Advertisement

ಕಾದಂಬರಿ ಕಟ್ಟುವ ಕತೆಗಳು

10:06 AM Dec 09, 2019 | mahesh |

ಕಾದಂಬರಿ ಎಂದರೆ ಒಂದು ಮಹಾ-ಕತೆ ; ಸೃಷ್ಟಿಯಲ್ಲಿ ಕ್ಷುಲ್ಲಕವಾದದ್ದು ಯಾವುದೂ ಇಲ್ಲ ಎಂಬ ನಂಬಿಕೆಯಲ್ಲಿ ಎಲ್ಲವನ್ನೂ ಒಳಗೊಳ್ಳುವಂಥ ಒಂದು ಜೀವನಗಾಥೆ. ದಿನವೆಂಬ ಪೂರ್ಣ ಅನುಭವವೊಂದು ಕ್ಷಣ ಕ್ಷಣಗಳಾಗಿ ಒಡೆದು, ಬಿಡಿ ಅನುಭವಗಳಾಗಿ ಚದುರಿಹೋಗುತ್ತಿರುವ ಕಾಲಘಟ್ಟವಿದು. ಮೊಬೈಲ್‌ನ ಸಣ್ಣ ಸ್ಕ್ರೀನ್‌ನಲ್ಲಿ ಸಣ್ಣ ಸಣ್ಣದನ್ನೇ ಬಯಸುವ ಮನಸ್ಸುಗಳ ನಡುವೆ ಮಹತ್ತಾದದ್ದು ಯಾರಿಗೆ ಬೇಕು ಎಂಬ ಪ್ರಶ್ನೆ ಎದುರಾಗುವುದು ಸಹಜ, ಆದರೆ, ದೀರ್ಘ‌ ಬರಹಗಳಿಗೂ ಓದುಗರಿದ್ದಾರೆ ಎಂಬುದಕ್ಕೆ ಸಮರ್ಥನೆಯಾಗಿ ಕನ್ನಡದ ಸೃಷ್ಟಿಶೀಲ ಲೇಖಕರು ಕಾದಂಬರಿಗಳನ್ನು ಬರೆಯುತ್ತಲೇ ಇದ್ದಾರೆ. ಅವರಲ್ಲಿ ಇಬ್ಬರು ಬರೆಯುವ ಕ್ರಿಯೆಗೆ ಕೊಂಚ ವಿರಾಮ ಕೊಟ್ಟು ಮಾತುಕತೆಗೆ ಸಿಕ್ಕಿದಾಗ.

Advertisement

ದೊಡ್ಡ ಪುಸ್ತಕಗಳನ್ನು ಓದುವವರು ಈಗಲೂ ಸಾಕಷ್ಟಿದ್ದಾರೆ!

ಕತೆ ಮತ್ತು ಕಾದಂಬರಿಗಳಲ್ಲಿ ನಿಮಗೆ ಪ್ರಿಯವಾದ ಪ್ರಕಾರ ಯಾವುದು?
ವ್ಯಾಸರಾವ್‌ ನಿಂಜೂರ್‌ : ಕತೆ, ಕಾದಂಬರಿಗಳನ್ನು ಒಟ್ಟೊಟ್ಟಿಗೆ ಬರೆದು ಖ್ಯಾತರಾದವರ ದೊಡ್ಡ ಪಟ್ಟಿಯೇ ಇದೆ. ಉದಾಹರಣೆಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಯಶವಂತ ಚಿತ್ತಾಲ, ವಾಸರಾಯ ಬಲ್ಲಾಳ, ಯು. ಆರ್‌. ಅನಂತಮೂರ್ತಿ, ಪಿ. ಲಂಕೇಶ್‌ ಮೊದಲಾದವರು. ಕಾದಂಬರಿ ಸಾರ್ವಭೌಮ ಎಂದು ಕರೆಸಿಕೊಂಡ ಅನಕೃ ಕೂಡಾ ಸಣ್ಣಕತೆ ಬರೆದಿದ್ದಾರೆ. ಕತೆ ಅಥವಾ ಕಾದಂಬರಿ ಕ್ಷೇತ್ರದಲ್ಲಷ್ಟೇ ವ್ಯವಸಾಯ ಮಾಡಿದವರು. ಅದು ಅವರವರ ಅಭಿವ್ಯಕ್ತಿ ಮಾಧ್ಯಮದ ಆಯ್ಕೆ. ನನಗೆ ಪ್ರಿಯವಾದುದು ಸಣ್ಣ ಕತೆ. ಕಾವು ಕೊಟ್ಟು ಕತೆಯನ್ನು ಕಾಗದಕ್ಕಿಳಿಸುವುದು ಕಠಿನ ತಪಸ್ಸಿನಂತಿದ್ದರೂ, ಕಾದಂಬರಿಯ ಹರಹಿನಲ್ಲಿ ಯೋಚನಾಲಹರಿ ದಾರಿತಪ್ಪುವ ಭೀತಿ ಕತೆಯಲ್ಲಿಲ್ಲ.

