Advertisement
ಜತೆಗೆ ಇವರ ಜತೆಗಾರ, ಕರ್ನಾಟಕದ ಮತ್ತೋರ್ವ ಓಪನರ್ ಮಾಯಾಂಕ್ ಅಗರ್ವಾಲ್ ಕೂಡ ಸೊಗಸಾದ ಆಟವಾಡಿ ದ್ದಾರೆ. ಇವರರಿಬ್ಬರ ಸಾಹಸದಿಂದ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಯಶಸ್ವಿಯಾಗಿಯೇ ಆರಂಭಿಸಿರುವ ಭಾರತ, ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ 3 ವಿಕೆಟಿಗೆ 272 ರನ್ ಗಳಿಸಿ ಮೊದಲ ದಿನ ಗೌರವ ಸಂಪಾದಿಸಿದೆ. ಇದರಲ್ಲಿ ರಾಹುಲ್ ಕೊಡುಗೆ ಅಜೇಯ 122.
Related Articles
Advertisement
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದು ಕೊಂಡದ್ದು ಕ್ಯಾಪ್ಟನ್ ಕೊಹ್ಲಿಯ ದಿಟ್ಟ ನಿರ್ಧಾರವೆನಿಸಿತು. ಇದನ್ನು ಕರ್ನಾಟಕದ ಆರಂಭಿಕರಾದ ಮಾಯಾಂಕ್ ಅಗರ್ವಾಲ್ ಮತ್ತು ನೂತನ ಉಪನಾಯಕ ಕೆ.ಎಲ್. ರಾಹುಲ್ ಸೇರಿಕೊಂಡು ಭರ್ಜರಿಯಾಗಿ ಸಮರ್ಥಿಸ ತೊಡಗಿದರು. ಹರಿಣಗಳ ವೇಗದ ಬೌಲಿಂಗ್ ಆಕ್ರಮಣಕ್ಕೆ ಎದೆಯೊಡ್ಡಿ ನಿಂತ ಇವರು ಮೊದಲ ಅವಧಿಯನ್ನು ಸಂಪೂರ್ಣವಾಗಿ ತಮ್ಮ ಆಟಕ್ಕೆ ಬಳಸಿಕೊಂಡರು. ಲಂಚ್ ವೇಳೆ ಭಾರತ ವಿಕೆಟ್ ನಷ್ಟವಿಲ್ಲದೆ 83 ರನ್ ಪೇರಿಸಿ ಉತ್ತಮ ಆರಂಭದ ಸೂಚನೆ ನೀಡಿತು.
ನ್ಯೂಜಿಲ್ಯಾಂಡ್ ಎದುರಿನ ತವರಿನ ಸರಣಿಯ ಫಾರ್ಮನ್ನೇ ಮುಂದುವರಿಸಿದ ಅಗರ್ವಾಲ್ ಬಿಂದಾಸ್ ಆಗಿ ಬ್ಯಾಟ್ ಬೀಸಿದರೆ, ರಾಹುಲ್ ತೀವ್ರ ಎಚ್ಚರಿಕೆಯಿಂದ ಇನ್ನಿಂಗ್ಸ್ ಕಟ್ಟ ತೊಡಗಿದರು. ಮೊದಲ ಟೆಸ್ಟ್ ಆಡುತ್ತಿದ್ದ ಎಡಗೈ ಸ್ಪಿನ್ನರ್ ಮಾರ್ಕೊ ಜಾನ್ಸೆನ್ ಅವರ ಮೊದಲ ಓವರ್‌ನಲ್ಲೇ 3 ಬೌಂಡರಿ ಸಿಡಿಸಿದ್ದು ಅಗರ್ವಾಲ್ ಆಕ್ರಮಣಕ್ಕೆ ಸಾಕ್ಷಿಯಾಗಿತ್ತು. ಆದರೆ ಇವರ ಎಸೆತದಲ್ಲೇ ಅಗರ್ವಾಲ್‌ಗೆ ಲೈಫ್ ಒಂದು ಸಿಕ್ಕಿತು. 36 ರನ್ ಮಾಡಿದ್ದಾಗ ಕೀಪರ್ ಡಿ ಕಾಕ್ ಕ್ಯಾಚ್ ಕೈಚೆಲ್ಲಿದರು.
