Advertisement

ಬಾಕ್ಸಿಂಗ್‌ ಹೀರೋ ಡಿಂಕೊ ಕೊನೆಯುಸಿರು

09:51 PM Jun 10, 2021 | Team Udayavani |

ಹೊಸದಿಲ್ಲಿ: ಒಂದು ಪೀಳಿಗೆಗೆ ಸ್ಫೂರ್ತಿಯಾಗಿದ್ದ ಬಾಕ್ಸಿಂಗ್‌ ಹೀರೋ ಡಿಂಕೊ ಸಿಂಗ್‌ ಗುರುವಾರ ಕೊನೆಯುಸಿರೆಳೆದರು. ಕಳೆದ 4 ವರ್ಷಗಳಿಂದ ಅವರು ಲಿವರ್‌ ಕ್ಯಾನ್ಸರ್‌ ವಿರುದ್ಧ ಹೋರಾಟ ನಡೆಸುತ್ತಿದ್ದರು. “ಕ್ಯಾನ್ಸರ್‌ ಅಖಾಡ’ದಲ್ಲಿ ಗೆದ್ದು ಬರಲು ಅವರಿಂದ ಸಾಧ್ಯವಾಗಲಿಲ್ಲ. ಕೇವಲ 42 ವರ್ಷ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದರು.

Advertisement

ಡಿಂಕೊ ಸಿಂಗ್‌ 1979ರ ಜನವರಿ ಒಂದರಂದು ಮಣಿಪುರದಲ್ಲಿ ಜನಿಸಿದ್ದರು. ಬಾಂಟಮ್‌ವೇಟ್‌ (54 ಕೆ.ಜಿ.) ಬಾಕ್ಸರ್‌ ಆಗಿದ್ದ ಅವರಲ್ಲಿ 4 ವರ್ಷಗಳ ಹಿಂದೆ ಕ್ಯಾನ್ಸರ್‌ ಪತ್ತೆಯಾಗಿತ್ತು. ಕಳೆದ ವರ್ಷ ಕೊರೊನಾ ಮತ್ತು ಜಾಂಡಿಸ್‌ಗೆ ಸಡ್ಡು ಹೊಡೆದು ಗೆದ್ದು ಬಂದಿದ್ದರು.

16 ವರ್ಷ ಬಳಿಕ ಬಂಗಾರ :

1998ರ ಬ್ಯಾಂಕಾಕ್‌ ಏಶ್ಯಾಡ್‌ನ‌ಲ್ಲಿ ಚಿನ್ನ ಗೆದ್ದದ್ದು ಡಿಂಕೊ ಸಿಂಗ್‌ ಅವರ ಮಹಾನ್‌ ಸಾಧನೆಯಾಗಿದೆ. 16 ವರ್ಷಗಳ ಬಳಿಕ ಅವರು ಭಾರತಕ್ಕೆ ಏಶ್ಯಾಡ್‌ ಬಾಕ್ಸಿಂಗ್‌ ಸ್ವರ್ಣ ತಂದಿತ್ತಿ ದ್ದರು. ಚಿನ್ನದ ಹಾದಿಯಲ್ಲಿ ಅವರು ಇಬ್ಬರು ಒಲಿಂಪಿಕ್‌ ಪದಕ ವಿಜೇತರನ್ನು ಮಣಿಸಿ ಮೆರೆದಿದ್ದರು. 1982ರಲ್ಲಿ ಕೌರ್‌ ಸಿಂಗ್‌ ಅವರ ಏಶ್ಯಾಡ್‌ ಸ್ವರ್ಣ ಸಾಧನೆ ಬಳಿಕ ಡಿಂಕೊ ಸಿಂಗ್‌ ಬಂಗಾರ ಬೇಟೆಯಾಡಿದ್ದರು.

ಪದ್ಮಶ್ರೀ, ಅರ್ಜುನ ಗೌರವ :

Advertisement

ನಿರ್ಭೀತ ಬಾಕ್ಸರ್‌ ಆಗಿದ್ದ ಡಿಂಕೊ ಸಿಂಗ್‌ ಅವರಿಗೆ ಏಶ್ಯಾಡ್‌ ಸಾಧನೆಯ ಬೆನ್ನಲ್ಲೇ ಅರ್ಜುನ ಪ್ರಶಸ್ತಿ ಒಲಿದು ಬಂತು. 2013ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. 2000ದ ಸಿಡ್ನಿ ಒಲಿಂಪಿಕ್ಸ್‌ನಲ್ಲೂ ದೇಶವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಇವರದಾಗಿದೆ. ಇಲ್ಲಿ ಪ್ರಿ-ಕ್ವಾರ್ಟರ್‌ ಫೈನಲ್‌ ಗಡಿ ದಾಟಲು ಅವರಿಂದ ಸಾಧ್ಯವಾಗಲಿಲ್ಲ.”ಇಂಡಿಯನ್‌ ನೇವಿ’ಯಲ್ಲಿ ಉದ್ಯೋಗಿಯಾಗಿದ್ದ ಡಿಂಕೊ ಸಿಂಗ್‌, ಇಂಫಾಲದ ಸಾಯ್‌ ಕೇಂದ್ರದಲ್ಲಿ ಕೋಚಿಂಗ್‌ ಕೂಡ ನೀಡಲಾರಂಭಿಸಿದ್ದರು.

