Advertisement

ಮತದಾರರ ಕರಡುಪಟ್ಟಿ ಪ್ರಕಟ

10:08 AM Oct 27, 2018 | Team Udayavani |

ಕಲಬುರಗಿ: ಜಿಲ್ಲೆಯ ಮತದಾರರ ಕರಡು ಪಟ್ಟಿ ಪ್ರಕಟಿಸಲಾಗಿದ್ದು, ನ.20ರ ವರೆಗೆ ಕರಡು ಪಟ್ಟಿ ಪರಿಷ್ಕರಣೆ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಮತದಾರರು ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ಮತದಾರರ ಪಟ್ಟಿ ಪರಿಷ್ಕರಣಾ ವೀಕ್ಷಕ ಹಾಗೂ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ್‌ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ 2019ನೇ ಸಾಲಿನ ಮತದಾರರ ಪಟ್ಟಿ ಪರಿಷ್ಕರಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳ ತಿದ್ದುಪಡಿ, ವರ್ಗಾವಣೆ, ಹೆಸರು ತೆಗೆದು ಹಾಕುವ ಬಗ್ಗೆ ನ. 20ರೊಳಗಾಗಿ ಸಂಬಂಧಿಸಿದ ಬೂತ್‌ ಮಟ್ಟದ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ನಂತರ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಲು ಸಾಧ್ಯವಾಗುವುದಿಲ್ಲ ಎಂದರು. 

ಮತದಾರರ ಕರಡು ಪಟ್ಟಿ ಪರಿಷ್ಕರಣೆ ಕಾರ್ಯವು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು. ಈ ಹಂತದಲ್ಲಿ ಮತದಾರರ ಪಟ್ಟಿಯನ್ನು ಸರಿಯಾಗಿ ಪರಿಷ್ಕರಣೆ ಮಾಡಿದರೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದ ನಂತರ ಯಾವುದೇ ತೊಂದರೆಗಳು ಉದ್ಭವಿಸುವುದಿಲ್ಲ. ಮತದಾರರ ಪಟ್ಟಿ ಪರಿಷ್ಕರಣೆಗೆ ಅಂತಿಮ ಹಂತದಲ್ಲಿ ಗೊಂದಲ ಉಂಟಾಗುವುದಿಲ್ಲ. ಮತದಾರರು ಆನ್‌ ಲೈನ್‌ನಲ್ಲಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಿದ್ದಲ್ಲಿ ಅವರಿಗೆ ಸ್ವೀಕೃತಿ ಮತ್ತು ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ಸಿಗುವಂತಾಗಬೇಕು ಎಂದರು. 

ಪರಿಷ್ಕರಣೆ ಅವಧಿಯಲ್ಲಿ ಯಾವುದಾದರೂ ಮತಕ್ಷೇತ್ರದಲ್ಲಿ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ನೋಂದಣಿಯಾಗಿದ್ದರೆ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಹೆಸರು ತೆಗೆದು ಹಾಕಿದಲ್ಲಿ ಅಂತಹ ಭಾಗದ ಮತದಾರರ ಪಟ್ಟಿಯನ್ನು ಕೂಲಂಕುಷವಾಗಿ ಪರಿಶೀಲಿಸಬೇಕು. ಆಳಂದ, ಚಿತ್ತಾಪುರ, ಗುಲಬರ್ಗಾ ದಕ್ಷಿಣ ಮತಕ್ಷೇತ್ರಗಳಲ್ಲಿ ಹೆಚ್ಚಿನ ಹೆಸರುಗಳು ನೋಂದಣಿಯಾಗಿರುವುದು ಕಂಡು ಬರುತ್ತಿದೆ. ಚಿತ್ತಾಪುರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಿರುವುದು ಕಂಡು ಬರುತ್ತಿದೆ.ಈ ಕುರಿತು ನಿಖರ ಕಾರಣ ಕಂಡುಕೊಳ್ಳಬೇಕು ಎಂದರು.

18ವರ್ಷ ತುಂಬಿರುವ ಮೊದಲ ಮತದಾರರಿಗೆ ಕಡ್ಡಾಯವಾಗಿ ನೋಂದಣಿಯಾಗುವ ಹಾಗೆ ಜಾಗೃತಿ ಮೂಡಿಸಬೇಕು. ಮತದಾರರ ಪಟ್ಟಿಯಲ್ಲಿ ಭಾವಚಿತ್ರವಿಲ್ಲದ ಮತದಾರರಿಗೆ ಭಾವಚಿತ್ರ ಸಲ್ಲಿಸಲು ಅವಧಿನಿಗದಿಪಡಿಸಬೇಕು. ಭಾವಚಿತ್ರ ನೀಡದ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲು ಕ್ರಮ ಕೈಗೊಳ್ಳಬೇಕು. ಮತದಾರರ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಮತದಾರರ ಹೆಸರುಗಳು ಇದ್ದಲ್ಲಿ ಅವುಗಳನ್ನು ಪರಿಶೀಲಿಸಿ ತೆಗೆದು ಹಾಕಬೇಕು ಎಂದರು. 

