ಎಳವೆಯಿಂದಲೇ ನೀನು ಹುಡುಗ, ನೀನು ಹುಡುಗಿ ಎನ್ನುವ ಗೆರೆಯೊಂದನ್ನು ಪೋಷಕರು ಎಳೆದು ಬಿಡುತ್ತಾರೆ. ಹುಡುಗ ಅಡುಗೆ ಮಾಡಬಾರದು, ಕನ್ನಡಿಯ ಮುಂದೆ ನಿಂತು ಜಾಸ್ತಿ ಡ್ರೆಸ್ ಮಾಡಿಕೊಳ್ಳಬಾರದು, ರಫ್ ಆ್ಯಂಡ್ ಟಫ್ ಆಗಿರಬೇಕು, ಮಗಳು ಮನೆಗೆಲಸದಲ್ಲಿ ಸಹಾಯ ಮಾಡಬೇಕು… ಹೀಗೆ. ಹೆಣ್ಣನ್ನು ಹೇಗೆ ಮನೆಯಲ್ಲಿ ತಿದ್ದಿ ತೀಡುತ್ತಾರೋ, ಬಾಲ್ಯದಿಂದಲೇ ಗಂಡು ಮಕ್ಕಳಿಗೂ ಅದು ಅನ್ವಯಿಸಬೇಕು…
ಮೊನ್ನೆ ಫ್ಯಾನ್ಸಿ ಸ್ಟೋರ್‌ನಲ್ಲಿ ಏನೋ ಖರೀದಿಸಲು ಹೋಗಿದ್ದೆ. ಸಣ್ಣ ಹುಡುಗನೊಬ್ಬ ಅಮ್ಮನ ಕೈ ಹಿಡಿದು, ನಡೆದು ಬಂದ. ಅಂಗಡಿಯ ತುಂಬೆಲ್ಲಾ ಓಡಾಡಿದ ಅವನು, ಬಾರ್ಬಿ ಗೊಂಬೆಯ ಬಳಿ ನಿಂತು, “ಅಮ್ಮಾ, ಇದು ಕೊಡಿಸು’ ಎಂದ. ಅವರಮ್ಮ “ಅದು ಹುಡುಗಿಯರ ಗೊಂಬೆ ಕಣೋ, ನೀನು ಈ ಕಾರ್ ತಗೋ’ ಎಂದು ಪಕ್ಕದಲ್ಲಿದ್ದ ಕಾರಿನ ಆಟಿಕೆಯನ್ನು ತೋರಿದರು. ಉಹೂಂ, ಅವನಿಗದು ಇಷ್ಟವಾಗಲಿಲ್ಲ. ನಂಗೆ ಇದೇ ಬೇಕು ಅಂತ ಹಠ ಹಿಡಿದು, ಅಳತೊಡಗಿದ. ಅವರಮ್ಮನಿಗೆ ಕೋಪ ಬಂತು, “ಗೊಂಬೆ ಜೊತೆ ಆಡೋಕೆ ನೀನೇನು ಹುಡುಗೀನ? ನಿಂಗೆ ಗೊಂಬೆ ಕೊಡಿಸಲ್ಲ. ಮೊದಲು ಹುಡುಗೀರ ಥರ ಅಳ್ಳೋದನ್ನ ನಿಲ್ಲಿಸು’ ಎಂದು ಗದರಿದರು.
