ಕೊಪ್ಪಳ: ತುಂಗಭದ್ರಾ ಜಲಾಶಯ ಕಳೆದ ವರ್ಷ ಅತಿಯಾದ ಮಳೆಯಿಂದ ತುಂಬಿ ಹರಿದರೂ ಈಗ ಎರಡನೇ ಬೆಳೆಗೆ ನೀರಿನ ಕೊರತೆ ಎದುರಾಗಿದೆ. ಬೆಳೆ ಉಳಿಸಿಕೊಳ್ಳಲು ಎಡದಂಡೆ ಮುಖ್ಯ ಕಾಲುವೆಗೆ ಕನಿಷ್ಟ 3 ಟಿಎಂಸಿ ಅಡಿ ನೀರು ಬೇಕಿದೆ. ಈ ನೀರಿಗಾಗಿ ಜಿಲ್ಲೆಯ ಜನಪ್ರತಿನಿಧಿಗಳು ಬೆಳೆ ರಕ್ಷಣೆಗಾಗಿ ಭದ್ರಾ ಡ್ಯಾಂನಿಂದ ಅಥವಾ ಆಂಧ್ರ ಕೋಟಾದಡಿ ಕನಿಷ್ಟ 5 ಟಿಎಂಸಿ ಅಡಿ ಎರವಲು ಪಡೆಯಲು ಸಿಎಂ ಮೊರೆ ಹೋಗಿದ್ದಾರೆ.
ಹೌದು.. ತುಂಗಭದ್ರಾ ಜಲಾಶಯವು ಕೆಲವು ವರ್ಷಗಳಿಂದ ಅವ ಧಿಗೂ ಮುನ್ನವೇ ತುಂಬಿ ತಿಂಗಳುಗಟ್ಟಲೇ ಹೆಚ್ಚುವರಿ ನೀರು ಹರಿದು ನದಿಪಾತ್ರಗಳಿಗೆ ಬಿಡಲಾಗುತ್ತಿದೆ. ಡ್ಯಾಂನ ಸಾಮಾರ್ಥ್ಯ 133 ಟಿಎಂಸಿ ಅಡಿ ಇದ್ದರೂ 33 ಟಿಎಂಸಿಯಷ್ಟು ಹೂಳು ತುಂಬಿದ ಪರಿಣಾಮ 100 ಟಿಎಂಸಿಗೆ ಮಾತ್ರ ನೀರು ಸಂಗ್ರಹಣಾ ಸಾಮರ್ಥ್ಯವಿದೆ. ಇರುವ ನೀರು ನಿರ್ವಹಣೆ ಮಾಡುವಲ್ಲೂ ಅ ಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ.
ಪ್ರತಿವರ್ಷವೂ ಮೊದಲ ಬೆಳೆಗೆ ನೀರು ಸಂಪೂರ್ಣ ದೊರೆತರೆ ಎರಡನೇ ಬೆಳೆಗೆ ನೀರಿನ ಕೊರತೆ ಎದುರಾಗುತ್ತಲೇ ಇದೆ. ಹಾಗಾಗಿ ನೀರಿನ ಕೊರತೆ ನೀಗಿಸಲು ನೀರಾವರಿ ಸಲಹಾ ಸಮಿತಿ ಪ್ರತಿ ವರ್ಷವೂ ಆನ್ ಆ್ಯಂಡ್ ಆಫ್ ಪದ್ಧತಿಯಡಿ ನೀರು ಹರಿಸುವ ತಂತ್ರಗಾರಿಕೆ ಮಾಡುತ್ತಿದೆ. ಆದರೆ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯಡಿ ಬರುವ ಅಚ್ಚುಕಟ್ಟು ಪ್ರದೇಶದ ಲಕ್ಷಾಂತರ ಬೆಳೆಗೆ ಈ ವರ್ಷ ನೀರಿನ ಕೊರತೆ ಎದುರಾಗಲಿದೆ. ಕನಿಷ್ಟ 4-5 ಟಿಎಂಸಿ ಅಡಿ ನೀರು ಬೇಕಾಗುತ್ತದೆ. ಈಚೆಗೆ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿಯೂ ಇದು ಚರ್ಚೆಯಾಗಿದೆ.
ಪ್ರಸ್ತುತ ನಿಂತ ಬೆಳೆ ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ. ಬಹುಪಾಲು ಎಡದಂಡೆ ಮುಖ್ಯ ನಾಲೆಯ ಕೋಟಾ ಮುಗಿಯುತ್ತಿದೆ. ಪ್ರಸ್ತುತ ಡ್ಯಾಂನಲ್ಲಿ 30 ಟಿಎಂಸಿ ಅಡಿಯಷ್ಟು ನೀರಿನ ಸಂಗ್ರಹವಿದೆ. ಇಷ್ಟು ನೀರಿನಲ್ಲಿ ಎಡ ಹಾಗೂ ಬಲದಂಡೆ ಭಾಗದ ಕಾಲುವೆಗಳಿಗೆ ನೀರು ಹಂಚಿಕೆಯಾಗಿವೆ. ನೀರಾವರಿ ಇಲಾಖೆ ಅಧಿಕಾರಿಗಳು ಎಡದಂಡೆ ನಾಲೆಗೆ ಮಾತ್ರ ನೀರಿನ ಕೊರತೆ ಎದುರಾಗಲಿದೆ ಎಂದೆನ್ನುತ್ತಿದ್ದಾರೆ. ಅಲ್ಲದೇ, ಮಾ. 31ರೊಳಗೆ ಕುಡಿಯುವ ನೀರು ಸೇರಿ ಎಲ್ಲ ಕೋಟಾವೂ ಮುಗಿಯಲಿದೆ ಎಂದೆನ್ನುತ್ತಿದ್ದಾರೆ. ಇದರಿಂದ ರೈತಾಪಿ ವಲಯದಲ್ಲಿ ಆತಂಕ ಮೂಡಿದೆ.
