Advertisement

ರಾಜಕೀಯ ಸ್ವಾರ್ಥಕ್ಕಾಗಿ ಮಹಾರಾಷ್ಟ್ರದಿಂದ ಗಡಿ ತಂಟೆ

11:36 PM Feb 16, 2020 | Team Udayavani |

ಬೆಳಗಾವಿ: ಗಡಿ ವಿವಾದ ಮುಗಿದ ಅಧ್ಯಾಯ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಹಾಗೂ ಅಲ್ಲಿನ ಶಿವಸೇನೆ ನಾಯಕರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಇದನ್ನು ಪದೇಪದೆ ಕೆದಕುತ್ತಿದ್ದಾರೆ. ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಹೇಳಿದರು.

Advertisement

ಖಾನಾಪುರ ತಾಲೂಕಿನ ಬೋಗೂರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಗಡಿ ವಿಷಯದಲ್ಲಿ ಮಹಾಜನ ವರದಿಯೇ ಅಂತಿಮ ಎಂದು ಸಾರಿ ಸಾರಿ ಹೇಳಲಾಗಿದೆ. ಮಹಾರಾಷ್ಟ್ರದಲ್ಲಿ ತಮ್ಮ ರಾಜಕೀಯ ಲಾಭಕ್ಕಾಗಿ ಅಲ್ಲಿನ ಸರ್ಕಾರ ಮೇಲಿಂದ ಮೇಲೆ ಇದನ್ನು ಕೆದಕುತ್ತಿದೆ. ಮಹಾರಾಷ್ಟ್ರ ಸರ್ಕಾರದ ನಡೆಗೆ ಯಾವುದೇ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಗಡಿ ವಿಚಾರದಲ್ಲಿ ಕರ್ನಾಟಕ ಸರ್ಕಾರದ ನಿಲುವು ಎಂದೂ ಬದಲಾಗುವುದಿಲ್ಲ. ರಾಜ್ಯದ ಹಿತ ಕಾಪಾಡುವಲ್ಲಿ ಬಿಜೆಪಿ ಯಾವತ್ತೂ ಹಿಂದೆ ಬೀಳುವುದಿಲ್ಲ ಎಂದರು.

ಎರಡು ತಿಂಗಳಲ್ಲಿ ಹೊಸ ಕೈಗಾರಿಕಾ ನೀತಿ ಪ್ರಕಟ: ಬೆಂಗಳೂರು ಹೊರತುಪಡಿಸಿ ಉಳಿದ ನಗರಗಳಲ್ಲಿ ಕೈಗಾರಿಕೆಗಳು ಬೆಳೆಯಬೇಕು ಎಂಬ ಉದ್ದೇಶದಿಂದ ಹೊಸ ಕೈಗಾರಿಕಾ ನೀತಿ ಸಿದ್ಧಪಡಿಸಲಾಗಿದ್ದು, ಮಾರ್ಚ್‌ ಇಲ್ಲವೇ ಏಪ್ರಿಲ್‌ನಲ್ಲಿ ಹೊಸ ನೀತಿ ಪ್ರಕಟ ಮಾಡಲಾಗುವುದು. ಈಗಾಗಲೇ ಹೊಸ ಕೈಗಾರಿಕಾ ನೀತಿ ಸಿದ್ಧವಾಗಿದ್ದು, ಹಣಕಾಸು ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಲಾಗಿದೆ.

ಮಾ.5ರೊಳಗೆ ಇದರ ಬಗ್ಗೆ ಚರ್ಚೆ ನಡೆಸಿ ಎರಡು ತಿಂಗಳಲ್ಲಿ ಪ್ರಕಟಿಸಲಾಗುವುದು. ಬೆಂಗಳೂರು ಬಿಟ್ಟು ಎರಡು ಹಾಗೂ ಮೂರನೇ ಶ್ರೇಣಿಯ ನಗರಗಳನ್ನು ಕೇಂದ್ರವಾಗಿಟ್ಟುಕೊಂಡು ಕೈಗಾರಿಕೆಗಳು ಬೆಳೆಯಬೇಕು ಎಂಬ ಉದ್ದೇಶದಿಂದ ಈ ನೀತಿ ರೂಪಿಸಲಾಗಿದೆ. ಈಗಿರುವ ಕೈಗಾರಿಕಾ ನೀತಿಗೂ, ಹೊಸ ನೀತಿಗೂ ಸಾಕಷ್ಟು ಬದಲಾವಣೆಗಳಿವೆ ಎಂದರು.