ನೀವು ಇತ್ತೀಚೆಗೆ ಬರೆಯುತ್ತಿರುವ ಕಾದಂಬರಿ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ…
-ನನ್ನ ಕಾದಂಬರಿ ತೆಂಕನಿಡಿಯೂರಿನ ಕುಳುವಾರಿಗಳುವಿನಲ್ಲಿ ಲೇಖಕನೇ ಒಂದು ಪಾತ್ರ. ಇಲ್ಲಿ ಗುಲಾಬಿಯಮ್ಮ, ಜಲ್ಲ ನಾಯ್ಕ ಹಾಗೂ ಮುಖ್ಯವಾಗಿ ಚಂಪಾರಾಣಿ ತಮ್ಮನ್ನು ನಡು ನೀರಿನಲ್ಲಿ ಕೈಬಿಟ್ಟಿದ್ದಾಗಿ ಅಲವತ್ತುಕೊಂಡಿದ್ದಾರೆ. ಗುಲಾಬಿಯಮ್ಮನಂತೂ “ನನಗೆ ಗತಿ ಕಾಣಿಸಿ, ಮಾಸ್ಟ್ರೆ” ಎಂದು ಬೇಡಿಕೊಂಡಿದ್ದಾಳೆ. ನನ್ನ ನಿಯೋಜಿತ ಕಾದಂಬರಿ ಕುಳುವಾರಿಗಳುವಿನ ಎರಡನೆಯ ಭಾಗ ಎನ್ನುವ ಹಾಗಿದ್ದರೂ ಆ ಕಾದಂಬರಿಯ ಧಾಟಿಯಲ್ಲೇ ಸಾಗಲಿದೆ.

-ನೀವು ಈಗ ಬರೆಯುತ್ತಿರುವುದು ಎಷ್ಟನೆಯ ಕಾದಂಬರಿ? ಈ ಹಿಂದಿನ ತೆಂಕನಿಡಿಯೂರಿನ ಕುಳುವಾರಿಗಳು ಕಾದಂಬರಿಯ ಪಯಣ ಹೇಗಿತ್ತು ?
-ತೆಂಕನಿಡಿಯೂರಿನ ಕುಳುವಾರಿಗಳು ನನ್ನ ಮೂರನೆಯ ಕಾದಂಬರಿ. ಉಳಿದೆರಡು ಉಸಿರು ಮತ್ತು ಚಾಮುಂಡೇಶ್ವರಿ ಭವನ, ಕುಳುವಾರಿಗಳು ನನಗೆ ತುಂಬ ತೃಪ್ತಿ ನೀಡಿದ ಕಾದಂಬರಿ. ಇದಕ್ಕೆ ಕಾರಣ, ಹೆಚ್ಚು ಕಡಿಮೆ ನನ್ನ ಅನುಭವಕ್ಕೆ ಬಂದ ಪಾತ್ರ ಮತ್ತು ಸನ್ನಿವೇಶಗಳು. ಕಾದಂಬರಿ ಬರೆಯುತ್ತಿರುವಾಗ ಪಾತ್ರ ಮತ್ತು ಘಟನೆಗಳು ಕಣ್ಣೆದುರು ನಿಂತಂತಾಗುತ್ತಿತ್ತು.

Advertisement

ಕನ್ನಡದಲ್ಲಿ ಈಗ ದೊಡ್ಡ ಪುಸ್ತಕಗಳನ್ನು ಓದುವವರಿಲ್ಲ ಎಂಬ ಮಾತಿದೆ. ನಿಮಗೇನನ್ನಿಸುತ್ತದೆ?
-ನನ್ನ ಪ್ರಕಾರ ಇದು ಅರ್ಧ ಸತ್ಯ. ಮಲೆಯಲ್ಲಿ ಮದುಮಗಳು, ಮರಳಿ ಮಣ್ಣಿಗೆ, ನಟ ಸಾರ್ವಭೌಮ, ಇಜ್ಜೋಡುವಿನಂತಹ ಕಾದಂಬರಿಗಳನ್ನು ನಾನು ಮತ್ತೆ ಮತ್ತೆ ಓದಿದ್ದೇನೆ. ಓದಬೇಕೊ, ಬೇಡವೊ ಎನ್ನುವ ಆಯ್ಕೆ ಓದುಗನದ್ದು ತಾನೆ? ಈಗಲೂ ಬೃಹತ್‌ ಕಾದಂಬರಿಗಳನ್ನು ಬರೆಯುವವರ ಸಂಖ್ಯೆ ಸಾಕಷ್ಟಿದೆ.

ಕಾದಂಬರಿ ಎಂಬುದು ಒಂದು ಬಗೆಯ ಮಹಾಯಾನವಲ್ಲವೆ? ಮದ್ಯೆ ಮದ್ಯೆ ವಿರಮಿಸಬೇಕು ಅನ್ನಿಸುತ್ತದೆಯೆ?
ನೀವು ಹೇಳುವುದು ನಿಜ. ಮಧ್ಯೆ ಮಧ್ಯೆ ಸಾಕಷ್ಟು ವಿರಮಿಸುತ್ತೇನೆ. ಇದಕ್ಕೆ ನನ್ನ ಸೋಂಭೇರಿತನವೂ ಕಾರಣವಿದ್ದೀತು. ಮಾತ್ರವಲ್ಲದೆ, ನನಗೆ ಆಂತರಿಕ ತೃಪ್ತಿ ದೊರೆಯುವ ತನಕ ಕಾದಂಬರಿಯ ಓಟಕ್ಕೆ ಕಡಿವಾಣ ಹಾಕುತ್ತೇನೆ.

