Advertisement
64,876 ವೀಕ್ಷಕರಿಗೆ ಸಾಕ್ಷಿಯಾದ ಮೊದಲ ದಿನದಾಟ ಭಾರೀ ಏರಿಳಿತ ಕಂಡಿತು. ಒಮ್ಮೆ ಕುಸಿತದಿಂದ ಚೇತರಿಸಿಕೊಂಡ ದಕ್ಷಿಣ ಆಫ್ರಿಕಾ, ಎರಡನೇ ಹಂತದ ಕುಸಿತದಿಂದ ಮೇಲೇಳಲೇ ಇಲ್ಲ. ಈ ಉರುಳುವಿಕೆ ಎಷ್ಟು ತೀವ್ರವಾಗಿತ್ತೆಂದರೆ, ಅವರ ಕೊನೆಯ 5 ವಿಕೆಟ್ ಬರೀ 10 ರನ್ ಅಂತರದಲ್ಲಿ ಹಾರಿಹೋಯಿತು!
Related Articles
Advertisement
ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯ ಉಸ್ಮಾನ್ ಖ್ವಾಜಾ (1) ಅವರನ್ನು ಬೇಗನೇ ಕಳೆದುಕೊಂಡಿತು. 100ನೇ ಟೆಸ್ಟ್ ಆಡುತ್ತಿರುವ ಡೇವಿಡ್ ವಾರ್ನರ್ 32 ರನ್ ಹಾಗೂ ಮಾರ್ನಸ್ ಲಬುಶೇನ್ 5 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಡೇವಿಡ್ ವಾರ್ನರ್ “ಟೆಸ್ಟ್ ಶತಕ’
ಆಸ್ಟ್ರೇಲಿಯದ ಎಡಗೈ ಆರಂಭಕಾರ ಡೇವಿಡ್ ವಾರ್ನರ್ ಪಾಲಿಗೆ “ಬಾಕ್ಸಿಂಗ್ ಡೇ ಟೆಸ್ಟ್’ ಅತ್ಯಂತ ವಿಶೇಷವಾಗಿತ್ತು. ಇದು ಅವರ ಟೆಸ್ಟ್ ಬಾಳ್ವೆಯ 100ನೇ ಪಂದ್ಯವಾಗಿತ್ತು. ಅವರು ಆಸ್ಟ್ರೇಲಿಯ ಪರ 100 ಟೆಸ್ಟ್ ಆಡಿದ 14ನೇ ಆಟಗಾರ ಹಾಗೂ 3ನೇ ಓಪನರ್ ಎನಿಸಿದರು. 7,922 ರನ್, 24 ಶತಕ ಇವರ ಸಾಧನೆಯಾಗಿದೆ. ಈ ವಿಶೇಷ ಸಂದರ್ಭದಲ್ಲಿ ಡೇವಿಡ್ ವಾರ್ನರ್ ತಂಡವನ್ನು ಮೈದಾನಕ್ಕೆ ಕರೆತರುವ ಅಪೂರ್ವ ಅವಕಾಶ ಪಡೆದರು. ಜತೆಯಲ್ಲಿ ಅವರ ಮೂವರು ಪುತ್ರಿಯರೂ ಇದ್ದರು. ವಾರ್ನ್ ಹೆಸರಲ್ಲಿ ಕ್ರಿಕೆಟ್ ಪ್ರಶಸ್ತಿ