ಹುಬ್ಬಳ್ಳಿಯ “ಇನ್ವೆಸ್ಟ್‌ ಕರ್ನಾಟಕ’ಕ್ಕೆ ಉತ್ತಮ ಪ್ರತಿಕ್ರಿಯೆ: ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ “ಇನ್ವೆಸ್ಟ್‌ ಕರ್ನಾಟಕ’ ಮೇಳಕ್ಕೆ ನಿರೀಕ್ಷೆಗಿಂತ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ. ಸುಮಾರು 72 ಸಾವಿರ ಕೋಟಿ ರೂ.ಗಳ ಬಂಡವಾಳ ಹೂಡಿಕೆಗೆ ಉದ್ಯಮಿಗಳು ಮುಂದೆ ಬಂದಿದ್ದಾರೆ. ಕೇವಲ ಹುಬ್ಬಳ್ಳಿ-ಧಾರವಾಡ ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ ಸಮಾವೇಶ ಇದಲ್ಲ. ಬೆಳಗಾವಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು 10 ಪ್ರಸ್ತಾವನೆಗಳು ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ 11 ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ ಎಂದರು.

Advertisement

“ಇನ್ವೆಸ್ಟ್‌ ಕರ್ನಾಟಕ’ ಮೇಳದಲ್ಲಿ ಭಾಗವಹಿಸಿದ್ದ ಉದ್ಯಮಿಗಳು ಹುಬ್ಬಳ್ಳಿ-ಧಾರವಾಡ ಹಾಗೂ ಕಿತ್ತೂರ ಭಾಗದ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 50 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ತೋರಿಸಿದ್ದಾರೆ. ಅದೇ ರೀತಿ ಬೆಳಗಾವಿ ಜಿಲ್ಲೆಯಲ್ಲಿ 1,000 ಕೋಟಿ, ಯಾದಗಿರಿ ಜಿಲ್ಲೆಯಲ್ಲಿ 1,000 ಕೋಟಿ ರೂ.ಬಂಡವಾಳ ಹೂಡಿಕೆಗೆ ಮುಂದೆ ಬಂದಿದ್ದಾರೆ. ಉತ್ತರ ಕರ್ನಾಟಕದ ಯಾವ ಜಿಲ್ಲೆಯನ್ನೂ ನಾವು ನಿರ್ಲಕ್ಷ್ಯ ಮಾಡಿಲ್ಲ. ಈಗ ಕೆಲವು ಕಡೆ ಸ್ಥಳೀಯ ಕಂಪನಿಗಳು ಬಂಡವಾಳ ತೊಡಗಿಸಲು ಮುಂದೆ ಬಂದಿದ್ದು, ಮುಂಬರುವ ದಿನಗಳಲ್ಲಿ ಹೊರ ರಾಜ್ಯಗಳ ಕಂಪನಿಗಳು ಬರಲಿವೆ ಎಂದರು.

ಅಸಮಾಧಾನ ತರವಲ್ಲ: ಹುಬ್ಬಳ್ಳಿಯಲ್ಲಿ “ಇನ್ವೆಸ್ಟ್‌ ಕರ್ನಾಟಕ’ ಮಾಡಿದ್ದರ ಬಗ್ಗೆ ಬೆಳಗಾವಿಯ ಕೆಲವು ಉದ್ಯಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನುವುದು ಸುಳ್ಳು. ಯಾರೋ ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿರುವು ದನ್ನು ದೊಡ್ಡ ವಿಷಯವನ್ನಾಗಿ ಮಾಡುವುದರಲ್ಲಿ ಅರ್ಥವಿಲ್ಲ. ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಿರುವುದಕ್ಕೆ ಸ್ವಾಗತ ವ್ಯಕ್ತ ಮಾಡಬೇಕಿತ್ತು. 50ಕ್ಕೂ ಹೆಚ್ಚು ಕಂಪನಿಗಳು ಬೆಳಗಾವಿ, ಯಾದಗಿರಿ, ದಾವಣಗೆರೆ ಸೇರಿ ಹಲವು ಜಿಲ್ಲೆಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದೆ ಬಂದಿವೆ. ಬೆಳಗಾವಿ-ಕಿತ್ತೂರ-ಧಾರವಾಡ ರೈಲು ಮಾರ್ಗ ನಿರ್ಮಾಣವಾದರೆ ಅವಳಿ ನಗರದ ಬದಲಾಗಿ ತ್ರಿವಳಿ ನಗರಗಳಾಗಿ ಬದಲಾಗಲಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next