ವ್ಯಾಸರಾವ್‌ ನಿಂಜೂರ್‌

ಕಾದಂಬರಿ ಟೆಸ್ಟ್‌ ಮ್ಯಾಚಿನ ಹಾಗೆ !
ಈಗಾಗಲೇ ಒಂದೈದು ಕಥಾಸಂಕಲನಗಳು, ಮತ್ತೂಂದಿಷ್ಟು ಲೇಖನ ಸಂಕಲನಗಳನ್ನು ಪ್ರಕಟಿಸಿದ್ದೀರಿ. ಮತ್ತೆ ಯಾಕೆ ಈ ಕಾದಂಬರಿ ಪ್ರಕಾರ?
ಎಂ. ಎಸ್‌. ಶ್ರೀರಾಮ್‌ : ಒಂದು ಪ್ರಯತ್ನವಷ್ಟೇ. ಗಲ್ಲಿ ಕ್ರಿಕಟ್‌ ಆಡುವ ಪ್ರತಿಯೊಬ್ಬನಿ ಗೂ ಕಡೆಗೊಂದು ದಿನ ಟೆಸ್ಟ್‌ ಮ್ಯಾಚನ್ನು ಆಡಬೇಕೆನ್ನುವ ಆಕಾಂಕ್ಷೆಯಿರುತ್ತದೆ. ಲಾಂಗ್‌ ಫಾರ್ಮಾಟಿನಲ್ಲಿರುವ ಸಾಧ್ಯತೆಗಳು, ತಾಳ್ಮೆ, ತಂತ್ರದ ಏರುಪೇರು ಮತ್ತು ಓದುಗರನ್ನು ಹಿಡಿದಿಡಬೇಕಾದ ಕಥನದ ಸವಾಲುಗಳೇ ಕಾದಂಬರಿಯತ್ತ ಸೆಳೆಯುತ್ತವೆ. ಆದರೆ, ಪ್ರಕಾರ ಕೈಗೆ ದಕ್ಕಬೇಕೆ ! ಸಣ್ಣ ಕಥೆಗಳ ಸೋಮಾರಿತನಕ್ಕೆ ಒಗ್ಗಿಹೋದವನಿಗೆ ಇದೊಂದು ಸಾಧ್ಯತೆ ಆಸ್ಪಿರೇಷನಲ್ಲಾಗಿತ್ತು. ಟೆಸ್ಟ್‌ ಮ್ಯಾಚ್‌ ಆಡಿದ ತೃಪ್ತಿ ಸಿಗುತ್ತಿರುವಂತಿದೆ.

ಅಂದ ಹಾಗೆ ಇದು ಮೊದಲ ಕಾದಂಬರಿ. ಏನನ್ನಿಸಿತು ನಿಮಗೆ?
-ಖುಷಿಯಾಯಿತು. ಅದು ಕಾದಂಬರಿಯೋ ಅಲ್ಲವೋ ಇನ್ನೂ ಖಚಿತವಾಗಿಲ್ಲ. ಅದಕ್ಕೆ ನಾಮಕರಣವಾಗಿಲ್ಲ. ಸದ್ಯಕ್ಕೆ ಶೀತ ಪೆಟ್ಟಿಗೆಯಲ್ಲಿದೆ. ಕೆಲದಿನಗಳ ನಂತರ ಹೊಸ ಓದು ಕೊಟ್ಟು ಅದಕ್ಕೆ ಪಾಲಿಶ್‌ ಹಾಕುತ್ತೇನೆ. ಆನಂತರವೇ ಅದು ಕಾದಂಬರಿ ಎಂದು ಕರೆಸಿಕೊಳ್ಳಲು ಅರ್ಹ. ಅಲ್ಲಿಯವರೆಗೂ ಕೋಸಂಬರಿ ಮಾತ್ರ.

