ಬೆಂಗಳೂರು: ಅಖಾಡಕ್ಕೆ ಮರಳಿದ ವಿಕಾಸ್ ಕೃಷ್ಣನ್ ಸಾಹಸದಿಂದ ಭಾರತದ ಪುರುಷರ ಬಾಕ್ಸಿಂಗ್ ತಂಡ ಟೋಕಿಯೊ ಒಲಿಂಪಿಕ್ಸ್ ಅರ್ಹತಾ ಸುತ್ತು ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಸೋಮವಾರ ನಡೆದ ಕೊನೆಯ ಟ್ರಯಲ್ ಬೌಟ್‌ನಲ್ಲಿ ವಿಕಾಸ್ ಕೃಷ್ಣನ್ ಸಹಿತ ಮೂರು ಮಂದಿ ಗೆಲುವು ಸಾಧಿಸಿದರು.
ಮಾಜಿ ವಿಶ್ವ ಚಾಂಪಿಯನ್ ಹಾಗೂ ಏಶ್ಯನ್ ಗೇಮ್ಸ್ ಪದಕ ವಿಜೇತ ವಿಕಾಸ್ ಕೃಷ್ಣನ್ 69 ಕೆಜಿ ಮಿಡ್ಲ್ವೇಟ್ ವಿಭಾಗದಲ್ಲಿ ದುರ್ಯೋಧನ್ ಸಿಂಗ್ ನೇಗಿ ಅವರನ್ನು ಪರಾಭವಗೊಳಿಸಿದರು. ಗೆಲುವು ಸಾಧಿಸಿದ ಉಳಿದಿಬ್ಬರೆಂದರೆ ಗೌರವ್ ಸೋಲಂಕಿ (57 ಕೆಜಿ) ಮತ್ತು ನಮನ್ ತನ್ವರ್ (91 ಕೆಜಿ). ಇವರಿಬ್ಬರು ಕ್ರಮವಾಗಿ ಮೊಹಮ್ಮದ್ ಹುಸಮುದ್ದೀನ್ ಮತ್ತು ನವೀನ್ ಕುಮಾರ್ ಅವರನ್ನು ಪರಾಭವಗೊಳಿಸಿದರು.
ಏಶ್ಯ/ಓಶಿಯಾನಿಯ ವಲಯ ಮಟ್ಟದ ಒಲಿಂಪಿಕ್ಸ್ ಅರ್ಹತಾ ಸ್ಪರ್ಧೆ ಫೆ. 3ರಿಂದ 14ರ ತನಕ ಚೀನದ ವುಹಾನ್‌ನಲ್ಲಿ ನಡೆಯಲಿದೆ.
“ವಿಕಾಸ್ ಮೇಲೆ ನಾವು ಭಾರೀ ಭರವಸೆ ಇರಿಸಿದ್ದೇವೆ. ಹಾಗೆಯೇ ಗೌರವ್ ಸೋಲಂಕಿ ಕೂಡ ಉತ್ತಮ ಲಯದಲ್ಲಿದ್ದಾರೆ. ಅವರು ಹುಸಮುದ್ದೀನ್ ವಿರುದ್ಧ ಹೇಗೆ ಮೇಲೆದ್ದು ಬಂದರು ನೋಡಿ…’ ಎಂದು ಭಾರತೀಯ ಬಾಕ್ಸಿಂಗ್ ಪರ್ಫಾರ್ಮೆನ್ಸ್ ಡೈರೆಕ್ಟರ್ ಸ್ಯಾಂಟಿಯಾಗೊ ನೀವ ಹೇಳಿದ್ದಾರೆ.
ರವಿವಾರದ ಸ್ಪರ್ಧೆಯಲ್ಲಿ ಗೆದ್ದ ಆಶಿಷ್ ಕುಮಾರ್ (75 ಕೆಜಿ), ಸತೀಶ್ ಕುಮಾರ್ (+91 ಕೆಜಿ) ಮತ್ತು ಸಚಿನ್ ಕುಮಾರ್ (81 ಕೆಜಿ) ಕೂಡ ಏಶ್ಯ/ಓಶಿಯಾನಿಯ ತಂಡಕ್ಕೆ ಆಯ್ಕೆಯಾಗಿದ್ದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಜಯಿಸಿದ ಅಮಿತ್ ಪಂಘಲ್ (52 ಕೆಜಿ) ಮತ್ತು ಮನೀಷ್ ಕೌಶಿಕ್ (63 ಕೆಜಿ) ಈಗಾಗಲೇ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಏಶ್ಯ-ಓಶಿಯಾನಿಯ ಒಲಿಂಪಿಕ್ ಕ್ವಾಲಿಫೈಯರ್‌ಗೆ ಭಾರತ ತಂಡ ಅಮಿತ್ ಪಂಘಲ್ (52 ಕೆಜಿ), ಗೌರವ್ ಸೋಲಂಕಿ (57 ಕೆಜಿ), ಮನೀಷ್ ಕೌಶಿಕ್ (63 ಕೆಜಿ), ವಿಕಾಸ್ ಕೃಷ್ಣನ್ (69 ಕೆಜಿ), ಆಶಿಷ್ ಕುಮಾರ್ (75 ಕೆಜಿ), ಸಚಿನ್ ಕುಮಾರ್ (81 ಕೆಜಿ), ನಮನ್ ತನ್ವರ್ (91 ಕೆಜಿ), ಸತೀಶ್ ಕುಮಾರ್ (+91 ಕೆಜಿ).