ಮುಂಬಯಿ: ಬೊರಿವಲಿ ಪೂರ್ವದ ಸೈಂಟ್ ಕ್ಸೇವಿಯರ್ ಹೈಸ್ಕೂಲ್ ವತಿಯಿಂದ ಎಟಿಎಲ್ ಕಮ್ಯೂನಿಟಿ ದಿನಾಚರಣೆಯು ಎ. 16ರಂದು ಶಾಲಾ ಸಭಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ| ಎ. ಎಫ್. ಪಿಂಟೋ ಅವರು, ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪ್ರತಿಭಾನ್ವಿತರಾಗಿ ಬೆಳೆಯಬೇಕು ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಶಿಕ್ಷಣ ಸಂಸ್ಥೆಯು ನಿರಂತರವಾಗಿ ನಡೆಸುತ್ತಿದೆ. ಇದಕ್ಕೆ ವಿದ್ಯಾರ್ಥಿಗಳು ತುಂಬು ಹೃದಯದಿಂದ ಸಹಕರಿಸುತ್ತಿದ್ದಾರೆ. ದೇಶದ ಅಭಿವೃದ್ಧಿಗೆ ತಂತ್ರಜ್ಞಾನಗಳ ಕೊಡುಗೆ ಅಪಾರವಾಗಿದೆ. ಮಕ್ಕಳಲ್ಲಿ ಎಳೆಯ ವಯಸ್ಸಿನಲ್ಲೇ ಇಂತಹ ತಂತ್ರಜ್ಞಾನಗಳ ಬಗ್ಗೆ ಅರಿವು ಮೂಡಿಸಿದಾಗ ಅವರು ಪ್ರತಿಭಾವಂತರಾಗಿ ಬೆಳೆಯಲು ಸಾಧ್ಯವಾಗುತ್ತದೆ. ಶಿಕ್ಷಕರು, ಶಿಕ್ಷಕೇತರ ಸಿಬಂದಿಗಳು ಉತ್ತಮ ರೀತಿಯಲ್ಲಿ ಬೆಂಬಲ ನೀಡುತ್ತಿದ್ದು ಅಭಿವೃದ್ಧಿಯ ಸಂಕೇತವಾಗಿದೆ ಎಂದು ನುಡಿದು ಮಕ್ಕಳನ್ನು ಅಭಿನಂದಿಸಿದರು.
ಬೈಬಲ್ ಪಠಣದೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಡಿತು. ವಿದ್ಯಾ
ರ್ಥಿಗಳು, ಪಾಲಕ-ಪೋಷಕರು ಹಾಗೂ ಶಿಕ್ಷಕರು, ಶಿಕ್ಷಕೇತರ ಸಿಬಂದಿ
ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸ್ಥಳೀಯರಲ್ಲಿ ಅಟಲ್ ಟಿಂಕಿಂಗ್ ಲ್ಯಾಬ್ ಸಮುದಾಯ ದಿನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಾಗಾರ ನಡೆಯಿತು. ವಿದ್ಯಾರ್ಥಿಗಳು ತಾವು ನಿರ್ಮಿಸಿದ ವಿವಿಧ ತಂತ್ರಜ್ಞಾನಗಳನ್ನು ಪ್ರದರ್ಶಿಸಿ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ನಿರ್ಮಿಸಿದ ಡ್ರೋನ್ ಡಿಸ್ಲೇ, ಬಲೂನ್ ಟ್ರೈನ್ ಮೇಕಿಂಗ್, ಬಲೂನ್ ಕಾರ್ ಮೇಕಿಂಗ್, ಪೊರ್ಟೆಬಲ್ ಕೂಲರ್, ನ್ಯೂಸ್ ಪೇಪರ್ ಬ್ರಿಡ್ಜ್ ಮೇಕಿಂಗ್, ಇನ್ನೋವೇಟಿವ್ ಪ್ರೊಜೆಕ್ಟ್ ಡಿಸ್ಲೇ ಇನ್ನಿತರ ತಂತ್ರಜ್ಞಾನಗಳನ್ನು ಪ್ರದರ್ಶಿಸಿದ್ದು, ಎಲ್ಲರ ಗಮನ ಸೆಳೆಯಿತು. ವಿಜೇತ ಸ್ಪರ್ಧಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.
ವಿದ್ಯಾರ್ಥಿಗಳ ಪಾಲಕ-ಪೋಷಕರು ಕಾರ್ಯಕ್ರಮವನ್ನು ವೀಕ್ಷಿಸಿ ಮಕ್ಕಳ ಪ್ರತಿಭಾನ್ವೇಷಣೆಗೆ ಅವಕಾಶ ನೀಡಿದ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ಗಣ್ಯರು ಎಟಿಎಲ್ ಕಮ್ಯೂನಿಟಿ ದಿನದ ಮಹತ್ವ ಹಾಗೂ ಆಚರಣೆಯ ಉದ್ದೇಶವನ್ನು ವಿವರಿಸಿದರು. ಶಿಕ್ಷಕರು, ಶಿಕ್ಷಕೇತರ ಸಿಬಂದಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.