ಕತೆಗೂ ಕಾದಂಬರಿಗೂ ಏನು ವ್ಯತ್ಯಾಸ ನಿಮ್ಮ ಪ್ರಕಾರ? ಕತೆಗಳ ಗುತ್ಛವನ್ನೇ ಕಾದಂಬರಿ ಎಂದು ಕರೆಯುತ್ತೀರಾ?
-ಬಹಳವಿದೆ. ಕಥೆಗೆ ಆದಿ, ನಡು ಮತ್ತು ಅಂತ್ಯ ಸಣ್ಣ ಚೌಕಟ್ಟಿನಲ್ಲಿರುತ್ತದೆ. ಕಥೆಯ ಅಂತ್ಯ ಮುಕ್ತವಾಗಿದ್ದರೂ, ಆ ಅಂತ್ಯದ ಸಾಧ್ಯತೆಯನ್ನು ಓದುಗರು ತುಂಬಿಸಿಕೊಳ್ಳಬೇಕು. ಕಥೆಗಳ ಗುತ್ಛವನ್ನೇ ಕಾದಂಬರಿ ಎನ್ನುವುದು ಮುಕ್ತ ಅಂತ್ಯಕೊಟ್ಟು “ನೀನು ಒಂದು ಅಂತ್ಯ ಊಹಿಸಿಕೋ, ಮುಂದೆ ನನ್ನ ಕಥೆಯನ್ನು ಹೇಳುತ್ತೇನೆ’ ಎಂದು ಹೇಳಿ ಬರಹಗಾರ ಓದುಗನ ಮೇಲೆ ಎಸಗುವ ದಗಾ! ಹೀಗಾಗಿ, ಕಥೆಗಳ ಗುತ್ಛವನ್ನು ಕಾದಂಬರಿ ಎಂದು ಕರೆಯುವುದು ಸಮರ್ಪಕವಲ್ಲ. ಹಾಗೆ ಮಾಡಿದರೆ ಕಥೆಗೂ ಕಾದಂಬರಿಗೂ ಅನ್ಯಾಯ ಮಾಡಿದಂತೆ. ಆದರೆ, ನಾನು ಮಾಡಹೊರಟಿರುವುದು ಅಲ್ಲಿಯೂ ಸಂದು ಇಲ್ಲಿಯೂ ಸಲ್ಲ ಬಹುದಾದ ಪ್ರಯೋಗ. ಗಿಮಿಕ್‌ ಅನ್ನಬಹುದು. ಗೆಲ್ಲಬಹುದು. ಸೋಲಬಹುದು.ಯಾವುದೇ ತೀರ್ಪಿಗೆ ತಯಾರಾಗಿದ್ದೇನೆ.

ಎಲ್ಲವೂ ಕಿರಿದಾಗುತ್ತಿರುವ ಈ ಕಾಲದಲ್ಲಿ ದೊಡ್ಡದನ್ನು ಬರೆಯುವ ಹಂಬಲವೇಕೆ?
-ಹಾಗೇ ಸುಮ್ಮನೆ. ನನಗೆ ನಾನೇ ಒಡ್ಡಿಕೊಂಡ ಸವಾಲು. ಬೇರೇನೂ ಮಹತ್ವಾಕಾಂಕ್ಷೆಯಿಲ್ಲ.

ನೀವು ಮೆಚ್ಚಿದ ಬೇರೆ ದೇಶದ ಲೇಖಕರ ಕಾದಂಬರಿಯ ಬಗ್ಗೆ ಹೇಳಿ?
-ಮಿಲನ್‌ ಕುಂದೇರಾನ ಫೆಸ್ಟಿವಲ್‌ ಆಫ್ ಇನ್ಸಿಗ್ನಿಫಿಕೆನ್ಸ್‌. ಕಾಲ, ಸ್ಥಳ ಪಲ್ಲಟವನ್ನು ಮಾಡುತ್ತ, ಲೇವಡಿಯ ಧಾಟಿಯಲ್ಲಿ ಬರೆದ ಗಂಭೀರ, ಹಗುರ, ಸಣ್ಣ ಕಾದಂಬರಿ. ನೊಬೆಲ್‌ ಬಹುಮಾನ ಸಿಗಲೇಬೇಕಿದ್ದ ಝೆಕ್‌ ಮೂಲದ ಫ್ರೆಂಚ್‌ ಲೇಖಕ. ಮೊದಲಿಗೆ ಝೆಕ್‌ ಭಾಷೆಯಲ್ಲಿ ಬರೆಯುತ್ತಿದ್ದ. ನಂತರ ದೇಶಾಂತರ-ವಲಸೆಯಿಂದ ಪ್ಯಾರಿಸ್ಸಿಗೆ ಹೋದ. ಅಲ್ಲೂ ಝೆಕ್‌ ಭಾಷೆಯಲ್ಲೇ ಕಾದಂಬರಿ ಬರೆಯುತ್ತಿದ್ದನಾದರೂ ಪ್ರಕಟವಾಗುತ್ತಿದ್ದುದು ಅನುವಾದದಲ್ಲಿ. ಕಡೆಗೆ ಫ್ರೆಂಚ್‌ ಭಾಷೆಯನ್ನು ತನ್ನದಾಗಿಸಿಕೊಂಡು ಅದರಲ್ಲೇ ಸಶಕ್ತವಾಗಿ ಬರೆಯಲಾರಂಭಿಸಿದ. ನಾನು ಎಂದೆಂದಿಗೂ ಮೆಚ್ಚುವ ಪ್ರಿಯ ಲೇಖಕ ಮಿಲನ್‌ ಕುಂದೇರಾ.

