ಲಕ್ಷ್ಮೇಶ್ವರ: ಮುಂಗಾರಿನ ಪ್ರಮುಖ ವಾಣಿಜ್ಯ ಬೆಳೆ ಹೆಸರಿಗೆ ಹಳದಿ ರೋಗಬಾಧೆ ತಗುಲುತ್ತಿದ್ದರೆ, ಗೋವಿನಜೋಳಕ್ಕೆ ಲದ್ದಿ ಹುಳು ಕಾಟದ ಜತೆಗೆ ಪೋಷಕಾಂಶದ ಕೊರತೆಯಿಂದ ಬೆಳೆ ಕಂದು ಬಣ್ಣಕ್ಕೆ ತಿರುಗಿ ಒಣಗುತ್ತಿರುವುದು ರೈತ ಸಮುದಾಯವನ್ನು ಚಿಂತೆಗೀಡು ಮಾಡಿದೆ.
ಸಮೀಪದ ಪು. ಬಡ್ನಿ ಗ್ರಾಮದ ವ್ಯಾಪ್ತಿಯಲ್ಲಿ ಗೋವಿನ ಜೋಳದ ಬೆಳೆಗಳಿಗೆ ಪೋಷಕಾಂಶದ ಕೊರತೆ ಕಂಡುಬಂದಿದ್ದು, ಬೆಳೆಯುತ್ತಿರುವ ಹಂತದಲ್ಲಿಯೇ ಒಣಗುವ ಭೀತಿ ಎದುರಾಗಿದೆ. ರೈತ ಶಿವಾನಂದ ಹರಿಜನ ಅವರು ತಮ್ಮ ಎರಡು ಎಕರೆ ಜಮೀನಿನಲ್ಲಿ ತಿಂಗಳ ಹಿಂದೆಯೇ ಸಾವಿರಾರು ರೂ.ಗಳನ್ನು ಖರ್ಚು ಮಾಡಿ ಗೋವಿನ ಜೋಳವನ್ನು ಬಿತ್ತನೆ ಮಾಡಿದ್ದಾರೆ.
ಉತ್ತಮವಾಗಿ ಬೆಳೆದ ಬೆಳೆಗೀಗ ಪೋಷಕಾಂಶದ ಕೊರತೆಯ ಹಿನ್ನೆಲೆಯಲ್ಲಿ ಬೆಳೆ ಕಂದು ಬಣ್ಣಕ್ಕೆ ತಿರುಗಿ ಇದರಿಂದ ಗರಿಗಳು ಒಣಗುತ್ತಿವೆ. ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತ ಈ ರೀತಿ ಬೆಳೆಯು ಹಾಳಾಗುತ್ತಿರುವದರಿಂದ ದಿಕ್ಕುತೋಚದಂತಾಗಿದೆ. ತಾಲೂಕಿನಾದ್ಯಂತ ನೀರಾವರಿ ಮತ್ತು ಖುಷ್ಕಿ ಜಮೀನು ಸೇರಿ ಒಟ್ಟು 9,850 ಹೆಕ್ಟೇರ್ ಪ್ರದೇಶದಲ್ಲಿ ಗೋವಿನಜೋಳವನ್ನು ಬಿತ್ತಲಾಗಿದೆ. ಕಳೆದ ಬಾರಿಗೆ ಹೋಲಿಸಿದಾಗ ಬಿತ್ತನೆ ಪ್ರದೇಶ ಹೆಚ್ಚಾಗಿರುವುದು ಕಂಡು ಬರುತ್ತಿದೆ.
