ಗಂಗಾವತಿ : ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ನಿತ್ಯವೂ ಚರಂಡಿ ಮತ್ತು ಕುಡಿಯುವ ನೀರು ಓವರ್ ಫ್ಲೋ ಆಗಿ ಕೆರೆ ನಿರ್ಮಾಣದ ವರದಿಯನ್ನು ಉದಯವಾಣಿ ಪತ್ರಿಕೆ ಪ್ರಕಟಿಸಿದ ನಂತರ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಚರಂಡಿಯನ್ನು ಒತ್ತುವರಿ ಮಾಡಿದ್ದ ಡಬ್ಬಾ ಅಂಗಡಿಗಳನ್ನು ತೆರವು ಮಾಡಿಸಿದ್ದಾರೆ.
ಸೋಮವಾರ ಚರಂಡಿ ನೀರಿನ ಕೆರೆ ನಿರ್ಮಾಣದ ಬಗ್ಗೆ ಉದಯವಾಣಿ ಪತ್ರಿಕೆ ಮತ್ತು ವೆಬ್ ನ್ಯೂಸ್ ನಲ್ಲಿ ವಿಸ್ತೃತ ವರದಿಯನ್ನು ಪ್ರಕಟಿಸಲಾಗಿತ್ತು .ಇದನ್ನು ಗಮನಿಸಿದ ಪೌರಾಯುಕ್ತ ವಿರೂಪಾಕ್ಷ ಮೂರ್ತಿ ಅವರು ತಮ್ಮ ಕಚೇರಿಯ ನೈರ್ಮಲ್ಯ ಅಧಿಕಾರಿಗಳ ಜೊತೆ ಕೇಂದ್ರ ಬಸ್ ನಿಲ್ದಾಣದ ಎದುರುಗಡೆ ಇರುವ ನಗರಸಭೆಯ ವಾಣಿಜ್ಯ ಮಳಿಗೆಗೆ ಭೇಟಿ ನೀಡಿ ಪರಿಶೀಲಿಸಿ ವಾಣಿಜ್ಯ ಮಳಿಗೆಯ ಕೆಳಗಿನ ಮಳಿಗೆಯವರು ಚರಂಡಿ ಜಾಗವನ್ನು ಒತ್ತುವರಿ ಮೂಲಕ ಅತಿಕ್ರಮಿಸಿ ಡಬ್ಬಾಗಳು ಚೇರ್ ಬೆಂಚ್ ಮತ್ತು ತಗಡಿನ ಮೂಲಕ ಚರಂಡಿಯನ್ನು ನೀರನ್ನು ಹರಿಯಲು ಬಿಡದೆ ಕೆರೆ ನಿರ್ಮಾಣಕ್ಕೆ ಕಾರಣರಾಗಿದ್ದು ಕಂಡುಬಂದಿದೆ.
ಕೂಡಲೇ ಚರಂಡಿ ಅತಿಕ್ರಮಣವನ್ನು ತೆರವುಗೊಳಿಸಿ ಅಲ್ಲಿದ್ದ ಡಬ್ಬಾ ಫೇರ್ ಬೆಂಚ್ ಗಳು ತಗಡನ್ನು ತೆರವುಗೊಳಿಸಲಾಯಿತು. ನಂತರ 4 ವಾಣಿಜ್ಯ ಮಳಿಗೆಯಲ್ಲಿ ನಗರಸಭೆಯ ನಳಗಳನ್ನು ಬಂದ್ ಮಾಡಲು ಕ್ರಮ ಕೈಗೊಳ್ಳಲಾಯಿತು .ನಿತ್ಯವೂ ರಾತ್ರಿ ವೇಳೆ ನಳವನ್ನು ಆನ್ ಮಾಡಿ ಬಿಡುವುದರಿಂದ ಶುದ್ಧ ಕುಡಿಯುವ ನೀರು ಪೋಲಾಗಿ ರಸ್ತೆಗೆ ಬಂದು ಕೆರೆ ನಿರ್ಮಾಣವಾಗುತ್ತಿದ್ದು ಇದರಿಂದ ರಸ್ತೆ ಸಂಚಾರಿಗಳಿಗೆ ತೊಂದರೆಯಾಗುತ್ತಿತ್ತು ಇದನ್ನು ಉದಯವಾಣಿ ಪತ್ರಿಕೆ ಮತ್ತು ವೆಬ್ ನ್ಯೂಸ್ ವಿಸ್ತೃತ ವರದಿಯನ್ನು ಮಾಡುವ ಮೂಲಕ ನಗರಸಭೆಯ ಅಧಿಕಾರಿಗಳ ಗಮನವನ್ನೂ ಸೆಳೆಯಲಾಗಿತ್ತು.
ಕಾನೂನು ರೀತಿ ಕ್ರಮ : ಇನ್ನು ಮುಂದೆ ನಗರದಲ್ಲಿ ಅತಿಕ್ರಮಣ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಜೊತೆಗೆ ನಗರಸಭೆಯ ವಾಣಿಜ್ಯ ಮಳಿಗೆಗಳ ಎದುರು ಯಾವುದೇ ಅತಿಕ್ರಮಣ ಮಾಡದೆ ಮಳಿಗೆಯಷ್ಟೇ ವ್ಯಾಪಾರ ಮಾಡಬೇಕು ಅತಿಕ್ರಮ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಬಾಡಿಗೆ ಕರಾರು ಒಪ್ಪಂದವನ್ನು ರದ್ದು ಮಾಡಿ ಬೇರೆಯವರಿಗೆ ಮಳಿಗೆಗಳ ಬಾಡಿಗೆ ನೀಡಲಾಗುತ್ತಿದೆ ಎಂದು ಪೌರಾಯುಕ್ತ ವಿರೂಪಾಕ್ಷಮೂರ್ತಿ ಉದಯವಾಣಿಗೆ ತಿಳಿಸಿದ್ದಾರೆ.