ತು ಕೊಯ್ದು ಬರ್ಬರ ಹತ್ಯೆ
ನಾನು ಅವರಿಗೆ ಹ್ಯಾಂಡ್ ಶೇಕ್ ಮಾಡಬೇಕು ಎಂದಿದ್ದೆ. ಮೋದಿ ಅವರ ಮೇಲೆ ನನಗೆ ಬಹಳ ಅಭಿಮಾನವಿದೆ. ನಾನು ಎಂಟು ವರ್ಷವಿದ್ದಾಗ ಅವರನ್ನು ಗೋಕುಲ ರಸ್ತೆಯಲ್ಲಿ ನೋಡಿದ್ದೆ. ಆಗ ಅವರನ್ನು ದೂರದಿಂದ ನೋಡಿದ್ದೆ. ಶೇಕ್ ಹ್ಯಾಂಡ್ ಮಾಡಲೆಂದು ಬ್ಯಾರಿಕೇಡ್ ಮಧ್ಯೆ ಹೋಗಿ ಹಾರ ಹಾಕಲು ಹೋಗಿದ್ದೆ. ಆ ಸಮಯದಲ್ಲಿ ಪೊಲೀಸರು ನನ್ನನ್ನು ಹಿಡಿದುಕೊಂಡರು. ನನಗೆ ಮುಂಚೆಯೇ ಮೋದಿ ಹುಬ್ಬಳ್ಳಿಗೆ ಬರುತ್ತಾರೆ ಅನ್ನೋದು ಗೊತ್ತಿತ್ತು. ಮನೇಲಿ ನಾನು ನೋಡಲು ಹೋಗೋಣ ಎಂದು ಗಂಟು ಬಿದ್ದಿದ್ದೆ. ಅವರ ಬಳಿ ಹೋದಾಗ ನನಗೇನು ಭಯವಾಗಲಿಲ್ಲ. ಇವತ್ತು ಹತ್ತಿರದಿಂದ ನೋಡಿದ್ದು ತುಂಬಾ ಖುಷಿ ತಂದಿದೆ. ಮೋದಿ ಮನುಷ್ಯ ಅಲ್ಲ, ಅವರು ದೇವರು. ಹಾಗಾಗಿ ನಾನು ಅವರನ್ನು ನೋಡಲು ಹೋಗಿದ್ದೆ. ನನಗೆ ಅವರ ಲೆಫ್ಟ್ ಹ್ಯಾಂಡ್ ಟಚ್ ಆಯಿತು. ಅವರೊಂದಿಗೆ ಮಾತನಾಡಬೇಕು ಅಂತಿದೆ. ನಾನು ಅವರನ್ನು ಮನೆಗೆ ಕರೀತಿನಿ ಎಂದ ಬಾಲಕ ಕುನಾಲ್ ಹೇಳಿಕೊಂಡಿದ್ದಾನೆ.