ಕೊಯಂಬತ್ತೂರು: ತಮಿಳುನಾಡು ಪ್ರೀಮಿಯರ್ ಲೀಗ್ ನ ಎರಡನೇ ಪಂದ್ಯವೇ ಕ್ರಿಕೆಟ್ ವಿಶ್ವದಲ್ಲಿ ಸದ್ದು ಮಾಡಿದೆ. ಮಂಗಳವಾರದ ಪಂದ್ಯದಲ್ಲಿ ಬೌಲರ್ ಒಬ್ಬರು ಒಂದು ಎಸೆತದಲ್ಲಿ 18 ರನ್ ಬಿಟ್ಟುಕೊಟ್ಟಿದ್ದಾರೆ.
ಸೇಲಂ ಸ್ಪಾರ್ಟನ್ಸ್ ಮತ್ತು ಚೆಪಾಕ್ ಸೂಪರ್ ಗಿಲ್ಲಿಸ್ ತಂಡದ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಸೇಲಂ ಸ್ಪಾರ್ಟನ್ಸ್ ನಾಯಕ ಮತ್ತು ವೇಗದ ಬೌಲರ್ ಅಭಿಷೇಕ್ ತನ್ವಾರ್ ಈ ಕೆಟ್ಟ ದಾಖಲೆಗೆ ಪಾತ್ರರಾಗಿದ್ದಾರೆ.
ಅದು ಚೆಪಾಕ್ ತಂಡದ ಕೊನೆಯ ಎಸೆತವಾಗಿತ್ತು. 20ನೇ ಓವರ್ ನ ಕೊನೆಯ ಎಸೆತವನ್ನು ಅಭಿಷೇಕ್ ಯಾರ್ಕರ್ ಎಸೆದಿದ್ದರು. ಬ್ಯಾಟರ್ ಬೌಲ್ಡ್ ಆಗಿದ್ದರು. ಆದರೆ ಅದು ನೋ ಬಾಲ್ ಆಗಿತ್ತು. ಮುಂದಿನ ಎಸೆತದಲ್ಲಿ ಬ್ಯಾಟರ್ ಸಂಜಯ್ ಯಾದವ್ ಸಿಕ್ಸರ್ ಬಾರಿಸಿದರು. ಆದರೆ ಅದು ಕೂಡಾ ನೋ ಬಾಲ್, ತನ್ವಾರ್ ಮತ್ತೊಂದು ಚೆಂಡೆಸೆದರು. ಸಂಜಯ್ ಯಾದವ್ ಎರಡು ರನ್ ಓಡಿದರು. ಆದರೆ ಆ ಎಸೆತವೂ ನೋ ಬಾಲ್. ಮುಂದಿನ ಎಸೆತ ವೈಡ್ ಬಾಲ್. ಕೊನೆಗೆ ತನ್ವಾರ್ ಸರಿಯಾದ ಎಸೆತ ಹಾಕಿದರು. ಆದರೆ ಆ ಎಸೆತವನ್ನು ಸಂಜಯ್ ಯಾದವ್ ಸಿಕ್ಸರ್ ಬಾರಿಸಿದರು.
ಅಭಿಷೇಕ್ ತನ್ವಾರ್ ಅವರ ಕೊನೆಯ ಓವರ್ ಹೀಗಿತ್ತು: 1 4 0 1 N 1 N N6 N2 Wd 6
ಮೊದಲು ಬ್ಯಾಟಿಂಗ್ ಮಾಡಿದ ಚೆಪಾಕ್ ಸೂಪರ್ ಗಿಲ್ಲಿಸ್ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 217 ರನ್ ಮಾಡಿದರೆ, ಸೇಲಂ ಸ್ಪಾರ್ಟನ್ಸ್ ತಂಡವು 165 ರನ್ ಮಾತ್ರ ಗಳಿಸಲು ಶಕ್ತವಾಯಿತು.