ಎಂ. ಎಸ್‌. ಶ್ರೀರಾಮ್‌


ದೀಪಧಾರಿಣಿಯರ ಧ್ವನಿ
ಬರುವ ಡಿ. 14 ಮತ್ತು 15ರಂದು ದೇವದಾಸಿ ತಾಯಂದಿರ ಮತ್ತು ಮಕ್ಕಳ ಪ್ರಥಮ ರಾಜ್ಯಮಟ್ಟದ ಸ್ವಾಭಿಮಾನ ಸಮಾವೇಶವನ್ನು ಹೊಸಪೇಟೆಯಲ್ಲಿ ಆಯೋಜಿಸಲಾಗಿದೆ. ಒಂಟಿಯಾಗಿದ್ದಾಗ ತಮ್ಮ ಗುರುತನ್ನು ಹೇಳಿಕೊಳ್ಳಲು ಸಂಕೋಚ ಪಡುತ್ತಿದ್ದ ದೇವದಾಸಿಯರು ಇದೀಗ ಜಾಗೃತಗೊಂಡು ಒಗ್ಗಟ್ಟಿನ ಶಕ್ತಿಯಾಗಿ ಮೂಡಿಬಂದಿದ್ದಾರೆ.

ಬ್ಯಾಂಕಿನಲ್ಲಿ ಅರ್ಜಿ ಭರ್ತಿಮಾಡುವಾಗ ಬ್ಯಾಂಕ್‌ ಅಧಿಕಾರಿ, “ಗಂಡನ ಹೆಸರು’ ಬರೆಯುವಂತೆ ಹೇಳುತ್ತಿದ್ದರು. ನಾನು “ದೇವದಾಸಿ’ ಎಂದು ಹೇಳಿದರೂ ಆಕೆಗೆ ಅರ್ಥವಾಗಲಿಲ್ಲ. “ಮಕ್ಕಳ ತಂದೆ ಹೆಸರು ಬರೀರಿ…’ ಎಂದು ದಬಾಯಿಸುತ್ತಿದ್ದರು. ಇಡೀ ಬ್ಯಾಂಕಿನವರು ಒಂದು ಕ್ಷಣ ತಿರುಗಿ ನನ್ನತ್ತ ನೋಡುತ್ತಿದ್ದರೆ ಮನಸ್ಸು ತುಂಬ ನೋವಾಯಿತು” ಎಂದು ಹೊಸಪೇಟೆಯ ನಾಗೇನಹಳ್ಳಿಯ ಉಷಾ ಹೇಳುವಾಗ ದೇವದಾಸಿ ಪದ್ಧತಿಯ ಕಹಿಮುಖವೊಂದು ಅನಾವರಣಗೊಳ್ಳುತ್ತಿತ್ತು.

ಮನೆಯ ದೀಪ ಬೆಳಗಲಿ ಎಂಬ ಆಶಯದಿಂದ, ಅಥವಾ ಧಾರ್ಮಿಕ ನಂಬಿಕೆಗಳ ಕಾರಣಕ್ಕಾಗಿ, ಸಾಮಾಜಿಕ ಕಾರಣಕ್ಕಾಗಿ ಹಿರಿಯರು ಮನೆಮಗಳಿಗೆ ಮುತ್ತು ಕಟ್ಟಿಸುತ್ತಾರೆ. ಆ ಬಳಿಕ ಆಕೆ ಮನೆಯ ಮಗನಂತೆ ಜವಾಬ್ದಾರಿಗಳನ್ನು ನಿಭಾಯಿಸಬೇಕು ಎಂಬ ನಂಬಿಕೆ ಇದೆ. ತನ್ನ ಕೊರಳಿಗೆ ಕಟ್ಟಿದ ಮುತ್ತು ಎಷ್ಟು ಪವಿತ್ರವೋ, ತನ್ನ ಬಾಳಿನಲ್ಲಿ ಬರುವ ವ್ಯಕ್ತಿಯ ಸಂಸಾರವೂ ಅಷ್ಟೇ ಪವಿತ್ರವಾದುದು ಎಂಬ ನಂಬಿಕೆಯನ್ನು ಬೆಳೆಸಿಕೊಳ್ಳುವಂತೆಯೂ ಆಕೆಗೆ ಹೇಳಿಕೊಡುತ್ತಾರೆ.

ಆದ್ದರಿಂದಲೇ ಹೆಚ್ಚಿನ ದೇವದಾಸಿಯರು ಮಕ್ಕಳ ಅಪ್ಪನ ಹೆಸರು ಹೇಳುವುದಿಲ್ಲ. ಈ ಸಂಪ್ರದಾಯದಿಂದ ಮಕ್ಕಳು ಅನುಭವಿಸುವ ತೊಂದರೆಗಳು ಒಂದರೆಡಲ್ಲ. ಅತ್ತ ತಮ್ಮ ಬಾಳಿನಲ್ಲಿ ಒಬ್ಬ ವ್ಯಕ್ತಿ ಬಂದುಹೋದ ಬಳಿಕ ಅನಿವಾರ್ಯ ಪರಿಸ್ಥಿತಿಯ ಹೊರತಾಗಿ ಮತ್ತೂಬ್ಬನ ಜೊತೆ ಸಂಸಾರಕ್ಕೆ ದೇವದಾಸಿಯರು ಮುಂದಾಗುವುದಿಲ್ಲ. ತಮ್ಮ ಸರೀಕರ ಮುಂದೆ ಹಾಗೂ ಊರಿನಲ್ಲಿಯೂ ಗೌರವದಿಂದ ಬಾಳುವೆ ಮಾಡುವ ಅವರು ದೇವದಾಸಿ ಪರಿಕಲ್ಪನೆಯ ಅರಿವಿಲ್ಲದವರ ಮುಂದೆ ತಮ್ಮ ಸಂಪ್ರದಾಯಗಳ ಬಗ್ಗೆ ಹೇಳಿ, ಸಮರ್ಥನೆಗಳನ್ನು ನೀಡಿ ಸುಸ್ತಾಗಬೇಕಾಗುತ್ತದೆ. ಯಾಕೆಂದರೆ, ಉತ್ತರಕರ್ನಾಟಕದ 14 ಜಿಲ್ಲೆಗಳಲ್ಲಿ ಮಾತ್ರ ದೇವದಾಸಿ ಪದ್ಧತಿ ಆಚರಣೆಯಲ್ಲಿದೆ. ದೇವದಾಸಿಯರನ್ನು ಜೋಗತಿ, ಜೋಗಿನಿ, ಆರಾಧಿನಿ, ಬಸವಿ ಎಂಬ ಹೆಸರಿನಲ್ಲಿ ಗುರುತಿಸುವುದುಂಟು. ಚಿತ್ರದುರ್ಗ, ದಾವಣಗೆರೆ, ಹಾವೇರಿ, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಯಾದಗಿರಿ, ಗುಲ್ಬರ್ಗ, ರಾಯಚೂರು, ಕೊಪ್ಪಳ, ಗದಗ, ಬಳ್ಳಾರಿಯಲ್ಲಿ ಈ ದೇವದಾಸಿ ಆಚರಣೆ ಇದೆ.

ಈ ಊರುಗಳಿಂದ ಹೊರಹೋದಾಗ ಅಥವಾ ಹೊರ ಜಿಲ್ಲೆಗಳ ಜನರು ಇಲ್ಲಿ ಬಂದಾಗ ದೇವದಾಸಿಯರ ಬಗ್ಗೆ ತಪ್ಪು ತಿಳಿಯುವ ಸಂದರ್ಭಗಳೇ ಜಾಸ್ತಿ. ಉಷಾ ಅವರ ಮಗನೂ ಈ ಮಾತನ್ನು ಸಮರ್ಥಿಸುತ್ತಾನೆ. ಆನ್‌ಲೈನ್‌ ಅರ್ಜಿ ಸಲ್ಲಿಸುವಾಗ ಅಪ್ಪನ ಹೆಸರು ಉಲ್ಲೇಖೀಸುವುದು ಕಡ್ಡಾಯ ಆಗಿರುತ್ತದೆ. ಮತ್ತೆ ಕೆಲವೆಡೆ ಅಪ್ಪ ಇಲ್ಲದ ಮಕ್ಕಳೆಂದು ಕೆಟ್ಟದಾಗಿ ಮಾತನಾಡುತ್ತಾರೆ. ಇನ್ನು ಕೆಲವೊಮ್ಮೆ ಎಲ್ಲ ಗೊತ್ತಿದ್ದೂ ಮೇಲ್ಜಾತಿಯವರು ಅವಮಾನ ಮಾಡುವುದೂ ಇದ್ದೇ ಇದೆ. ಇಂತಹ ಅವಮಾನ, ಪ್ರಶ್ನೆಗಳಿಗೆ ಹೆದರಿಯೇ ಎಷ್ಟೋ ಮಕ್ಕಳು ಶಿಕ್ಷಣವನ್ನು ಮೊಟಕುಗೊಳಿಸಿದ ಉದಾಹರಣೆಗಳಿವೆ.

ದೇವದಾಸಿ ಪದ್ಧತಿ ನಿಷೇಧ ಕಾಯಿದೆ
1983ರಲ್ಲಿ ದೇವದಾಸಿ ಪದ್ಧತಿ ನಿಷೇಧ ಕಾಯಿದೆ ಜಾರಿಯಾಯಿತು. ಈ ಕಾಯಿದೆ ಆಚರಣೆಯನ್ನು ನಿಷೇಧಿಸುವ ಕುರಿತು ಹೆಚ್ಚಾಗಿ ಮಾತನಾಡಿತೇ ಹೊರತು, ಅದಾಗಲೇ ಮುತ್ತುಕಟ್ಟಿಸಿಕೊಂಡವರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಯಾವುದೇ ಪರಿಹಾರ ಸೂಚಿಸಲಿಲ್ಲ. ಕಾಯಿದೆ ಜಾರಿಯಾಗಿ 10 ವರ್ಷದ ಬಳಿಕ ಅಂದರೆ 1993ರಲ್ಲಿ ದೇವದಾಸಿ ಯರ ಸಮೀಕ್ಷೆ ಕಾರ್ಯ ಆರಂಭವಾಯಿತು. 2007ರಲ್ಲಿ ಎರಡನೆಯ ಸುತ್ತಿನ ಸಮೀಕ್ಷೆ ನಡೆಯಿತು. 45 ವರ್ಷ ದಾಟಿದ ದೇವದಾಸಿಯರಿಗೆ ಸರ್ಕಾರದ ಮುತುವರ್ಜಿಯಿಂದ ಪಿಂಚಣಿ ನೀಡಲಾಯಿತು. ರಾಜ್ಯದಲ್ಲಿ 44,660 ಮಂದಿ ದೇವದಾಸಿ ಮಹಿಳೆಯರಿದ್ದರೂ ಪಿಂಚಣಿ ದೊರೆಯುತ್ತಿರುವುದು ಕೇವಲ 26 ಸಾವಿರ ಮಂದಿಗೆ ಮಾತ್ರ.

ಆದರೆ, ಈ ಪಿಂಚಣಿಯನ್ನು ನಂಬಿಕೊಂಡು ದೇವದಾಸಿಯರ ಮಕ್ಕಳು ಬದುಕು ಕಟ್ಟಿಕೊಳ್ಳುವುದಾದರೂ ಹೇಗೆ? ಅವರ ಶಿಕ್ಷಣ, ಉದ್ಯೋಗಕ್ಕೆ ಒತ್ತಾಸೆ ದೊರೆಯಬೇಡವೆ? ಇಡೀ ಆಚರಣೆಯಲ್ಲಿ ದೇವದಾಸಿಯರ ಜೊತೆ ಕೆಲವೇ ವರ್ಷಗಳ ಕಾಲ ಜೀವನ ಮಾಡಿ, ಬಳಿಕ ಮಾಯವಾಗಿಬಿಡುವ ಪುರುಷರ ಉÇÉೇಖವೇ ಇಲ್ಲ. ಮಕ್ಕಳಿಗೆ ತಂದೆ ಯಾರೆಂದು ಗೊತ್ತಿದ್ದರೂ ಸಂಪ್ರದಾಯದ ಹೆಸರಿನಲ್ಲಿ ತಂದೆಯ ಹೆಸರನ್ನು ಹೇಳದಂತೆ ಅವರಿಗೆ ಸೂಚಿಸಲಾಗುತ್ತದೆ. ಜನ್ಮದಾತನನ್ನು ಹೊಣೆಗಾರರನ್ನಾಗಿ ಮಾಡುವುದು ನ್ಯಾಯವಲ್ಲವೆ?

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ತಳಸಮುದಾಯ ಅಧ್ಯಯನ ಕೇಂದ್ರವು “ದೇವದಾಸಿ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯಿದೆ 2018’ರ ಕರಡು ಮಾದರಿಯನ್ನು ಸರ್ಕಾರಕ್ಕೆ ಕಳೆದ ವರ್ಷವೇ ಸಲ್ಲಿಸಿದೆ. ಈ ಕರಡುರಚನೆಯ ಸಂದರ್ಭದಲ್ಲಿ ದೇವದಾಸಿ ತಾಯಂದಿರ ಮಕ್ಕಳೇ ಕ್ಷೇತ್ರಕಾರ್ಯ ನಡೆಸಿದ್ದಾರೆ. ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತ, ತಮ್ಮ ಸಮಾಜದ ಏಳಿಗೆಗೆ ಅಗತ್ಯವಿರುವ ಕಾನೂನು ರೂಪುಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಆ ನಿಟ್ಟಿನಲ್ಲಿ 1983ರ ಕಾಯಿದೆಯಲ್ಲಿ ಉಲ್ಲೇಖವಿಲ್ಲದ ಪುನರ್ವಸತಿ ಯೋಜನೆಯ ಅಂಶಗಳನ್ನೂ ಹೊಸ ಕಾಯಿದೆಯಲ್ಲಿ ಸೇರಿಸುವಂತೆ ಹೇಳಿದ್ದಾರೆ. ಅಷ್ಟೇ ಅಲ್ಲ, ದೇವದಾಸಿ ತಾಯಿ ಮತ್ತು ಮಕ್ಕಳು ಬಯಸಿದರೆ ಡಿಎನ್‌ಎ ಪರೀಕ್ಷೆ ನಡೆಸಿ ತಂದೆಯ ಹೆಸರನ್ನು ಹೇಳುವ ಅವಕಾಶ ಕಲ್ಪಿಸುವಂತೆಯೂ ಈ ಕರಡಿನಲ್ಲಿ ಆಗ್ರಹಿಸಲಾಗಿದೆ- ಎಂದು ಹೇಳುತ್ತಾರೆ ತಳಸಮುದಾಯ ಅಧ್ಯಯನ ಕೇಂದ್ರದ ಸಂಶೋಧಕ ಡಾ. ಆರ್‌.ವಿ. ಚಂದ್ರಶೇಖರ್‌.

