ಟೆಹ್ರಾನ್: ಜಗತ್ತಿನಾದ್ಯಂತ ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ಸೋಂಕಿನಿಂದ ಪಾರಾಗಲು ಮದ್ಯಸೇವನೆ ಸಹಕಾರಿ ಎಂಬ ಸುಳ್ಳು ಸುದ್ದಿಯನ್ನು ನಂಬಿ ಕಳ್ಳ ಭಟ್ಟಿಯನ್ನು ಕುಡಿದ ಪರಿಣಾಮ 27 ಮಂದಿ ಸಾವನ್ನಪ್ಪಿ, ಹಲವು ವ್ಯಕ್ತಿಗಳು ಅಸ್ವಸ್ಥರಾದ ಘಟನೆ ಇರಾನ್ ನಲ್ಲಿ ನಡೆದಿದೆ.
ಕಳ್ಳ ಭಟ್ಟಿಯಲ್ಲಿದ್ದ ಮೆಥನಾಲ್ ಸೇವನೆಯಿಂದಾಗಿ 27 ಜನರು ಮೃತಪಟ್ಟಿದ್ದಾರೆ ಎಂದು ಇರಾನ್ ನ ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಚೀನಾದ ನಂತರ ಕೊರೋನಾ ವೈರಸ್ ಇರಾನ್ ನಲ್ಲಿಯೂ ವ್ಯಾಪಕವಾಗಿ ಹಬ್ಬಿದೆ. ಕೊರೋನಾ ವೈರಸ್ ನಿಂದ ಗುಣಮುಖವಾಗುವುದಕ್ಕೆ ಮದ್ಯಸೇವನೆ ಸಹಕಾರಿ ಎಂಬ ಸುಳ್ಳು ಸುದ್ದಿ ಹರಡಿತ್ತು. ಇದನ್ನೇ ನಂಬಿದ ಹಲವರು ಕಳ್ಳಬಟ್ಟಿ ಸೇವನೆ ಮಾಡಿದ್ದಾರೆ.
ಈ ಪೈಕಿ ಇರಾನ್ ನ ನೈಋತ್ಯ ಪ್ರದೇಶದ ಖುಜೆಸ್ತಾನ್ ನಲ್ಲಿ 20 ಮಂದಿ ಹಾಗೂ ಉತ್ತರ ಭಾಗದ ಅಲ್ಬೋರ್ಜ್ 7 ಮಂದಿ ಸಾವನ್ನಪ್ಪಿದ್ದಾರೆ. ಇರಾನ್ ನಲ್ಲಿ ಕೊರೋನಾ ವೈರಸ್ ಪೀಡಿತ 69 ಮಂದಿಯ ಪೈಕಿ 16 ಜನರು ಸಾವನ್ನಪ್ಪಿದ್ದಾರೆ. ಆದರೆ ಮುಸ್ಲಿಮೇತರ ಧಾರ್ಮಿಕ ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಉಳಿದವರೆಲ್ಲರಿಗೂ ಇರಾನ್ ನಲ್ಲಿ ಮದ್ಯಸೇವನೆಯನ್ನು ನಿಷೇಧಿಸಲಾಗಿದೆ.
218 ಜನರು ಕಳ್ಳಭಟ್ಟಿ ಕುಡಿದು ತೀವ್ರ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.ಮದ್ಯಸೇವನೆ ಕೊರೊನಾ ವೈರಸ್ ನಿಂದ ಪಾರಾಗಲು ಸೂಕ್ತ ಔಷಧಿ ಎಂದು ಸುಳ್ಳು ಸುದ್ದಿ ಹಬ್ಬಿದ ಹಿನ್ನಲೆ ಇವರೆಲ್ಲರೂ ಕಳ್ಳಭಟ್ಟಿಯಲ್ಲಿದ್ದ ಮೆಥನಾಲ್ ವಿಷವನ್ನು ತಿಳಿಯದೆ ಸೇವಿಸಿದ್ದಾರೆ.
ಇರಾನ್ ನಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಿದ್ದು 237 ಜನರು ಸಾವನ್ನಪ್ಪಿದ್ದಾರೆ, ಮಾತ್ರವಲ್ಲದೆ 7,161 ಜನರಿಗೆ ವೈರಾಣು ತಗುಲಿದೆ.