ಸಿಎಂಗೆ ಮೊರೆ: ಬೆಳೆದು ನಿಂತ ಬೆಳೆ ಉಳಿಸಿಕೊಳ್ಳಲು ನೀರಿನ ಅವಶ್ಯಕತೆ ಅರಿತು ಸಂಸದ ಸಂಗಣ್ಣ ಕರಡಿ, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು, ಕಾಡಾ ಅಧ್ಯಕ್ಷ ಶೇಷಗಿರಿರಾವ್ ಸೇರಿ ಇತರೆ ಜನಪ್ರತಿನಿಧಿಗಳು ಮಂಗಳವಾರ ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಭದ್ರಾ ಡ್ಯಾಂನಿಂದ 5 ಟಿಎಂಸಿ ಅಥವಾ ಆಂಧ್ರ ಕೋಟಾದಡಿ ನೀರು ಉಳಿಕೆ ಮಾಡಿ ಬೆಳೆಗೆ ನೀರು ಹರಿಸಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೇ, ಶೀಘ್ರ ಚುನಾವಣೆ ಎದುರಾಗಲಿದ್ದು, ಈ ವೇಳೆ ನೀರಿನ ಸಮಸ್ಯೆ ಉದ್ಭವಿಸಿದರೆ ಅದು ನಮಗೆ ಸಮಸ್ಯೆಯಾಗಿ ಪರಿಣಮಿಸಲಿದೆ ಎಂದೆನ್ನುವ ಮಾತುಗಳು ವ್ಯಕ್ತವಾಗಿದ್ದು, ಸಿಎಂ ಸಹಿತ ಸಕಾರಾತ್ಮಕ ಸ್ಪಂದಿಸಿ, ಈಗಿರುವ ಬೆಳೆ ರಕ್ಷಣೆ ಮಾಡಿಕೊಳ್ಳಲು ಪರ್ಯಾಯ ಅವಕಾಶಗಳೇನು ಎನ್ನುವ ಕುರಿತು ರಾಜ್ಯ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿಗಳ ಜೊತೆಗೂ ದೂರವಾಣಿ ಮೂಲಕ ಮಾತನಾಡಿದ್ದಾರೆ.
ಭದ್ರಾ ಡ್ಯಾಂನಲ್ಲೂ ನೀರು ಅಗತ್ಯಕ್ಕೆ ತಕ್ಕಷ್ಟೇ ಇದೆ ಎನ್ನುವ ಮಾತು ಕೇಳಿ ಬಂದಿದೆ. ತುಂಗಭದ್ರಾದಲ್ಲೇ ಇರುವ ಆಂಧ್ರ ಕೋಟದಡಿ ಕನಿಷ್ಟ 1 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಆಂಧ್ರ, ತೆಲಂಗಾಣ ಜೊತೆ ಚರ್ಚಿಸುವಂತೆಯೂ ಇಲಾಖೆ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಎರಡನೇ ಬೆಳೆಗೆ ಈ ಬಾರಿ ನೀರಿ ಕೊರತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಹುಬ್ಬಳ್ಳಿಯಲ್ಲಿ ಭೇಟಿ ಮಾಡಿ ಭದ್ರಾ ಡ್ಯಾಮ್‌ನಿಂದ ಕನಿಷ್ಟ 5 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಸಿಎಂ ಸಹಿತ ಸಕಾರಾತ್ಮಕವಾಗಿ ಸ್ಪಂದಿಸಿ, ಇಲಾಖೆ ಕಾರ್ಯದರ್ಶಿಗಳಿಗೆ ಮಾತನಾಡಿದ್ದಾರೆ. ನಿಂತ ಬೆಳೆ ರಕ್ಷಣೆ ಮಾಡಿಕೊಳ್ಳುವುದು ನಮಗೆ ಅನಿವಾರ್ಯವಾಗಿದೆ.
ಸಂಗಣ್ಣ ಕರಡಿ, ಸಂಸದ
ಎರಡನೇ ಬೆಳೆಗೆ ನಮಗೆ ಕನಿಷ್ಟ 3 ಟಿಎಂಸಿ ನೀರಾದರೂ ಬೇಕಾಗುತ್ತದೆ. ಈ ಕುರಿತಂತೆ ನಾವೆಲ್ಲ ಶಾಸಕರು ನಿಯೋಗ ತೆರಳಿ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಭದ್ರಾ ಡ್ಯಾಂ ಅಥವಾ ಆಂಧ್ರ ಕೋಟಾದಲ್ಲಿ ನೀರು ಬಳಕೆಗೆ ಅವಕಾಶ ಕೊಡಬೇಕೆಂದು ಮನವಿ ಮಾಡಿದ್ದೇವೆ. ಸಿಎಂ ಸ್ಪಂದಿಸಿದ್ದು, ಯಾವ ಅವಕಾಶ ಇದೆಯೋ ಅದರಲ್ಲಿ ನೀರಿನ ಬಳಕೆಗೆ ಸಮ್ಮತಿ ಸೂಚಿಸಿದ್ದಾರೆ.
ಪರಣ್ಣ ಮುನವಳ್ಳಿ, ಗಂಗಾವತಿ ಶಾಸಕ