Advertisement

ಮುಚ್ಚುತ್ತಿವೆ ಗಡಿಭಾಗದ ಕನ್ನಡ ಶಾಲೆಗಳು!

06:58 PM Oct 28, 2021 | Team Udayavani |

ಸಂಬರಗಿ: ರಾಜ್ಯದ ಗಡಿಭಾಗದ ಶಾಲೆಗಳ ಸಮಸ್ಯೆಗಳನ್ನು ನಿವಾರಿಸುವುದಲ್ಲದೇ ಯಾವುದೇ ಶಾಲೆ ಮುಚ್ಚದಂತೆ ಕ್ರಮವಹಿಸುವುದಾಗಿ ರಾಜ್ಯ ಸರಕಾರ ಹೇಳುತ್ತಿದ್ದರೂ ಮೂಲಸೌಲಭ್ಯಗಳು, ಶಿಕ್ಷಕರ ಕೊರತೆಯಿಂದಾಗಿ ತೋಟಪಟ್ಟಿ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿಗೆ ತಲುಪಿದ್ದು, ಕನ್ನಡ ಶಾಲೆಗಳ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಮುಂದಾಗಬೇಕೆಂದು ಈ ಭಾಗದ ಕನ್ನಡಿಗರು ಆಗ್ರಹಿಸಿದ್ದಾರೆ.

Advertisement

ಅಥಣಿ ಕ್ಷೇತ್ರ ಶಿಕ್ಷಣಾಧಿ ಕಾರಿಗಳ ವ್ಯಾಪ್ತಿಯಲ್ಲಿ 334 ಪ್ರಾಥಮಿಕ ಶಾಲೆಗಳಿದ್ದು, ಮಂಜೂರಾದ ಶಿಕ್ಷಕರ ಸಂಖ್ಯೆ 1530 ಇದ್ದರೂ 445 ಹುದ್ದೆಗಳು ಖಾಲಿ ಇವೆ. ಸರಕಾರ ಖಾಲಿ ಇರುವ ಶಿಕ್ಷಕರ ಹುದ್ದೆ ನೇಮಕಾತಿಗೆ ಹಿಂದೇಟು ಹಾಕುತ್ತಿದ್ದು, ಗಡಿಭಾಗದ ಶಾಲೆಗಳು ಶಿಕ್ಷಕರ ಕೊರತೆಯಿಂದ ಮುಚ್ಚುವ ಆತಂಕ ಎದುರಿಸುತ್ತಿವೆ. ಶಿಕ್ಷಕರ ಕೊರತೆಯಿಂದ ಆಜೂರು ಗ್ರಾಮದ ಮಹಾಂಕಾಳೆ ತೋಟದ ಶಾಲೆ, ಜಂಬಗಿ ಗ್ರಾಮದ ದತ್ತನಗರ ತೋಟದ ಶಾಲೆ ಸೇರಿದಂತೆ 7 ತೋಟದ ಶಾಲೆಗಳು ಕಳೆದ 2 ವರ್ಷದಲ್ಲಿ ಮುಚ್ಚಿವೆ.

ಇನ್ನು 10-15 ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಖೋತವಾಡಿ ತೋಟದ ಶಾಲೆ, ಅರಳಿಹಟ್ಟಿ ಕಿರಿಯ ಪ್ರಾಥಮಿಕ ಶಾಲೆ , ಸಂಬರಗಿ ಗ್ರಾಮದ ಶಿಂಧೆ ತೋಟದ ಶಾಲೆ, ಶಿರೂರ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ, ಬೊಮ್ಮನಾಳ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ ಸೇರಿದಂತ ಈ ಭಾಗದ ಅನೇಕ ತೋಟದ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರನ್ನು ನಿಯೋಜಿಸಲಾಗಿದ್ದು, ಅವರೇ ಎಲ್ಲ ಕೆಲಸ ನಿರ್ವಹಿಸುತ್ತಿದ್ದಾರೆ. ಪಾಠದ ಜತೆಗೆ ಅವರು ಕಚೇರಿ ಕೆಲಸ ಕೂಡ ನಿರ್ವಹಿಸಬೇಕಾಗಿರುವುದರಿಂದ ಪಾಠ ಹೇಳುವುದು ಕಷ್ಟವಾಗಿದ್ದು, ಮಕ್ಕಳ ಸಂಖ್ಯೆ ಕಡಿಮೆಯಾಗಿ ಶಾಲೆಗಳು ಸ್ಥಗಿತಗೊಳ್ಳುತ್ತಿವೆ.

