ರಾಮನಗರ: ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ನೀಡಿದ್ದ ಕರ್ನಾಟಕ ಬಂದ್ ಕರೆಗೆ ರಾಮ ನಗರ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇಡೀ ಜಿಲ್ಲೆಯಲ್ಲಿ ಜನಜೀವನ ಎಂದಿನಂತೆ ಸಾಗಿತ್ತು. ಶಾಲಾ-ಕಾಲೇಜುಗಳು, ಹೋಟೆಲ್‌ಗಳು, ಸಿನಿಮಾ ಮಂದಿರಗಳು, ಆಟೋ ಸಂಚಾರ ಎಂದಿನಂತೆ ಇತ್ತು.
ವಾಹನಗಳ ಸಂಖ್ಯೆ ಇಳಿಮುಖ: ಜಿಲ್ಲಾ ಕೇಂದ್ರ ರಾಮನಗರದಲ್ಲಿ ಬಂದ್ ಕರೆಗೆ ಜನತೆ ಸ್ಪಂದಿಸಲಿಲ್ಲ. ವ್ಯಾಪಾರ, ವಹಿವಾಟು ಎಂದಿನಂತೆ ಸಾಗಿತ್ತು. ಆಟೋ ಸಂಚಾರ, ಸರ್ಕಾರಿ ಬಸ್ ಸಂಚಾರ ಎಂದಿನಂತಿತ್ತು. ಆದರೆ ಖಾಸಗಿ ಬಸ್‌ಗಳ ಸಂಖ್ಯೆ ವಿರಳವಾಗಿತ್ತು. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗ್ಗೆ ವಾಹನ ಸಂದಣಿ ಎಂದಿನಂತೆ ಇತ್ತಾದರು ನಂತರ ಮಧ್ಯಾಹ್ನದವರೆಗೆ ಮಾಮೂಲಿಗಿಂತ ಕಡಿಮೆ ಇತ್ತು.
ಪ್ರಯಾಣಿಕರ ಕೊರತೆ ಕಾಣಲಿಲ್ಲ: ಸರ್ಕಾರಿ ಕಚೇರಿಗಳು, ಹೋಟೆಲ್‌ಗಳು, ಸಿನಿಮಾ ಮಂದಿರಗಳು, ಬ್ಯಾಂಕುಗಳು, ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆ, ಸರ್ಕಾರಿ ಮತ್ತು ಖಾಸಗಿ ಶಾಲಾ- ಕಾಲೇಜುಗಳು ಮಾಮೂಲಿನಂತೆ ಕಾರ್ಯ ನಿರ್ವಹಿ ಸಿದವು. ಕೆ. ಎಸ್.ಆರ್.ಟಿ.ಸಿ ಬಸ್ಸುಗಳಲ್ಲಿ ಜನಸಂದಣಿ ಎಂದಿನಂತೆ ಇತ್ತು. ಗ್ರಾಮಾಂತರ ಕಡೆಗೆ ಹೋಗುವ ಬಸ್ಸುಗಳಲ್ಲಿ ಪ್ರಯಾಣಿಕರ ಕೊರತೆ ಕಾಣಲಿಲ್ಲ.
ಕರ್ನಾಟಕ ಬಂದ್ಗೆ ದನಿಗೂಡಿಸಿದ ವ್ಯಾಪಾರಸ್ಥರು: ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಈ ವಿಚಾರದಲ್ಲಿ ರಾಜ್ಯ ಸರ್ಕಾರ ಸರೋಜಿನಿ ಮಹಿಷಿ ವರದಿ ಜಾರಿ ಮಾಡ ಬೇಕು ಎಂದು ಸಾಮಾನ್ಯ ಜನರು, ವ್ಯಾಪಾರಸ್ಥರು ಸಹ ದನಿ ಗೂಡಿಸಿದರು. ಆದರೆ ಬಂದ್ ಆಚರಿಸಿ ಸರ್ಕಾರದ ಗಮನ ಸೆಳೆಯುವ ಅಗತ್ಯವಿಲ್ಲ. ನಮ್ಮ ಚುನಾಯಿತ ಪ್ರತಿನಿಧಿಗಳಿಗೆ ಕಾಳಜಿ ಇಲ್ಲದ ಕಾರಣ ಸರೋಜಿನಿ ಮಹಿಷಿ ಜಾರಿ ಸೇರಿದಂತೆ ಆಡಳಿತದಲ್ಲಿ ಕನ್ನಡ
ಕಡ್ಡಾಯವಾಗಿಲ್ಲ ಎಂದು ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದರು. ನಾಡು, ನುಡಿ, ಜಲದ ವಿಚಾರದಲ್ಲಿ ಕನ್ನಡ ಪರ ಸಂಘಟನೆಗಳ ಕಾರ್ಯವನ್ನು ಜನಸಾಮಾನ್ಯರು ಶ್ಲಾಘಿಸಿದ್ದಾರೆ.