1,001 ಅಂತಾರಾಷ್ಟ್ರೀಯ ವಿಕೆಟ್ ಉರುಳಿಸಿದ ಲೆಜೆಂಡ್ರಿ ಸ್ಪಿನ್ನರ್ ಶೇನ್ ವಾರ್ನ್ ಹೆಸರಲ್ಲಿ “ಕ್ರಿಕೆಟ್ ಆಸ್ಟ್ರೇಲಿಯ’ ಪ್ರಶಸ್ತಿಯೊಂದನ್ನು ಘೋಷಿಸಿದೆ. ವರ್ಷದ ಶ್ರೇಷ್ಠ ಟೆಸ್ಟ್ ಆಟಗಾರನಿಗೆ ಈ ಪ್ರಶಸ್ತಿ ಒಲಿಯಲಿದೆ. “ಬಾಕ್ಸಿಂಗ್ ಡೇ’ ಟೆಸ್ಟ್ ಪಂದ್ಯದ ಮೊದಲ ದಿನದಾಟದ ವೇಳೆ ಕ್ರಿಕೆಟ್ ಆಸ್ಟ್ರೇಲಿಯದ ಅಧ್ಯಕ್ಷ ನಿಕ್ ಹಾಕ್‌ಲೀ ಇದನ್ನು ಘೋಷಿಸಿದರು. ಮೆಲ್ಬರ್ನ್ ಅಂಗಳ ವಾರ್ನ್ ಅವರ ಹೋಮ್ ಗ್ರೌಂಡ್ ಆಗಿದ್ದು, ಇಲ್ಲಿಯೇ ಅವರು 700ನೇ ಟೆಸ್ಟ್ ವಿಕೆಟ್ ಉರುಳಿಸುವ ಜತೆಗೆ ಆ್ಯಶಸ್ ಹ್ಯಾಟ್ರಿಕ್ ಕೂಡ ಸಾಧಿಸಿದ್ದರು. ಇದರೊಂದಿಗೆ ಆಸ್ಟ್ರೇಲಿಯದ ಕ್ರಿಕೆಟ್ ಪ್ರಶಸ್ತಿಗಳ ಸಂಖ್ಯೆ ಎರಡಕ್ಕೇರಿತು. ಅಲ್ಲಿ ಈಗಾಗಲೇ, ಎಲ್ಲ ಮಾದರಿಯ ಕ್ರಿಕೆಟಿಗೆ ಅನ್ವಯಿಸುವಂತೆ “ಅಲನ್ ಬೋರ್ಡರ್ ಮೆಡಲ್’ ನೀಡಲಾಗುತ್ತದೆ. ಪುರುಷರ ಹಾಗೂ ವನಿತಾ ಸಾಧಕರಿಬ್ಬರನ್ನೂ ಇದಕ್ಕೆ ಪರಿಗಣಿಸಲಾಗುತ್ತದೆ. ಶೇನ್ ವಾರ್ನ್ಗೆ ಗೌರವ
ಕಳೆದ ಮಾರ್ಚ್‌ನಲ್ಲಿ ಅಕಾಲಿಕವಾಗಿ ಅಗಲಿದ ವಿಶ್ವವಿಖ್ಯಾತ ಸ್ಪಿನ್ನರ್ ಶೇನ್ ವಾರ್ನ್ ಅಲೆ ಮೆಲ್ಬರ್ನ್ ಸ್ಟೇಡಿಯಂನಲ್ಲಿ ಬಲವಾಗಿಯೇ ಬೀಸಿತು. ವಾರ್ನ್ ನಿಧನ ಹೊಂದಿದ ಕೂಡಲೇ ಎಂಸಿಜಿಯ “ಗ್ರೇಟ್ ಸದರ್ನ್ ಸ್ಟಾಂಡ್’ಗೆ ಶೇನ್ ವಾರ್ನ್ ಸ್ಟಾಂಡ್ ಎಂದು ಪುನರ್ ನಾಮಕರಣ ಮಾಡಲಾಗಿತ್ತು. ಇಲ್ಲಿ ನೆರೆದ ವೀಕ್ಷಕರು “ಫ್ಲಾಪಿ ಹ್ಯಾಟ್’ ಧರಿಸಿ ವಾರ್ನ್ ಅವರನ್ನು ನೆನಪಿಸುವಂತೆ ಮಾಡಿದರು. ಇದಕ್ಕೂ ಮೊದಲು ರಾಷ್ಟ್ರಗೀತೆ ಹಾಡಲು ಅಂಗಳಕ್ಕಿಳಿದ ವೇಳೆ ಎರಡೂ ತಂಡಗಳ ಆಟಗಾರರು ಫ್ಲಾಪಿ ಕ್ಯಾಪ್ ಧರಿಸಿ ಗಮನ ಸೆಳೆದರು. ಶೇನ್ ವಾರ್ನ್ ತಮ್ಮ ಕ್ರಿಕೆಟ್ ಬಾಳ್ವೆಯ ವೇಳೆ ಅಗಲವಾದ ಇಂಥ ಟೋಪಿ ಧರಿಸುತ್ತಿದ್ದರು. ವಾರ್ನ್ ಅಗಲಿಕೆಯ ಬಳಿಕ ಅವರ ತವರಿನ ಮೆಲ್ಬರ್ನ್ ಅಂಗಳದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಇದಾಗಿದೆ.