ರಾಯ್ ಪುರ್: ನೂತನ ಕೋವಿಡ್ 19 ಮಾರಣಾಂತಿಕ ವೈರಸ್ ಇಡೀ ಜಗತ್ತನ್ನೇ ಕಂಗೆಡಿಸಿದೆ. ಮತ್ತೊಂದೆಡೆ ಲಾಕ್ ಡೌನ್ ನಡುವೆಯೇ ಚತ್ತೀಸ್ ಗಢದಲ್ಲಿ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಈ ನವಜಾತ ಶಿಶುಗಳಿಗೆ “ಕೊ…ನಾ” ಮತ್ತು ಕೋವಿಡ್ ಎಂದು ಹೆಸರಿಡಲಾಗಿದೆಯಂತೆ!
ಈ ಎರಡು ಶಬ್ದಗಳು ಭಾರತ ಸೇರಿದಂತೆ ಜಾಗತಿಕವಾಗಿ ಎಲ್ಲರ ಮನಸ್ಸಿನಲ್ಲಿ ಭಯ ಹುಟ್ಟಿಸಿದೆ. ಆದರೆ ರಾಯ್ ಪುರದ ದಂಪತಿ ಮಾತ್ರ ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ತಮಗೆ ಜನಿಸಿದ ಒಂದು ಗಂಡು, ಒಂದು ಹೆಣ್ಣು ಅವಳಿ ಮಕ್ಕಳಿಗೆ ಅದೇ ವೈರಸ್ ನ ಹೆಸರು ಇಟ್ಟಿರುವುದಾಗಿ ವರದಿ ತಿಳಿಸಿದೆ.
ಲಾಕ್ ಡೌನ್ ನಿಂದ ಇಡೀ ದೇಶದಲ್ಲಿ ನಿತ್ಯದ ಜನಜೀವನ ಅಸ್ತವ್ಯಸ್ತವಾಗಿದೆ. ಈ ಹೆಸರು ಕಠಿಣ ದಿನಗಳ ಪರಿಸ್ಥಿತಿಯನ್ನು ನೆನಪಿಸಲಿದೆ ಎಂದು ಹೇಳಿದೆ. ಲಾಕ್ ಡೌನ್ ಸಂದರ್ಭದಲ್ಲಿ ಮಾರ್ಚ್ 27ರಂದು ಸರ್ಕಾರಿ ಆಸ್ಪತ್ರೆಯಲ್ಲಿ ಅವಳಿ ಶಿಶುಗಳಿಗೆ ಜನ್ಮ ನೀಡಿರುವುದಾಗಿ ವರದಿ ವಿವರಿಸಿದೆ.
ನಮಗೆ ಒಂದು ಗಂಡು, ಒಂದು ಹೆಣ್ಣು ಮಗು ಮಾರ್ಚ್ 27ರಂದು ಬೆಳಗ್ಗೆ ಜನಿಸಿದ್ದು, ನಾವು ಗಂಡು ಮಗುವಿಗೆ (ಕೋವಿಡ್) ಹಾಗೂ ಹೆಣ್ಣು ಮಗುವಿಗೆ (ಕೊ…ನಾ) ಎಂದು ಹೆಸರಿಟ್ಟಿರುವುದಾಗಿ 27ವರ್ಷದ ತಾಯಿ ಪ್ರೀತಿ ವರ್ಮಾ ತಿಳಿಸಿದ್ದಾಳೆ.
ಮಕ್ಕಳಿಗೆ ಜನ್ಮ ನೀಡಲು ಆಸ್ಪತ್ರೆಗೆ ಆಗಮಿಸಬೇಕಾಗಿದ್ದರೆ ನಾನು ಮತ್ತು ಗಂಡ ತುಂಬಾ ಕಷ್ಟಗಳನ್ನು ಅನುಭವಿಸಿದ್ದೇವು. ಈ ದಿನದ ನಮಗೆ ಸದಾ ನೆನಪಿನಲ್ಲಿ ಇರಬೇಕು ಎಂದು ನಿರ್ಧರಿಸಿ ವೈರಸ್ ನ ಹೆಸರನ್ನು ಇಟ್ಟಿರುವುದಾಗಿ ತಿಳಿಸಿದ್ದಾರೆ.