ತಾನೇನೋ ಮಹಾಪರಾಧ ಮಾಡಿಬಿಟ್ಟೆನೇನೋ ಎಂದು ಹೆದರಿ ಆ ಹುಡುಗ ತೆಪ್ಪಗಾದ. ಆಮೇಲೆ ಫ್ಯಾನ್ಸಿ ಅಂಗಡಿಯಲ್ಲೊಮ್ಮೆ ಕಣ್ಣು ಹಾಯಿಸಿದೆ. ಹುಡುಗನಿಗೆ ಕಾರು, ಹುಡುಗಿಗೆ ಬಾರ್ಬಿ ಡಾಲು, ಹುಡುಗನಿಗೆ ಡಾಕ್ಟರ್ ಕಿಟ್, ಹುಡುಗಿಗೆ ಅಡುಗೆ ಸೆಟ್, ಹುಡುಗರ ಆಟಿಕೆಗಳೆಲ್ಲಾ ಕಪ್ಪು, ನೀಲಿ ಬಣ್ಣಗಳಲ್ಲಿ, ಹುಡುಗಿಯರದ್ದೆಲ್ಲಾ ಪಿಂಕ್ ಕಲರ್… ಎಳವೆಯಿಂದಲೇ ನೀನು ಹುಡುಗ, ನೀನು ಹುಡುಗಿ, ಇದನ್ನು ಮಾಡಬಾರದು, ಅದನ್ನು ಮಾಡಬಹುದು ಅಂತೆಲ್ಲಾ ಮಕ್ಕಳಿಗೆ ಕಲಿಸಿ ಬಿಡುತ್ತೇವಲ್ಲ ಅನ್ನಿಸಿತು. ಹುಡುಗ ಅಡುಗೆ ಮಾಡಬಾರದು, ಕನ್ನಡಿಯ ಮುಂದೆ ನಿಂತು ಜಾಸ್ತಿ ಡ್ರೆಸ್ ಮಾಡಿಕೊಳ್ಳಬಾರದು, ರಫ್ ಆ್ಯಂಡ್ ಟಫ್ ಆಗಿರಬೇಕು, ಮಗಳು ಮನೆಗೆಲಸದಲ್ಲಿ ಸಹಾಯ ಮಾಡಬೇಕು. ಮಗನಾದರೆ ಅಪ್ಪನ ಜೊತೆ ಕೂತು ಟಿವಿ ನೋಡಿಕೊಂಡಿರಬಹುದು… ಹೀಗೆ ಎಷ್ಟೊಂದು ರೂಲ್ಸ್‌ಗಳಿವೆಯಲ್ಲ? ಇನ್ನಾದರೂ ಅದನ್ನೆಲ್ಲ ಮುರಿಯಬಾರದೇಕೆ? ಕೆಲವೊಂದು ಸೂಕ್ಷ್ಮ ವಿಷಯಗಳನ್ನು ಬಾಲ್ಯದಿಂದಲೇ ಗಂಡು ಮಕ್ಕಳಿಗೆ ಕಲಿಸಬೇಕು. ಆಗ ಮಾತ್ರ ಅವರು ಸೂಕ್ಷ್ಮ ಸಂವೇದನೆಗಳನ್ನು ಬೆಳೆಸಿಕೊಂಡು, ಉತ್ತಮ ವ್ಯಕ್ತಿತ್ವ ಹೊಂದುತ್ತಾರೆ.
ನಿಮ್ಮ ಮಗನಿಗೆ ಇವನ್ನೆಲ್ಲ ಕಲಿಸಿ…
1. ಶಿಷ್ಟಾಚಾರ ಕಲಿಸಿ
ದನಿಯೇರಿಸಿ ಮಾತಾಡಬೇಡ, ಹಿರಿಯರನ್ನು ಗೌರವಿಸು, ಹೀಗೆ ಕುಳಿತುಕೊಳ್ಳಬೇಡ, ಹೀಗೆ ಬಟ್ಟೆ ಹಾಕಬೇಡ… ಶಿಷ್ಟಾಚಾರದ ಇಂಥ ಪಾಠಗಳು ಕೇವಲ ಮಗಳಿಗಷ್ಟೇ ಅಲ್ಲ, ಮಗನಿಗೂ ಅನ್ವಯಿಸುತ್ತದೆ. ಮಗಳು ಹೇಗೆ ತವರಿನಲ್ಲಿ ಕಲಿತ ಶಿಷ್ಟಾಚಾರವನ್ನು ಗಂಡನ ಮನೆಯಲ್ಲಿ ಪಾಲಿಸುತ್ತಾಳ್ಳೋ, ಹಾಗೆಯೇ ಮಗ ಮನೆಯಲ್ಲಿ ಕಲಿತದ್ದನ್ನೇ ಸಮಾಜದಲ್ಲಿ ಅನುಕರಿಸುವುದಲ್ಲವೆ?
Related Articles
2. ಹುಡುಗನೇಕೆ ಅಳಬಾರದು?