ಇದಲ್ಲದೇ ಪಾಂಡೆಗಾಂವ ಹೊರಭಾಗದ ಬಣಾಯಿ ತೋಟದ ಕನ್ನಡ ಶಾಲೆಯಲ್ಲಿ ಒಬ್ಬರೇ ಶಿಕ್ಷಕರಿದ್ದು ಅವರೂ ಮರಾಠಿ ಭಾಷೆ ಶಿಕ್ಷಕರಾಗಿದ್ದಾರೆ. ಇಂತಹ ಅವ್ಯವಸ್ಥೆ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ. ಈ ಶಾಲೆಗಳ ಮಕ್ಕಳನ್ನು ಪಾಲಕರು ಅಥಣಿ ಪಟ್ಟಣ ಅಥವಾ ಮಹಾರಾಷ್ಟ್ರ ಗಡಿಭಾಗದ ಬಿಳ್ಳೂರ, ಸಿಂಧೂರ, ಖೋಜ್ಜನವಾಡಿ, ಗೂಗವಾಡ, ಜತ್ತ ಪಟ್ಟಣದಲ್ಲಿನ ತಮ್ಮ ಸಂಬಂಧಿ ಕರ ಮನೆಯಲ್ಲಿಟ್ಟು ಕನ್ನಡ
ಶಾಲೆಯಲ್ಲಿ ಶಿಕ್ಷಣ ಕೊಡಿಸುತ್ತಿದ್ದಾರೆ.

ಅಥಣಿ ಕ್ಷೇತ್ರ ಶಿಕ್ಷಣ ವಲಯದ 60 ಶಾಲೆಗಳಿಗೆ 100 ಕೋಣೆಗಳ ಅವಶ್ಯಕತೆಯಿದೆ. 180 ಶಾಲೆಗಳಿಗೆ ಕಾಂಪೌಂಡ ಇಲ್ಲ, 69 ಶಾಲೆಗಳಲ್ಲಿ ಶೌಚಾಲಯಗಳಿಲ್ಲ, ಇಲ್ಲಿನ ಜನರಲ್ಲಿ ಮಕ್ಕಳಿಗೆ ಕನ್ನಡ ಕಲಿಸಬೇಕು ಎಂಬ ಭಾಷಾಪ್ರೇಮ, ಅಭಿಮಾನ ಇದ್ದರೂ ಶಾಲೆಗಳ ದುಸ್ಥಿತಿಯಿಂದಾಗಿ ಮಕ್ಕಳನ್ನು ಅನಿವಾರ್ಯವಾಗಿ ಖಾಸಗಿ ಇಂಗ್ಲಿಷ್‌ ಅಥವಾ ಮರಾಠಿ ಶಾಲೆಗಳಿಗೆ ಸೇರಿಸಬೇಕಾಗಿದೆ.ಜನಪ್ರತಿನಿಧಿಗಳು-ಅಧಿಕಾರಿಗಳು ಗಡಿಭಾಗದಲ್ಲಿ ಕನ್ನಡ ಉಳಿಸಲು-ಬೆಳೆಸಲು ಹೆಚ್ಚಿನ ಆಸಕ್ತಿ ತೋರಬೇಕು ಎಂದು ಜನರು ಆಗ್ರಹಿಸಿದ್ದಾರೆ. ಸ್ಥಗಿತಗೊಂಡ ಪ್ರತಿ ಶಾಲೆಗೆ ಭೇಟ ನೀಡಿ, ಮಾಹಿತಿ ಪಡೆದುಕೊಂಡು ಮೇಲಾಧಿ ಕಾರಿಗಳ ಗಮನಕ್ಕೆ ತಂದು ಕ್ರಮ ಕ್ರಮವಹಿಸಲಾಗುವುದು ಎಂದು ಕಏತ್ರ ಶಿಕ್ಷಣಾಧಿಕಾರಿ ಗೌಡಪ್ಪ ಖೋತ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next