ಬಹುತೇಕ ರೈತರು ಉತ್ತಮ ಇಳುವರಿ ಮತ್ತು ಕಡಿಮೆ ಖರ್ಚು ಎನ್ನುವ ದçಷ್ಟಿಯಿಂದ ಗೋವಿನ ಜೋಳದ ಬೆಳೆಗೆ ರೈತರು ಮೊರೆ ಹೋಗಿರುವುದು ಕಂಡುಬಂದಿದೆ. ಆದರೆ ಈ ಬಾರಿ ಆರಂಭದಲ್ಲಿ ಆರ್ಭಟಿಸಿದ್ದ ಮಳೆರಾಯ ನಂತರದ ದಿನಗಳಲ್ಲಿ ಕಣ್ಣುಮುಚ್ಚಾಲೆಯಾಟವನ್ನು ನಡೆಸಿದೆ. ಜೂನ್ ತಿಂಗಳು ಬಹುತೇಕ ಕಡೆಗಳಲ್ಲಿ ಮಳೆಯು ಇಲ್ಲದೆ ಬೆಳೆ ಒಣಗುವ ಸ್ಥಿತಿಗೆ ಬಂದಾಗುತ್ತಿವೆ.
ಕೃಷಿ ಅಧಿಕಾರಿ ಭೇಟಿ: ಗೋವಿನಜೋಳದ ಬೆಳೆ ಕಂದು ಬಣ್ಣಕ್ಕೆ ತಿರುಗಿ ಮೂಲಕ ಬೆಳೆ ಒಣಗುತ್ತಿರುವ ಭೂಮಿಗೆ ಶುಕ್ರವಾರ ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ ಮತ್ತು ಸಹಾಯಕ ಕೃಷಿ ಅಧಿಕಾರಿ ಸೋಮಣ್ಣ ಲಮಾಣಿ ಭೇಟಿ ನೀಡಿ ಬೆಳೆ ಪರಿಶೀಲಿಸಿದರು. ಎರಡು ಎಕರೆ ಪ್ರದೇಶದಲ್ಲಿರುವ ಗೋವಿನಜೋಳದ ಬೆಳೆಯು ಇದೇ ರೀತಿಯಾಗಿರುವದನ್ನು ವೀಕ್ಷಿಸಿದ ಅವರು, ನಂತರ ರೈತ ಶಿವಾನಂದ ಅವರಿಗೆ ಸಲಹೆ ನೀಡಿದರು.
ಈ ಕುರಿತು ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಇದು ಯಾವುದೇ ತರಹದ ರೋಗ ಲಕ್ಷಣವಲ್ಲ. ಈ ಬೆಳೆಗೆ ನೈಟ್ರೋಜನ್ ಮತ್ತು ಪ್ರಾಸ್ಪರಸ್ ಪೋಷಕಾಂಶದ ಕೊರತೆಯಾಗಿದೆ. ಇದರಿಂದ ಬೆಳೆ ಕಂದು ಬಣ್ಣಕ್ಕೆ ತಿರುಗಿ ಗರಿಗಳು ಒಣಗಿದಂತಾಗಿ ಉದುರುತ್ತಿರುವುದನ್ನು ಕಾಣಬಹುದಾಗಿದೆ. ಈ ಪೋಷಕಾಂಶಯುಕ್ತ ದ್ರವರೂಪದ ರಸಗೊಬ್ಬರ ಮತ್ತು ಮೈಕ್ರೋನ್ಯೂಟ್ರಂಟ್ ಬೆರೆಸಿ ಸಿಂಪರಣೆ ಮಾಡಿದಲ್ಲಿ ಒಂದು ವಾರದ ನಂತರ ಬೆಳೆಯುವ ಸುಧಾರಣೆ ಕಾಣುತ್ತದೆ. ಬಿತ್ತನೆ ಪೂರ್ವದಲ್ಲಿ ಹೊಲಗಳಿಗೆ ಪೋಷಕಾಂಶಗಳ ಕೊರತೆ ನೀಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಬೀಜೋಪಚಾರ ಮಾಡಬೇಕು. ಮುಖ್ಯವಾಗಿ ಪದೇಪದೆ ಒಂದೇ ರೀತಿಯ ಬೆಳೆ ಬೆಳೆಯುವುದು ಈ ಸಮಸ್ಯೆಗೆ ಕಾರಣವಾಗುತ್ತದೆ.