ಲಂಡನ್: ಬ್ರಿಟನ್ ಸಂಸತ್ ಅನ್ನು ಒಂದು ತಿಂಗಳ ಕಾಲ ಅಮಾನತ್ತಿನಲ್ಲಿ ಇಡಬೇಕೆಂದು ರಾಣಿ ಎಲಿಜಬೆತ್ ಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸಲಹೆ ನೀಡಿರುವುದು ಕಾನೂನು ಬಾಹಿರ ಕ್ರಮ ಎಂದು ಯುನೈಟೆಡ್ ಕಿಂಗ್ ಡಮ್ ನ ಸುಪ್ರೀಂಕೋರ್ಟ್ ಮಂಗಳವಾರ ಆದೇಶ ನೀಡಿದೆ.
ದೇಶದ ಬಹುಮುಖ್ಯ ಬ್ರೆಕ್ಸಿಟ್ ಒಪ್ಪಂದದ ಪರಿಶೀಲನೆ ನಡೆಯುವ ಮೊದಲೇ ಬ್ರಿಟನ್ ಸಂಸತ್ ಅನ್ನು ಅಮಾನತ್ತಿನಲ್ಲಿ ಇಟ್ಟಿರುವುದು ಕಾನೂನು ಬಾಹಿರ ಎಂದು ಸರ್ವಾನುಮತದ ತೀರ್ಪು ನೀಡಿರುವ ಸುಪ್ರೀಂಕೋರ್ಟ್, ಬ್ರಿಟನ್ ಸಂಸತ್ ಅಮಾನತುಗೊಳಿಸಿರುವುದರಿಂದ ಸಾಂವಿಧಾನಿಕವಾಗಿ ನಡೆಯಬೇಕಾಗಿದ್ದ ಕಲಾಪಕ್ಕೆ ಅಡ್ಡಿಪಡಿಸಿದಂತಾಗಿದೆ. ಅಲ್ಲದೇ ಯಾವುದೇ ಸಕಾರಣದ ನ್ಯಾಯವಿಲ್ಲದೇ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.
ಬ್ರಿಟನ್ ಸಂಸತ್ ಅನ್ನು ಅಮಾನತ್ತಿನಲ್ಲಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಅಧ್ಯಕ್ಷ ಬ್ರೆಂಡಾ ಹಾಲೆ ನೇತೃತ್ವದ 11ಮಂದಿ ಜಸ್ಟೀಸ್ ಅನ್ನು ಒಳಗೊಂಡ ಪೀಠ ವಿಚಾರಣೆ ನಡೆಸಿತ್ತು.
ಬ್ರೆಕ್ಸಿಟ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 31ರೊಳಗೆ ಅಂತಿಮ ತೀರ್ಮಾನ ಕೈಗೊಳ್ಳುವಂತೆ ಗಡುವು ವಿಧಿಸಲಾಗಿತ್ತು. ಏತನ್ಮಧ್ಯೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಬ್ರಿಟನ್ ಸಂಸತ್ ಅನ್ನು ಸೆಪ್ಟಂಬರ್ 10ರಿಂದ ಅಕ್ಟೋಬರ್ 14ರವರೆಗೆ ಅಮಾನತ್ತಿನಲ್ಲಿ ಇಡುವಂತೆ ಬ್ರಿಟನ್ ರಾಣಿ ಎಲಿಜಬೆತ್ ಗೆ ಮನವಿ ಸಲ್ಲಿಸಿ ಅನುಮತಿ ಪಡೆದಿದ್ದರು.
ಸಂಸತ್ ಅನ್ನು ಅಕ್ಟೋಬರ್ 14ರವರೆಗೆ ಅಮಾನತು ಮಾಡಬೇಕೆಂಬ ಸರಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಬ್ರಿಟನ್ ಗೆ ಯಾವುದೇ ಲಿಖಿತ ಸಂವಿಧಾನವಿಲ್ಲ. ಇದು ರಾಜಕಾರಣಿಗಳಿಗೆ ಸಂಬಂಧಿಸಿದ ವಿಷಯವೇ ವಿನಃ, ಕೋರ್ಟ್ ಗೆ ಸಂಬಂಧಿಸಿದ್ದಲ್ಲ.
ಸಂಸತ್ ಅನ್ನು ಅಮಾನತ್ತಿನಲ್ಲಿ ಇಡಲು ಸಾಧ್ಯವಿಲ್ಲ. ಈ ಬಗ್ಗೆ ಸ್ಪೀಕರ್ ಮುಖ್ಯ ಸ್ಪೀಕರ್ ಮುಂದೇನು ಮಾಡಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.