ಮುತ್ತುಕಟ್ಟಿಸಿಕೊಂಡ ಬಾಲಕಿಯ ತಂದೆ ಮತ್ತು ತಾಯಿಗೆ ಶಿಕ್ಷೆ ವಿಧಿಸಲಾಗುವುದು ಎಂಬ ಉಲ್ಲೇಖ 1983ರ ಕಾಯಿದೆಯಲ್ಲಿದೆ. ಆದರೆ, ಮುತ್ತುಕಟ್ಟುವ ಶಾಸ್ತ್ರ ಮಾಡಿಸಿದ ದೇವಸ್ಥಾನಗಳ ಪೂಜಾರಿ, ಈ ಆಚರಣೆಗೆ ಪ್ರೋತ್ಸಾಹ ನೀಡಿದ ಇತರ ವ್ಯಕ್ತಿಗಳಿಗೂ ಶಿಕ್ಷೆಯಾಗಬೇಕಲ್ಲವೆ, ಆ ಊರಿನ ಪಂಚಾಯಿತಿಯೂ ಹೊಣೆಯಲ್ಲವೆ, ಎಂದು ಅವರು ಪ್ರಶ್ನಿಸುತ್ತಾರೆ.

ಬೃಹತ್‌ ಯೋಜನೆಗಳಲ್ಲಿ ಭೂಮಿ ಕಳೆದುಕೊಂಡು ಸಂತ್ರಸ್ತರಾಗುವವರಿಗೆ ಏಕಕಾಲಕ್ಕೆ ಪುನರ್ವಸತಿ ಯೋಜನೆಗಳನ್ನು ಜಾರಿಮಾಡುವ ಕ್ರಮವಿದೆ. ಅದೇ ಮಾದರಿಯಲ್ಲಿ ಉತ್ತರಕರ್ನಾಟಕದ 14 ಜಿಲ್ಲೆಗಳಲ್ಲಿ ಸರ್ಕಾರವು ಬೃಹತ್‌ ಪ್ರಮಾಣದಲ್ಲಿ ಪುನರ್ವಸತಿ ಯೋಜನೆಗಳನ್ನು ಜಾರಿಮಾಡಿ ಎರಡು ತಲೆಮಾರು ದಾಟುವಷ್ಟರಲ್ಲಿ ದೇವದಾಸಿ ಪದ್ಧತಿ ಸಂಪೂರ್ಣ ನಿಲ್ಲುವಂತೆ, ಅವರ ಮಕ್ಕಳು, ಮೊಮ್ಮಕ್ಕಳು ಸ್ವಾಭಿಮಾನದ ಜೀವನ ನಡೆಸಲು ಅನುಕೂಲ ಆಗುವಂತೆ ಕ್ರಮತೆಗೆದುಕೊಳ್ಳಬೇಕು ಎಂದು ಹೊಸ ಕರಡು ಆಗ್ರಹಿಸುತ್ತದೆ ಎಂದು ಚಂದ್ರಶೇಖರ್‌ ಹೇಳುತ್ತಾರೆ.

ಈ ನಿಟ್ಟಿನಲ್ಲಿ ಸರ್ಕಾರವನ್ನು ಆಗ್ರಹಿಸುವ ಉದ್ದೇಶದಿಂದ ವಿಮುಕ್ತ ದೇವದಾಸಿ ಮಹಿಳೆಯರ ಮತ್ತು ಮಕ್ಕಳ ವೇದಿಕೆ ರೂಪುಗೊಂಡಿದೆ. ಇದೀಗ ಹೊಸಪೇಟೆಯಲ್ಲಿರುವ ಸಖಿ ಸಂಸ್ಥೆ ಹಾಗೂ ತಳಸಮುದಾಯಗಳ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಇದೇ ಡಿ. 14 ಮತ್ತು 15ರಂದು ದೇವದಾಸಿ ತಾಯಂದಿರ ಮತ್ತು ಮಕ್ಕಳ ಪ್ರಥಮ ರಾಜ್ಯಮಟ್ಟದ ಸ್ವಾಭಿಮಾನ ಸಮಾವೇಶವನ್ನು ಆಯೋಜಿಸಲಾಗಿದೆ. ಒಂಟಿಯಾಗಿದ್ದಾಗ ತಮ್ಮ ಗುರುತನ್ನು ಹೇಳಿಕೊಳ್ಳಲು ಮುಜುಗರ ಪಡುತ್ತಿದ್ದ ದೇವದಾಸಿಯರು ಇದೀಗ ಜಾಗೃತಗೊಂಡು ಒಗ್ಗಟ್ಟಿನ ಶಕ್ತಿಯಾಗಿ ಮೂಡಿಬಂದಿದ್ದಾರೆ. ಅವರ ಆರೋಗ್ಯ, ಸಾಮಾಜಿಕ ಸ್ಥಾನಮಾನಕ್ಕೆ ಒತ್ತಾಸೆನೀಡುವ ನಿಟ್ಟಿನಲ್ಲಿ ಸರ್ಕಾರ ಸಹೃದಯತೆಯಿಂದ ಸಮಸ್ಯೆಯನ್ನು ಕೇಳಬೇಕಾಗಿದೆ ಎನ್ನುತ್ತಾರೆ ಸಖಿ ಸಂಸ್ಥೆಯ ನಿರ್ದೇಶಕಿ ಡಾ. ಭಾಗ್ಯಲಕ್ಷ್ಮಿ.

ಕೋಡಿಬೆಟ್ಟು ರಾಜಲಕ್ಷ್ಮಿ

Advertisement

Udayavani is now on Telegram. Click here to join our channel and stay updated with the latest news.

Next