Advertisement

ಕೊಳವೆಬಾವಿ ನೀರಿನಲ್ಲಿ ಸೀಮೆಎಣ್ಣೆ !

10:59 PM Sep 23, 2021 | Team Udayavani |

ಸುಳ್ಯ: ಕೊಳವೆ ಬಾವಿಯಿಂದ ಪೂರೈಕೆ ಯಾಗುತ್ತಿರುವ ನೀರು ಸೀಮೆ ಎಣ್ಣೆ ವಾಸನೆಯಿಂದ ಕೂಡಿದ್ದು ಉಪಯೋಗಿಸಲು ಸಾಧ್ಯವಾಗದ ಸನ್ನಿವೇಶ ಸುಳ್ಯ ನಗರ ಪಂಚಾಯತ್‌ ವ್ಯಾಪ್ತಿಯ ನಾಲ್ಕನೇ ವಾರ್ಡ್‌ ಬೆಟ್ಟಂಪಾಡಿಯಲ್ಲಿ ಉಂಟಾಗಿದೆ. ಒಂದೂವರೆ ತಿಂಗಳಿನಿಂದ ಈ ರೀತಿಯ ಅನುಭವ ಆಗುತ್ತಿದ್ದು ಜನರು ಕುಡಿಯುವ ನೀರಿಗೆ ಪರದಾಡುವಂತಾಗಿದೆ.

Advertisement

ನೀರನ್ನು ಬಿಸಿ ಮಾಡಿದರೂ ವಾಸನೆ ಹೋಗುತ್ತಿಲ್ಲ. ಅದರಲ್ಲಿ ಬೇಯಿಸಿದ ಆಹಾರವೂ ಸೀಮೆ ಎಣ್ಣೆ ವಾಸನೆ ಬೀರುತ್ತದೆ ಮತ್ತು ಬೇಗನೆ ಕೆಟ್ಟು ಹೋಗುತ್ತದೆ. ಮುಖ ತೊಳೆಯಲು, ಸ್ನಾನ ಮಾಡಲೂ ಆಗದ ಪರಿಸ್ಥಿತಿ ನಿರ್ಮಾಣ ಆಗಿದೆ ಎನ್ನುತ್ತಾರೆ ಸ್ಥಳೀಯರು.

150 ಮನೆಗಳಿಗೆ ಸರಬರಾಜು:

ಬೆಟ್ಟಂಪಾಡಿಯ ನಗರ ಪಂಚಾಯತ್‌ ಬೋರ್‌ವೆಲ್‌ನಿಂದ ನೀರೆತ್ತಿ ಟ್ಯಾಂಕ್‌ಗೆ ಹಾಕಿ ಅಲ್ಲಿಂದ ಮನೆಗಳಿಗೆ ಸರಬರಾಜು ಆಗುತ್ತದೆ. ಅಲ್ಲದೆ ಕೊಳವೆಬಾವಿಯಿಂದ ನೇರವಾಗಿಯೂ ಕೆಲವು ಮನೆಗಳ ಟ್ಯಾಂಕ್‌ಗಳಿಗೆ ನೀರು ಹೋಗುತ್ತದೆ. ಬೆಟ್ಟಂಪಾಡಿಯ 130 ಮನೆ ಮತ್ತು ಶಾಂತಿನಗರದ ಕೆಲವು ಮನೆಗಳು ಸೇರಿ 150ಕ್ಕೂ ಹೆಚ್ಚು ಮನೆಯರಿಗೆ ಈ ನೀರು ಸರಬರಾಜಾಗುತ್ತಿದೆ.

ಕೆಲವರು ಹತ್ತಿರದ ಬಾವಿಯ ನೀರು ತಂದು ಬಳಸುತ್ತಾರೆ. ನಗರ ಪಂಚಾಯತ್‌ ಸದಸ್ಯರು ಮತ್ತು ಅ ಧಿಕಾರಿಗಳು ಬಂದು ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ.

Advertisement

ಘಾಟು ವಾಸನೆ!:

ಸೀಮೆ ಎಣ್ಣೆ ವಾಸನೆಯ ಘಾಟು ಎಷ್ಟಿದೆಯೆಂದರೆ ಬೋರ್‌ವೆಲ್‌ ಮತ್ತು ಟ್ಯಾಂಕ್‌ ಸಮೀಪ ತೆರಳಿದರೆ ವಾಸನೆ ಮೂಗಿಗೆ ಬಡಿಯುತ್ತದೆ. ಪಾತ್ರೆಗಳಲ್ಲಿ ಶೇಖರಿಸಿಟ್ಟ ನೀರಿನ ಮೇಲ್ಪದರದಲ್ಲಿ ಎಣ್ಣೆಯ ಅಂಶ ಸೇರಿ ತೇಲುತ್ತಿರುತ್ತದೆ ಮತ್ತು ವಾಕರಿಕೆ ಬರುವಷ್ಟು ತೀವ್ರ ಸ್ವರೂಪದ ವಾಸನೆ ಬೀರುತ್ತಿರುತ್ತದೆ.

ಬದಲಿ ವ್ಯವಸ್ಥೆ ಕಲ್ಪಿಸಿ:

ಈ ನೀರನ್ನು ಉಪಯೋಗಿಸಿದರೆ ಆರೋಗ್ಯದ ಸಮಸ್ಯೆ ಉಂಟಾಗುವ ಭೀತಿ ಇದೆ. ಯಾಕೆ ಹೀಗೆ ಆಗಿದೆ ಎಂಬ ಬಗ್ಗೆ ಸೂಕ್ತ ಪರೀಕ್ಷೆ ಆಗಬೇಕು ಮತ್ತು ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರಾದ ಆನಂದ, ಶಂಕರ, ಸುಧಾಕರ ಮತ್ತು ಜನಾದ‌ìನ ಆಗ್ರಹಿಸಿದ್ದಾರೆ.

ಸೀಮೆ ಎಣ್ಣೆ ವಾಸನೆ ಬೀರುವ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು.ವಿನಯಕುಮಾರ್‌ ಕಂದಡ್ಕ, ಅಧ್ಯಕ್ಷ, ಸುಳ್ಯ ನಗರ ಪಂಚಾಯತ್‌

Advertisement

Udayavani is now on Telegram. Click here to join our channel and stay updated with the latest news.

Next