Advertisement

ಎನ್‌ಟಿಎಂ ಶಾಲೆಗಾಗಿ ಸಿಎಂ ಬಳಿ ಎರಡೂ ಗುಂಪು ಪಟ್ಟು

11:38 AM Jun 25, 2017 | Team Udayavani |

ಮೈಸೂರು: ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಎನ್‌ಟಿಎಂ ಶಾಲೆ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಸ್ಮಾರಕ ಹಾಗೂ ಯುವಕೇಂದ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪರ-ವಿರೋಧದ ಗುಂಪಿನ ಸದಸ್ಯರು ಶನಿವಾರ ಪ್ರತ್ಯೇಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

Advertisement

ಜಾಗವನ್ನು ಆಶ್ರಮಕ್ಕೆ ಒಪ್ಪಿಸಿ: ನ್ಯಾಯಾಲಯದ ಆದೇಶದಂತೆ ನಗರದ ನಾರಾಯಣಶಾಸಿ ರಸ್ತೆಯಲ್ಲಿರುವ ಎನ್‌ಟಿಎಂ ಶಾಲೆ ಜಾಗವನ್ನು ರಾಮಕೃಷ್ಣ ಆಶ್ರಮಕ್ಕೆ ಒಪ್ಪಿಸುವಂತೆ ಒತ್ತಾಯಿಸಿ ಹಿರಿಯ ಸಾಹಿತಿ ಡಾ.ಸಿಪಿಕೆ ನೇತೃತ್ವದ ತಂಡದ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಎನ್‌ಟಿಎಂ ಶಾಲೆಯನ್ನು ಪ್ರಸ್ತುತ ಶಾಲೆ ಇರುವ ಜಾಗದಲ್ಲೇ ಮುಂದುವರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ನೀಡಿದ್ದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ. ಅಲ್ಲದೇ ಎನ್‌ಟಿಎಂ ಶಾಲೆ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಸ್ಮಾರಕ ಹಾಗೂ ಸಾಂಸ್ಕೃತಿಕ ಯುವಕೇಂದ್ರವನ್ನು ಸ್ಥಾಪಿಸುವುದು ಶ್ರೇಷ್ಠ ಕಾರ್ಯವಾಗಿದ್ದು, ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಒಳಗೊಂಡಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರ, ಹೈಕೋರ್ಟ್‌ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸುವ ಜತೆಗೆ ಈ ವಿಷಯದಲ್ಲಿ ವೈಯಕ್ತಿಕ ಗಮನವಹಿಸಿ, ಎನ್‌ಟಿಎಂ ಶಾಲೆಯನ್ನು ದೇವರಾಜ ಶಾಲೆಗೆ ವಿಲೀನಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸುವ ಮೂಲಕ ಸ್ಮಾರಕ ನಿರ್ಮಾಣಕ್ಕೆ ವಿಳಂಬವಾಗದಂತೆ ಸಹಕರಿಸಬೇಕೆಂದು ಒತ್ತಾಯಿಸಿ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಆತ್ಮಜಾnನಂದ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನಿನ ಚೌಕಟ್ಟಿನಲ್ಲಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ವಕೀಲ ಅರುಣ್‌ಕುಮಾರ್‌ ತಿಳಿಸಿದರು.

Advertisement

ಶಾಲೆ ಜಾಗ ನೀಡಬೇಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಎನ್‌ಟಿಎಂ ಶಾಲೆ ಉಳಿಸಿ ಹೋರಾಟ ಸಮಿತಿಯ ಸದಸ್ಯರು, ಯಾವುದೇ ಕಾರಣಕ್ಕೂ ಎನ್‌ಟಿಎಂ ಶಾಲೆ ಜಾಗವನ್ನು ರಾಮಕೃಷ್ಣ ಆಶ್ರಮಕ್ಕೆ ನೀಡದಂತೆ ಮನವಿ ಮಾಡಿದರು.

ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಾಣ ಹಾಗೂ ಸಾಂಸ್ಕೃತಿಕ ಯುವಕೇಂದ್ರದ ನಿರ್ಮಾಣದ ಉದ್ದೇಶಕ್ಕಾಗಿ ಶಾಲೆಯ ಜಾಗವನ್ನು ಯಾವುದೇ ಕಾರಣಕ್ಕೂ ರಾಮಕೃಷ್ಣ ಆಶ್ರಮಕ್ಕೆ ನೀಡದೆ, ಶಾಲೆಯನ್ನು ಯಥಾವತ್ತಾಗಿ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. 

ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೈ ಕೋರ್ಟ್‌ ಆದೇಶ ಈವರೆಗೂ ತಮ್ಮ ಕೈಸೇರಿಲ್ಲ, ಹೀಗಾಗಿ ಆದೇಶವನ್ನು ಓದಿದ ಬಳಿಕ ಕಾನೂನಿನಂತೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಮಿತಿಯ ಪ. ಮಲ್ಲೇಶ್‌, ಸ.ರ. ಸುದರ್ಶನ್‌, ರಾಜಶೇಖರ ಕೋಟಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next