ಆತ್ಮಹತ್ಯೆಯ ಬೆದರಿಕೆ! : ಇಲ್ಲೊಂದು ಸ್ವಾರಸ್ಯಕರ ಸಂಗತಿನ ಇದೆ. ಬ್ಯಾಂಕಾಕ್‌ ಏಶ್ಯಾಡ್‌ಗೆ ಆಯ್ಕೆಯಾದ ಬಾಕ್ಸರ್‌ಗಳ ಮೂಲ ಯಾದಿಯಲ್ಲಿ ಡಿಂಕೊ ಸಿಂಗ್‌ ಹೆಸರಿರಲಿಲ್ಲ. ಇದು 19 ವರ್ಷದ ಡಿಂಕೊ ಅವರನ್ನು ಕೆರಳಿಸಿತು. ಅವರು ಆತ್ಮಹತ್ಯೆಯ ಬೆದರಿಕೆಯೊಡ್ಡಿದರು. ಇದಕ್ಕೆ ಆಯ್ಕೆಗಾರರು ಮಣಿಯಲೇ ಬೇಕಾಯಿತು. ಆಯ್ಕೆಗೆ ನ್ಯಾಯ ಸಲ್ಲಿಸಿದ ಡಿಂಕೊ ಬಂಗಾರಕ್ಕೆ ಕೊರಳೊಡ್ಡುವ ಮೂಲಕ ನೂತನ ಇತಿಹಾಸವನ್ನೇ ಬರೆದರು.
10 ವರ್ಷ ವಯಸ್ಸಿನಲ್ಲೇ ಸಬ್‌ ಜೂನಿಯರ್‌ ನ್ಯಾಶನಲ್‌ ಚಾಂಪಿಯನ್‌ ಆಗಿದ್ದ ಹೆಗ್ಗಳಿಕೆ ಇವರದಾಗಿತ್ತು. ಎಂ.ಸಿ. ಮೇರಿ ಕೋಮ್‌ ಮೊದಲಾದವರಿಗೆ ಡಿಂಕೊ ಸ್ಫೂರ್ತಿಯಾಗಿದ್ದರು.

“ಯಾವ ಕಾರಣಕ್ಕೂ ನಾನು ಎದುರಾಳಿಯನ್ನು ಬಿಟ್ಟು ಕೊಡುವುದಿಲ್ಲ. ಲಡ್ನಾ ಹೈ ತೋ ಲಡ್ನಾ ಹೈ… ಇದು ನನ್ನ ಸಿದ್ಧಾಂತ’ ಎಂದು ಡಿಂಕೊ ಸಿಂಗ್‌ ಯಾವತ್ತೂ ಹೇಳುತ್ತಿದ್ದರು. ಅಂತೆಯೇ ಸಾಧಿಸಿ ತೋರಿಸಿದರು.

ಡಿಂಕೊ ಸಿಂಗ್‌ ಓರ್ವ ನ್ಪೋರ್ಟಿಂಗ್‌ ಸೂಪರ್‌ಸ್ಟಾರ್‌, ಅಸಾಮಾನ್ಯ ಬಾಕ್ಸರ್‌ ಆಗಿದ್ದರು. ಅವರ ಅಗಲಿಕೆ ನೋವಿನ ಸಂಗತಿ. – ನರೇಂದ್ರ ಮೋದಿ

ಭಾರತೀಯ ಬಾಕ್ಸಿಂಗ್‌ ಚರಿತ್ರೆಯ ಸರ್ವಶ್ರೇಷ್ಠ ಸಾಧಕ. – ಕಿರಣ್‌ ರಿಜಿಜು

ಅವರೋರ್ವ ಲೆಜೆಂಡ್‌. ನನ್ನ ಹೀರೋ, ನನ್ನ ಸ್ಫೂರ್ತಿ.– ಮೇರಿ ಕೋಮ್‌

Advertisement

Udayavani is now on Telegram. Click here to join our channel and stay updated with the latest news.

Next