Advertisement

ಎಲ್ಲ ರಾಜಕೀಯ ಪಕ್ಷಗಳು ಬೂತ್‌ ಮಟ್ಟದ ಏಜೆಂಟರ್‌ನ್ನು ನೇಮಿಸಿ ಜಿಲ್ಲಾಧಿಕಾರಿ ಕಚೇರಿಗೆ ಮಾಹಿತಿ ನೀಡಬೇಕು. ಪ್ರತಿ ಶನಿವಾರ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ಬೂತ್‌ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ. ಈ ಸಭೆಗೆ ಬೂತ್‌ ಮಟ್ಟದ ಏಜೆಂಟರು ಭಾಗವಹಿಸಿ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದಲ್ಲಿ ಲಿಖೀತವಾಗಿ ಸಲ್ಲಿಸಬೇಕು ಎಂದು ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ತಿಳಿಸಿದರು.

ಜಿಲ್ಲೆಯ ವಿವಿಧ ಭಾಗಗಳಿಂದ ಚುನಾವಣೆ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ದೂರುಗಳನ್ನು ಸ್ವೀಕರಿಸಲು 1077 ಸಹಾಯವಾಣಿ ಸ್ಥಾಪಿಸಲಾಗಿದೆ. ಈ ಸಹಾಯವಾಣಿಗೆ ಬರುವ ಕರೆಗಳನ್ನು ಉತ್ತರಿಸಲು ಚುನಾವಣಾ ಪ್ರಕ್ರಿಯೆ ಮಾಹಿತಿಯುಳ್ಳ ಸಿಬ್ಬಂದಿ
ನೇಮಿಸಬೇಕು. ಎಲ್ಲ ತಾಲೂಕುಗಳಲ್ಲಿ ಸಹಾಯವಾಣಿ ಪ್ರಾರಂಭಿಸಬೇಕು. ಜೊತೆಗೆ ವಾಟ್ಸ್‌ಪ್‌ ನಂಬರ್‌ ಸಹಿತ ಪ್ರಚುರಪಡಿಸಬೇಕು. ಮತದಾರರ ಪಟ್ಟಿ ಪರಿಷ್ಕರಣೆಗೆ ಆಗಮಿಸಿದ ಅರ್ಜಿಗಳನ್ನು ಈಗಿನಿಂದಲೇ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದರು.

ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಮಾತನಾಡಿ, ಯಾವುದೇ ಮತಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಒಂದೇ ಬಾರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಹಾಗೂ ತೆಗೆದು ಹಾಕಲು ಅರ್ಜಿಗಳನ್ನು ಸಲ್ಲಿಸಿದಲ್ಲಿ ಅವುಗಳನ್ನು ಸ್ವೀಕರಿಸಬಾರದು. ಮತದಾರರ ಪಟ್ಟಿಯಲ್ಲಿ ಹೆಚ್ಚಿನ ಪ್ರಮಾಣದ ಹೆಸರು ನೋಂದಣಿಯಾಗಿರುವ ಹಾಗೂ ತೆಗೆದು ಹಾಕಿರುವ ಕುರಿತು ಅಧಿಕಾರಿಗಳಿಂದ ಪರಿಶೀಲನೆ ಮಾಡಬೇಕು. ಯಾವುದೇ ಮತಕ್ಷೇತ್ರದ ಭಾಗಗಳಲ್ಲಿ ಶೂನ್ಯ ಹೆಸರು ನೋಂದಣಿ ಹಾಗೂ ಹೆಸರು ತೆಗೆದು ಹಾಕದೇ ಇರುವುದನ್ನು ಸಹ ಗಮನಿಸಿ ಪರಿಶೀಲಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ| ರಾಜಾ ಪಿ., ಮಹಾನಗರ ಪಾಲಿಕೆ ಆಯುಕ್ತ ಆರ್‌.ಎಸ್‌. ಪೆದ್ದಪ್ಪಯ್ಯ, ಸೇಡಂ ಸಹಾಯಕ ಆಯುಕ್ತೆ ಬಿ. ಸುಶೀಲಾ, ಕಲಬುರಗಿ ಸಹಾಯಕ ಆಯುಕ್ತ ರಾಚಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಚುನಾವಣಾ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಚುನಾವಣಾ ಶಿರಸ್ತೇದಾರ ಸಂಜು ಹಾಗೂ ಎಲ್ಲ ತಾಲೂಕಿನ ತಹಶೀಲ್ದಾರರು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next