Advertisement

ಸಹೋದರರಿಬ್ಬರೂ ಭಾರತ ಮಾತೆಯ ಸೇವೆಯಲ್ಲಿ

01:00 AM Feb 03, 2019 | Team Udayavani |

ತೆಕ್ಕಟ್ಟೆ: ಸೇನೆಗೆ ಸೇರಬೇಕೆಂಬ ಉತ್ಕಟ ಬಯಕೆ ಇದ್ದರೂ ಕೆಲವರಿಗೆ ಸಾಧ್ಯವಾಗುವುದಿಲ್ಲ. ಇನ್ನು ಕೆಲವು ಸಂದರ್ಭ ಮನೆಯವರು ಹಿಂದೇಟು ಹಾಕುವುದೂ ಇದೆ. ಆದರೆ ಇಲ್ಲಿ ಮಾತೆಯೊಬ್ಬರ ಇಬ್ಬರು ಮಕ್ಕಳೂ ಭಾರತ ಮಾತೆಯ ಸೇವೆಯಲ್ಲಿದ್ದಾರೆ. ಮಕ್ಕಳ ಕನಸಿಗೆ ಅಮ್ಮ ನೀರೆರೆದಿದ್ದಾರೆ. 

Advertisement

ತೆಕ್ಕಟ್ಟೆ ಗ್ರಾಮದ ಹರಪನಕೆರೆಯ ಮಹಾಬಲ ಹಾಗೂ ಜಲಜಾ ದಂಪತಿಯ ಇಬ್ಬರು ಪುತ್ರರಾದ ಪ್ರಭಾಕರ ಹರಪನ‌ಕೆರೆ ಮತ್ತು ಸುಧಾಕರ ಹರಪನ‌ಕೆರೆ ಅವರೇ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತ ಊರಿಗೆ ಹೆಸರು ತಂದವರು.

ಪ್ರಭಾಕರ ಹರಪನಕೆರೆ 16 ವರ್ಷದಿಂದ ಸೇನೆಯ ಬಾಂಬ್‌ ನಿಷ್ಕ್ರಿಯ ದಳದಲ್ಲಿ ರೇಡಿಯೋ ಆಪರೇಟರ್‌ ಆಗಿದ್ದು, ಪ್ರಸ್ತುತ ಅಂಡಮಾನ್‌ ನಲ್ಲಿ ಯೋಧರಿಗೆ ವಿಶೇಷ ದೈಹಿಕ ತರಬೇತಿ ನೀಡುತ್ತಿದ್ದಾರೆ. ಅವರ ತಮ್ಮನೂ ಅಣ್ಣ ಸೇನೆ ಸೇರಿದ 4 ವರ್ಷಗಳ ಬಳಿಕ ಸೇನೆ ಸೇರಿದ್ದಾರೆ. ತಮ್ಮ ಸುಧಾಕರ ಹರಪನ‌ಕೆರೆ 10 ವರ್ಷದಿಂದ ಸಿಗ್ನಲ್‌ ಮ್ಯಾನ್‌ ಆಗಿ ರಾಜಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಉತ್ತಮ ಕ್ರೀಡಾಪಟುವೂ ಹೌದು.

ಆಪರೇಷನ್‌ ತಾಜ್‌ನಲ್ಲಿ  ಭಾಗಿ
2008ರ ನವೆಂಬರ್‌ನಲ್ಲಿ ಪಾಕ್‌ ಮೂಲದ ಉಗ್ರರು ಭಾರತದ ಒಳ ನುಸುಳಿ ಮುಂಬಯಿ ತಾಜ್‌ ಹೊಟೇಲ್‌ಗೆ ದಾಳಿ ನಡೆಸಿದ ಸಂದರ್ಭ ಬಾಂಬ್‌ ನಿಷ್ಕ್ರಿಯ ದಳದಲ್ಲಿ ರೇಡಿಯೋ ಆಪರೇಟರ್‌ ಆಗಿ ಪ್ರಭಾಕರ ಹರಪನ‌ಕೆರೆ ಸೇವೆ ಸಲ್ಲಿಸಿದ್ದರು. ಉಗ್ರ ನಿರ್ಮೂಲನೆ ಸಂದರ್ಭ ಕಟ್ಟಡದ ಮೇಲಂತಸ್ತು ಏರುವಾಗ ಅವರ ಎಡ ತೊಡೆಗೆ ಗಾಜು ತಗಲಿ ಏಟಾಯಿತು. ಗಾಯದಿಂದ ರಕ್ತ ಹರಿಯುತ್ತಿದ್ದರೂ ಲೆಕ್ಕಿಸದೆ ಮುನ್ನುಗ್ಗಿ ಹೊಟೇಲ್‌ನ ಒಳಗೆ ಅವಿತು ನಿರಂತರ ದಾಳಿ ಮಾಡುತ್ತಿದ್ದ ಉಗ್ರರನ್ನು ಸದೆ ಬಡಿಯುವ ಕಾರ್ಯದಲ್ಲಿ ರಾಷ್ಟ್ರೀಯ ಭದ್ರತಾ ಪಡೆಯೊಂದಿಗೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಅವರದ್ದು. 2012-13ರಲ್ಲಿ ಅಮೆರಿಕದ ವಿಶ್ವ ಸಂಸ್ಥೆಯ ಶಾಂತಿ ಸೇನೆಯಲ್ಲಿಯೂ ಸೇವೆ ಸಲ್ಲಿದ್ದಾರೆ. ಪತ್ನಿ ಗುರುಪ್ರಿಯಾ, ಪುತ್ರ ಲಕ್ಷಿತ್‌ನೊಂದಿಗೆ ಸುಖೀ ಜೀವನ ನಡೆಸುತ್ತಿದ್ದಾರೆ.