ದುಃಖ, ನೋವು ಎಲ್ಲರಿಗೂ ಆಗುತ್ತದೆ. ಕಣ್ಣೀರು, ಅದನ್ನು ಹೊರಹಾಕುವ ಒಂದು ಮಾರ್ಗ ಅಷ್ಟೇ ಅಂತ ಹುಡುಗರಿಗೆ ಹೇಳಿ. ಭಾವನೆಗಳನ್ನು ತೋರ್ಪಡಿಸದೆ, ಮನಸ್ಸಿನಲ್ಲಿ ಮೂಟೆ ಕಟ್ಟಿಡುವ ಅಗತ್ಯವಿಲ್ಲ ಎಂಬುದು ಅವರಿಗೂ ಅರ್ಥವಾಗಲಿ.
3. ಒಪ್ಪಿಗೆ ಪಡೆಯುವ ಗುಣ ಬೆಳೆಸಿ
ಮಗಳು ಸ್ವಲ್ಪ ಲೇಟಾಗಿ ಬಂದರೆ ರಾದ್ಧಾಂತ ನಡೆಸುವ ಹೆತ್ತವರು, ಮಗ ಮಧ್ಯರಾತ್ರಿ ಮನೆಗೆ ಬಂದರೂ ಏನೂ ಪ್ರಶ್ನಿಸದೆ ಸುಮ್ಮನಿರುತ್ತಾರೆ. ಆಗ ಅವನ ಮನಸ್ಸಿನಲ್ಲಿ, “ನಾನು ಯಾರ ಒಪ್ಪಿಗೆ ಪಡೆಯುವ, ಯಾರಿಗೂ ಉತ್ತರ ನೀಡುವ ಅಗತ್ಯವಿಲ್ಲ’ ಎಂಬ ಮನೋಭಾವ ಬೆಳೆಯಬಹುದು. ಇನ್ಮುಂದೆ ಹಾಗಾಗದಿರಲಿ. ಒಪ್ಪಿಗೆ ಪಡೆದು ಮುಂದಡಿ ಇಡುವ ಗುಣವನ್ನು ಅವನಲ್ಲಿಯೂ ಬೆಳೆಸಿ.
4. ಸ್ವಚ್ಛತೆಯ ಪಾಠ ಕಲಿಯಲಿ
ಎಷ್ಟೋ ಹೆಂಡತಿಯರು ತಮ್ಮ ಗಂಡದಿರ ಸ್ವತ್ಛತೆಯ ಬಗ್ಗೆ ದೂರುತ್ತಾರೆ. ಯಾಕೆಂದರೆ, ಬಾಲ್ಯದಲ್ಲಿ ಅವರು ಮನೆಯ ಕಸ ಗುಡಿಸುವುದಿರಲಿ, ತಮ್ಮ ಕೋಣೆಯನ್ನೂ ಸ್ವತ್ಛ ಮಾಡಿರುವುದಿಲ್ಲ. ಎಲ್ಲವನ್ನೂ ಅವರ ಅಮ್ಮನೇ ನೋಡಿಕೊಂಡಿರುತ್ತಾರೆ. ಹುಡುಗರು ಕಸ ಗುಡಿಸಬಾರದು ಅಂತ ಕೆಲವರು ನಂಬಿರುವುದೇ ಇದಕ್ಕೆ ಕಾರಣ. ಮಗಳಂತೆ ಮಗನಿಗೂ ಸ್ವತ್ಛತೆಯ ಪಾಠ ಎಳವೆಯಿಂದಲೇ ನಡೆಯಲಿ.
5. ಅಡುಗೆ ಕಲಿಸಿ
ಹುಡುಗಿಯರಂತೆ ಹುಡುಗರಿಗೂ ಹಸಿವಾಗುತ್ತದಲ್ಲವೆ? ಹಾಗಾದ್ರೆ ಹುಡುಗರು ಅಡುಗೆ ಮಾಡೋದರಲ್ಲಿ ತಪ್ಪೇನಿದೆ? ಅಡುಗೆ ಕಲಿತವರೆಲ್ಲ ಅಮ್ಮಾವ್ರ ಗಂಡ ಆಗ್ತಾರೆ ಅನ್ನೋ ಕಲ್ಪನೆಯನ್ನು ಬದಿಗಿಟ್ಟು, ಮಗನಿಗೆ ಅಡುಗೆ ಕಲಿಸಿ. ಅಡುಗೆ ಕಲಿತವರು ಎಲ್ಲಿಗೇ ಹೋದರೂ ಸ್ವತಂತ್ರವಾಗಿ ಬದುಕಬಲ್ಲರು.
