ಬೆಂಗಳೂರು: ಮಾಜಿ ಬೌಲರ್ ವೆಂಕಟೇಶ ಪ್ರಸಾದ್ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಆದರೆ ತಂಡದ ಪ್ರಧಾನ ಕೋಚ್ ಬಗ್ಗೆ ತನಗೆ ಆಸಕ್ತಿ ಇಲ್ಲ, ಜು. 9ರ ಗಡುವು ವಿಧಿಸಲಾಗಿದ್ದರೂ ತಾನು ಅರ್ಜಿ ಸಲ್ಲಿಸುವುದಿಲ್ಲ ಎಂದಿದ್ದಾರೆ.
ತಂಡದ ಕೋಚ್ ಆಗಿ ಯಾರೇ ಆಯ್ಕೆಯಾದರೂ ಸಮಸ್ಯೆ ಇಲ್ಲ. ಅದು ಸೆಹವಾಗ್ ಆಗಿರಲಿ ಅಥವಾ ರವಿ ಶಾಸ್ತ್ರಿ ಆಗಿರಲಿ, ತನ್ನ ಅನುಭವ ಹಾಗೂ ತಿಳಿವಳಿಕೆಯೊಂದಿಗೆ ಇವರ ಜತೆ ಹೊಂದಿಕೊಂಡು ಹೋಗಬಲ್ಲೆ ಎಂದಿದ್ದಾರೆ 47ರ ಹರೆಯದ ವೆಂಕಟೇಶ ಪ್ರಸಾದ್.
“ನಾನು ತಂಡದ ಪ್ರಧಾನ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ. ಸಲ್ಲಿಸುವುದೂ ಇಲ್ಲ. ಆದರೆ ಭಾರತ ತಂಡದ ಸಹಾಯಕ ಕೋಚ್ ಅಥವಾ ಬೌಲಿಂಗ್ ಕೋಚ್ ಬಗ್ಗೆ ನನಗೆ ಆಸಕ್ತಿ ಇದೆ’ ಎಂದು ಪ್ರಸಾದ್ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಪ್ರಸಾದ್ 2007ರಲ್ಲಿ ಭಾರತ ತಂಡದ ಬೌಲಿಂಗ್ ಕೋಚ್ ಆಗಿ ಆಯ್ಕೆಯಾಗಿ, 2 ವರ್ಷಗಳ ಕಾಲ ಈ ಹುದ್ದೆಯಲ್ಲಿದ್ದರು. ಭಾರತ ಟಿ-20 ವಿಶ್ವಕಪ್ ಗೆದ್ದದ್ದು ಪ್ರಸಾದ್ ಕಾಲಾವಧಿಯಲ್ಲೇ ಎಂಬುದು ಉಲ್ಲೇಖನೀಯ.
ಮುಂದಿನ ಶ್ರೀಲಂಕಾ ಪ್ರವಾಸದೊಳಗಾಗಿ ಭಾರತ ತಂಡದ ಪ್ರಧಾನ ಕೋಚ್ ಆಯ್ಕೆ ಪ್ರಕ್ರಿಯೆಯನ್ನು “ಕ್ರಿಕೆಟ್ ಸಲಹಾ ಸಮಿತಿ’ (ಸಿಎಸಿ) ಪೂರ್ತಿಗೊಳಿಸಬೇಕಿದೆ. ಹೀಗೆ ಆಯ್ಕೆಗೊಂಡ ಕೋಚ್‌ಗೆ ತನ್ನ ಸಹಾಯಕ ಸಿಬಂದಿಗಳ ಆಯ್ಕೆ ಬಗ್ಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗುವುದು.
ಆನಿಲ್ ಕುಂಬ್ಳೆ ಭಾರತ ತಂಡದ ಕೋಚ್ ಆಗಿದ್ದಾಗ ಕೇವಲ ಬ್ಯಾಟಿಂಗ್ ಕೋಚ್ (ಸಂಜಯ್ ಬಂಗಾರ್) ಮತ್ತು ಫೀಲ್ಡಿಂಗ್ ಕೋಚ್ (ಆರ್. ಶ್ರೀಧರ್) ಮಾತ್ರ ಇದ್ದರು. ಸ್ವತಃ ಬೌಲರ್ ಆಗಿದ್ದ ಕುಂಬ್ಳೆ ಈ ವಿಭಾಗದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಮಾರ್ಚ್ 2017ಕ್ಕೆ ಬಂಗಾರ್ ಮತ್ತು ಶ್ರೀಧರ್ ಒಡಂಬಡಿಕೆಯ ಅವಧಿ ಮುಗಿದರೂ ಬಿಸಿಸಿಐ ಸಲಹೆ ಮೇರೆಗೆ ವೆಸ್ಟ್ ಇಂಡೀಸ್ ಪ್ರವಾಸದ ತನಕ ಮುಂದುವರಿಯುವಂತೆ ಇವರಿಗೆ ಸೂಚಿಸಲಾಗಿತ್ತು.
ವೆಂಕಟೇಶ ಪ್ರಸಾದ್ 2016ರ ಕೋಚ್ ಆಯ್ಕೆ ವೇಳೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರು ಅಂತಿಮ ಸುತ್ತನ್ನೂ ತಲುಪಿರಲಿಲ್ಲ. ಬಳಿಕ ಅನಿಲ್ ಕುಂಬ್ಳೆ ಆಯ್ಕೆಯಾದದ್ದು ಈಗ ಇತಿಹಾಸ.