ಯೋಧರ ಗ್ರಾಮ
ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮ ಅತೀ ಹೆಚ್ಚು ಯೋಧರನ್ನು ಸೇನೆಗೆ ನೀಡಿದ್ದು, ಯೋಧರ ಗ್ರಾಮ ಎಂದೇ ಖ್ಯಾತಿಯಾಗಿದೆ. 
ಪ್ರಭಾಕರ ಹರಪನ‌ಕೆರೆ (ಸೇನೆಯಲ್ಲಿ ರೇಡಿಯೋ ಆಪರೇಟರ್‌), ಸುಧಾಕರ ಹರಪನ‌ಕೆರೆ (ಸಿಗ್ನಲ್‌ ಮ್ಯಾನ್‌), ರವೀಂದ್ರ ಕೊಮೆ, (ಐಟಿಬಿಪಿ ಹವಾಲ್ದಾರ್‌), ರವಿಚಂದ್ರ ಶೆಟ್ಟಿ (ಹವಾಲ್ದಾರ ಹುದ್ದೆ), ಅರುಣ್‌ (ಏರ್‌ಫೋರ್ಸ್‌ನಲ್ಲಿ ಏರ್‌ಮನ್‌), ಸುದರ್ಶನ್‌ ನಾಯಕ್‌ ತೆಕ್ಕಟ್ಟೆ (ಸಿಆರ್‌ಪಿಎಫ್‌) ಸೇನೆಯಲ್ಲಿರುವ ಗ್ರಾಮದ ಯೋಧರು.

Advertisement

ಇಬ್ಬರ ಸೇವೆಯೇ ಹೆಮ್ಮೆ
ಬಾಲ್ಯದಿಂದಲೂ ಕಲಿಕೆಯ ಜತೆ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇಬ್ಬರು ಕೂಡ ಅತ್ಯಂತ ಪರಿಶ್ರಮದಿಂದಲೇ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದಾರೆ. ನನ್ನ ಮಕ್ಕಳಿಬ್ಬರು ದೇಶ ಸೇವೆಯಲ್ಲಿ ತೊಡಗಿಸಿಕೊಂಡಿರುವುದೇ ನನಗೆ ಹೆಮ್ಮೆ. ಅವರಿಂದಾಗಿ ಗ್ರಾಮದ ಯುವಕರಿಗೆ ಸೇನೆ ಸೇರಲು ಪ್ರೇರಣೆಯಾಗಿದೆ.
– ಜಲಜಾ, ಹರಪನಕೆರೆ ಯೋಧರ ತಾಯಿ

ಉತ್ಸಾಹಿ ಯುವಕರಿಗೆ ಮಾರ್ಗದರ್ಶನ ಸಿಗಲಿ
ಶಾಲಾ ದಿನಗಳಲ್ಲಿಯೇ ಯೋಧನಾಗಬೇಕು, ದೇಶ ಸೇವೆ ಮಾಡಬೇಕು ಎಂಬ ಹಂಬಲವಿತ್ತು. ಕಲಿಕೆಯ ಬಳಿಕ ಅದು ಈಡೇರಿತು. ದೇಶದ ಹಲವು ಭಾಗಗಳು ಸಹಿತ 2012-13ರಲ್ಲಿ ಅಮೆರಿಕದ ವಿಶ್ವಸಂಸ್ಥೆಯ ಶಾಂತಿ ಸೇನೆಯಲ್ಲಿ  ಸೇವೆ ಸಲ್ಲಿಸುವ ಅವಕಾಶ ನನ್ನ ಪಾಲಿಗೆ ಬಂತು. ನನ್ನೂರಿನ ಮಣ್ಣಿನಲ್ಲೇ ದೇಶ ಪ್ರೇಮ ಅಡಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಗ್ರಾಮದ 6 ಮಂದಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸೇನೆಗೆ ಸೇರುವ ಇಚ್ಛೆಯುಳ್ಳ  ಉತ್ಸಾಹಿ ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡುವ ಕಾರ್ಯವಾಗಬೇಕಾಗಿದೆ.
– ಪ್ರಭಾಕರ ಹರಪನ‌ಕೆರೆ

ಅಣ್ಣನೇ ಸ್ಫೂರ್ತಿ
ಸೇನೆ ಸೇರಲು ಅಣ್ಣನೇ ನನಗೆ ಸ್ಫೂರ್ತಿ. 10 ವರ್ಷಗಳಿಂದಲೂ ಸೇನೆಯಲ್ಲಿ  ಸೇವೆ ಸಲ್ಲಿಸುತ್ತಿರುವುದೇ ನನ್ನ ಭಾಗ್ಯ

– ಸುಧಾಕರ ಹರಪನ‌ಕೆರೆ

– ಟಿ. ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next