ಟೋಕಿಯೊ: ಜಪಾನಿನ ಮೆನ್ಸಾಹ್ ಒಕಾಜಾವ ವಿರುದ್ಧ ಹೋರಾಡುತ್ತಿದ್ದ ವೇಳೆ ಎಡಕಣ್ಣಿನ ಮೇಲ್ಭಾಗದಲ್ಲಿ ಬಲವಾದ ಏಟು ಅನುಭವಿಸಿದ ಭಾರತದ ಬಾಕ್ಸರ್ ವಿಕಾಸ್ ಕೃಷ್ಣನ್ ಶೋಚನೀಯ ಸೋಲನುಭವಿಸಿ ಕೂಟದಿಂದ ಹೊರಬಿದ್ದಿದ್ದಾರೆ. 69 ಕೆಜಿ ವಿಭಾಗದ ಈ ಸ್ಪರ್ಧೆಯಲ್ಲಿ ವಿಕಾಸ್ 0-5ರಿಂದ ಪರಾಭವಗೊಂಡರು.
ಸ್ಪರ್ಧೆಯ ಕೊನೆಯ ಹಂತದಲ್ಲಿ ವಿಕಾಸ್‌ಗೆ ಏಟು ಬಿತ್ತು. ರಕ್ತ ಚಿಮ್ಮಿತು. ಆದರೆ ಅವರಿಗೇನೂ ಅಪಾಯವಾಗಿಲ್ಲ ಎಂದು ಅಧಿಕಾರಿ ಸ್ಯಾಂಟಿಯಾಗೊ ನೀವ ತಿಳಿಸಿದ್ದಾರೆ.
ವಿಕಾಸ್ ಕೃಷ್ಣನ್ ಸಂಪೂರ್ಣ ಫಿಟ್‌ನೆಸ್ ಹೊಂದಿರಲಿಲ್ಲ. ಕೆಲವು ದಿನಗಳಿಂದ ಭುಜದ ನೋವು ಕಾಡುತ್ತಿತ್ತು. ಶನಿವಾರದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದಿಂದ ವಿಕಾಸ್ ಮಾತ್ರ ಕಣದಲ್ಲಿದ್ದರು. ಕಳೆದ ವರ್ಷದ ಏಶ್ಯನ್ ಒಲಿಂಪಿಕ್ ಅರ್ಹತಾ ಸುತ್ತಿನಲ್ಲಿ ಒಕಾಜಾವ ವಿರುದ್ಧ ವಿಕಾಸ್ ಜಯ ಸಾಧಿಸಿದ್ದರು.
ಇದನ್ನೂ ಓದಿ : ಟೆನಿಸ್ ಸಿಂಗಲ್ಸ್ : ಸುಮಿತ್ ನಾಗಲ್ ಮೊದಲ ನಗು
**
ಶೂಟಿಂಗ್: ಏಳಕ್ಕೆ ಇಳಿದ ಸೌರಭ್ ಚೌಧರಿ
ಟೋಕಿಯೊ: ಪದಕ ಭರವಸೆಯ ಶೂಟರ್ ಸೌರಭ್ ಚೌಧರಿ ತಮ್ಮ ಫಾರ್ಮ್ ತೋರ್ಪಡಿಸಲು ವಿಫಲರಾಗಿ ನಿರಾಸೆ ಮೂಡಿಸಿದ್ದಾರೆ. 10 ಮೀ. ಏರ್ ಪಿಸ್ತೂಲ್ ಫೈನಲ್‌ನಲ್ಲಿ 7ನೇ ಸ್ಥಾನಕ್ಕೆ ಇಳಿದರು. ಗಳಿಸಿದ ಅಂಕ 137.4
“ಅಸಾಕ ರೇಂಜ್’ನಲ್ಲಿ ಸಾಗಿದ ಅರ್ಹತಾ ಸುತ್ತಿನಲ್ಲಿ ಅಗ್ರ ಸ್ಥಾನ ಅಲಂಕರಿಸಿದರೂ ಫೈನಲ್‌ನಲ್ಲಿ ಆರಂಭಿಕ ವೈಫಲ್ಯ ಅನುಭವಿಸಿದರು. ಮೊದಲ 5 ಶಾಟ್‌ಗಳ ಬಳಿಕ ಕೇವಲ 47.7 ಅಂಕ ಸಂಪಾದಿಸಿ 8ನೇ ಸ್ಥಾನಕ್ಕೆ ಕುಸಿ ದರು. ಏಶ್ಯನ್ ಗೇಮ್ಸ್ ಹಾಗೂ ಯುತ್ ಒಲಿಂಪಿಕ್ಸ್ ನಲ್ಲಿ ಬಂಗಾರ ಜಯಿಸಿದ್ದ ಸೌರಭ್, 12 ಶಾಟ್‌ಗಳ ಬಳಿಕ ಆರಕ್ಕೆ ಏರಿದರು (117.2). ಮೊದಲ ಎಲಿಮಿನೇಶನ್ ಸುತ್ತಿನಿಂದ ನಿರ್ಗಮಿಸದಿದ್ದುದೇ ಸೌರಭ್ ಸಾಧನೆ ಎನಿಸಿತು.