ಅಗರ್ವಾಲ್-ರಾಹುಲ್ 40.2 ಓವರ್‌ಗಳಲ್ಲಿ 117 ರನ್ ಪೇರಿಸಿದರು. ಆಗ ಲುಂಗಿ ಎನ್‌ಗಿಡಿ ಮೊದಲ ಬ್ರೇಕ್ ಒದಗಿಸಿದರು. 60 ರನ್ ಮಾಡಿದ ಅಗರ್ವಾಲ್ (123 ಎಸೆತ, 9 ಬೌಂಡರಿ) ಅವರನ್ನು ಲೆಗ್ ಬಿಫೋರ್ ಬಲೆಗೆ ಬೀಳಿಸಿದರು. ಇದು ಅವರ 6ನೇ ಟೆಸ್ಟ್ ಫಿಫ್ಟಿ. ಮುಂದಿನ ಎಸೆತದಲ್ಲೇ ಪೂಜಾರ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. “ಟೆಸ್ಟ್ ಸ್ಪೆಷಲಿಸ್ಟ್’ ಬ್ಯಾಟ್ಸ್‌ಮನ್ ಇಲ್ಲಿ ಗೋಲ್ಡನ್ ಡಕ್ ಅವಮಾನಕ್ಕೆ ಸಿಲುಕಿದರು. ಕೊಹ್ಲಿ ಆಫ್ರಿಕನ್ ವೇಗಿಗೆ ಹ್ಯಾಟ್ರಿಕ್ ನಿರಾಕರಿಸಿದರು. ಟೀ ಬ್ರೇಕ್ ವೇಳೆ ಭಾರತ 2ಕ್ಕೆ 157 ರನ್ ಮಾಡಿತ್ತು.
ಪೂಜಾರ ಕಳೆದ ಸಲದ ಸೆಂಚುರಿಯನ್ ಟೆಸ್ಟ್ ಪಂದ್ಯದಲ್ಲೂ ಮೊದಲ ಎಸೆತದಲ್ಲೇ ಔಟಾಗಿದ್ದರು. ಅಂದು ಕೂಡ ಎನ್‌ಗಿಡಿ ಪಾತ್ರವಿತ್ತು. ಅವರಿಂದಾಗಿಯೇ ಪೂಜಾರ ರನೌಟ್ ಆಗಿದ್ದರು!
ಕಳೆದ ಕೆಲವು ಸಮಯದಿಂದ ದೊಡ್ಡ ಇನ್ನಿಂಗ್ಸ್ ಕಟ್ಟದ ನಾಯಕ ವಿರಾಟ್ ಕೊಹ್ಲಿ ಇಲ್ಲಿಯೂ ಭಾರೀ ಯಶಸ್ಸು ಕಾಣಲಿಲ್ಲ. 94 ಎಸೆತ ಎದುರಿಸಿ 35 ರನ್ ಹೊಡೆದರು. ಈ ವಿಕೆಟ್ ಕೂಡ ಎನ್‌ಗಿಡಿ ಪಾಲಾಯಿತು.
3ನೇ ಶತಕದ ಜತೆಯಾಟ : ರಾಹುಲ್-ಅಗರ್ವಾಲ್ ಜೋಡಿಯಿಂದ 34.3 ಓವರ್‌ಗಳಲ್ಲಿ 100 ರನ್ ಜತೆಯಾಟ ಪೂರ್ತಿಗೊಂಡಿತು. ಇದು ದಕ್ಷಿಣ ಆಫ್ರಿಕಾ ನೆಲದ ಟೆಸ್ಟ್ ಪಂದ್ಯಗಳಲ್ಲಿ ಭಾರತದ ಆರಂಭಿಕ ಜೋಡಿ ದಾಖಲಿಸಿದ 3ನೇ ಶತಕದ ಜತೆಯಾಟ. 2007ರ ಕೇಪ್‌ಟೌನ್ ಟೆಸ್ಟ್ ಪಂದ್ಯದಲ್ಲಿ ವಾಸಿಮ್ ಜಾಫರ್-ದಿನೇಶ್ ಕಾರ್ತಿಕ್ 153 ರನ್, 2010ರ ಸೆಂಚುರಿಯನ್ ಪಂದ್ಯದಲ್ಲಿ ವೀರೇಂದ್ರ ಸೆಹವಾಗ್-ಗೌತಮ್ ಗಂಭೀರ್ 137 ರನ್ ಪೇರಿಸಿದ್ದರು.