6. ಹುಡುಗರೂ ಚಂದ ಕಾಣ್ನಕಲ್ವ?
ಮೇಕಪ್, ಸ್ಟೈಲ್ ಎಲ್ಲಾ ಹುಡುಗಿಯರಿಗೆ ಮಾತ್ರ ಅಂದುಕೊಳ್ಳಬೇಡಿ. ಸೌಂದರ್ಯ ಪ್ರಜ್ಞೆ ಅನ್ನೋದು ಹುಡುಗರಿಗೂ ಮುಖ್ಯ. ಯಾವ ಸಂದರ್ಭದಲ್ಲಿ, ಯಾವ ರೀತಿಯ ಬಟ್ಟೆ ಧರಿಸಬೇಕು, ಹೇಗೆ ಕಾಣಿಸಿಕೊಳ್ಳಬೇಕು ಎಂಬ ಅರಿವು ಹುಡುಗರಿಗೂ ಇರಬೇಕು.
7. ಹೊಲಿಗೆ ಕಲಿಯಲಿ
ಗಂಡನ ಅಂಗಿಯ ಬಟನ್ ಹೊಲಿಯುವುದು ಹೆಂಡತಿಯ ಕೆಲಸ ಎಂಬಂತೆ ಸಿನಿಮಾಗಳಲ್ಲಿ ತೋರಿಸುತ್ತಾರೆ. ಆದರೆ, ಯಾವುದೋ ಮುಖ್ಯ ಕೆಲಸಕ್ಕೆ ಹೋಗುವಾಗ ಕೋಟ್‌ನ ಗುಂಡಿ ಕಿತ್ತು ಹೋದರೆ, ಕನಿಷ್ಠ ಅದನ್ನು ಹೊಲಿದುಕೊಳ್ಳುವುದು ಹುಡುಗನಿಗೆ ಗೊತ್ತಿರಬೇಕಲ್ವಾ? ಇನ್ಮುಂದೆ ಅಂಗಿ ಗುಡಿಯನ್ನು ಮಗನೇ ಹೊಲಿದುಕೊಳ್ಳಲಿ ಬಿಡಿ.
8. ಸ್ತ್ರೀಯರನ್ನು ಗೌರವಿಸಲು ಕಲಿಸಿ
ಸ್ತ್ರೀಯರನ್ನು ಗೌರವಿಸುವ ಪಾಠ ಮನೆಯಲ್ಲಿಯೇ ನಡೆಯಬೇಕು. ಅಮ್ಮ, ಅಕ್ಕ, ತಂಗಿಯರನ್ನು ಗೌರವಿಸುವುದನ್ನು ಕಲಿತ ಹುಡುಗರು ಮುಂದೆ ತಮ್ಮ ಬದುಕಿನಲ್ಲಿ ಬರುವ ಎಲ್ಲ ಹೆಣ್ಮಕ್ಕಳನ್ನೂ ಗೌರವದಿಂದ ನಡೆಸಿಕೊಳ್ಳುತ್ತಾರೆ.
9. ಗುಡ್ ಟಚ್, ಬ್ಯಾಡ್ ಟಚ್
ಲೈಂಗಿಕ ದೌರ್ಜನ್ಯಗಳು ಹುಡುಗರ ಮೇಲೆಯೂ ನಡೆಯಬಹುದು. ಹೇಗೆ ನಿಮ್ಮ ಮಗಳಿಗೆ ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ಅರಿವು ಮೂಡಿಸುತ್ತೀರೋ, ಮಗನಿಗೂ ಅದನ್ನು ತಿಳಿಸಿ ಕೊಡಿ. ದೌರ್ಜನ್ಯ ನಡೆದರೆ ಯಾವ ಮುಚ್ಚು ಮರೆ ಇಲ್ಲದೆ ಅದನ್ನು ಹೇಳಿಕೊಳ್ಳುವ ಧೈರ್ಯವನ್ನೂ ಅವನಲ್ಲಿ ಮೂಡಿಸಿ.
ಪ್ರಿಯಾಂಕ