Advertisement

ಶೀಘ್ರ ಬೂಸ್ಟರ್‌ ಡೋಸ್‌?

12:17 AM Nov 13, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ಇದುವರೆಗೆ 110 ಕೋಟಿ ಡೋಸ್‌ ಲಸಿಕೆ ಹಾಕಿಸಲಾಗಿದೆ. ಅದಕ್ಕೆ ಪೂರಕವಾಗಿ ಕೇಂದ್ರ ಸರಕಾರ ಬೂಸ್ಟರ್‌ ಡೋಸ್‌ ಅನ್ನು ಕೆಲವು ಆಯ್ದ ವಯೋಮಿತಿಯವರಿಗೆ ನೀಡಲು ಶಿಫಾರಸು ಮಾಡಲು ಚಿಂತನೆ ನಡೆಸಿದೆ.

Advertisement

ವ್ಯಕ್ತಿಗಳ ವೈದ್ಯಕೀಯ ಪರೀಕ್ಷೆಯನ್ನು ಆಧರಿಸಿ ಈ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಕೊರೊನಾ ಲಸಿಕೆಗಳ ಪ್ರಯೋಗ ನಡೆಸುತ್ತಿರುವ ಲ್ಯಾಬ್‌ಗಳ ಒಕ್ಕೂಟ ಇನ್ಸಾಕಾಗ್‌ನ ಸಹ ಅಧ್ಯಕ್ಷ ಡಾ| ಎನ್‌.ಕೆ.ಅರೋರಾ ಅವರು ಸಲಹೆ ಮಾಡಿದ್ದಾರೆ. ಹೀಗಾಗಿ ಕೇಂದ್ರ ಸರಕಾರ ಅದನ್ನು ಪರಿಶೀಲಿಸುತ್ತಿದೆ.

ಮತ್ತೂಂದು ಬೆಳವಣಿಗೆಯಲ್ಲಿ ದೇಶದಲ್ಲಿ 10 ಕೋಟಿ ಮಂದಿ  2ನೇ ಡೋಸ್‌ ಲಸಿಕೆ ಹಾಕಿಸಿಕೊಂಡಿಲ್ಲ. ಅವರಿಗೆ ಶೀಘ್ರ ದಲ್ಲಿಯೇ ಲಸಿಕೆ ಹಾಕಿಸುವ ಬಗ್ಗೆ ಸರಕಾರ ಕಾರ್ಯಪ್ರವೃತ್ತವಾಗಲಿದೆ. ಕೊರೊನಾ ಡ್ಯಾಶ್‌ಬೋರ್ಡ್‌ ಕೋವಿನ್‌ನಲ್ಲಿ ದಾಖಲಾಗಿ ರುವ ಮಾಹಿತಿ ಪ್ರಕಾರ ದೇಶದಲ್ಲಿ ಶೇ.67.6ರಷ್ಟು ಪ್ರಮಾಣದಲ್ಲಿ ಮೊದಲ ಡೋಸ್‌ ಲಸಿಕೆ ಹಾಕಲಾಗಿದೆ. ಅಮೆರಿಕ ತೈವಾನ್‌ ಸೇರಿದಂತೆ 36 ದೇಶಗಳಲ್ಲಿ ಬೂಸ್ಟರ್‌ ಡೋಸ್‌ ಅನ್ನು ನೀಡಲಾಗುತ್ತಿದೆ.

ದೇಶದಲ್ಲಿ ಗುರುವಾರದಿಂದ ಶುಕ್ರವಾರದ ಅವಧಿಯಲ್ಲಿ 12,516 ಹೊಸ ಪ್ರಕರಣ ದೃಢಪಟ್ಟಿದೆ. ಇದೇ ಅವಧಿಯಲ್ಲಿ 501 ಮಂದಿ ಅಸುನೀಗಿದ್ದಾರೆ. ಸಕ್ರಿಯ ಪ್ರಕರಣ 1,37,416ಕ್ಕೆ ಇಳಿಕೆಯಾಗಿದೆ. ಚೇತರಿಕೆ ಪ್ರಮಾಣ ಶೇ.98.26 ಆಗಿದೆ.

ಬದಲಾಗಿದೆ ಲಕ್ಷಣ: ದೇಶದಲ್ಲಿ ಮೊದಲ, ಎರಡನೇ ಅಲೆಯಲ್ಲಿ ತೀವ್ರವಾಗಿ ಕಂಡುಬಂದಿದ್ದ ಸೋಂಕಿನ ತೀವ್ರ ಲಕ್ಷಣಗಳು ಬದಲಾಗಿವೆ. ಈ ಬಗ್ಗೆ ಕೋಲ್ಕತಾದ ವೈದ್ಯರು ಕಂಡುಕೊಂಡಿದ್ದಾರೆ. 2 ಡೋಸ್‌ ಲಸಿಕೆ ಹಾಕಿಸಿಕೊಂಡವರಲ್ಲಿ ತೀವ್ರ ಸ್ವರೂಪದ ಲಕ್ಷಣಗಳಿಲ್ಲದಿದ್ದರೂ 7-8 ದಿನಗಳ ಕಾಲ ವಾಸನೆ ಗ್ರಹಿಸುವ ಶಕ್ತಿ ಇಲ್ಲದಿರುವುದು, ಕೆಮ್ಮು ಮತ್ತು ಶೀತ, ಸಣ್ಣ ಪ್ರಮಾಣದ ಜ್ವರ, ಅಲ್ಪ ಪ್ರಮಾಣದ ಕ್ಷೀಣತೆ ಕಂಡು ಬಂದಿದೆ ಎಂದು ಡಾ| ಸವ್ಯಸಾಚಿ ವರ್ಧನ್‌ ತಿಳಿಸಿದ್ದಾರೆ.

Advertisement

ಕೊವ್ಯಾಕ್ಸಿನ್‌ನ ಎರಡೂ ಡೋಸ್‌ಗಳಿಂದ ಶೇ.77.8 ರಕ್ಷಣೆ: ಭಾರತದಲ್ಲೇ ಅಭಿವೃದ್ಧಿಪಡಿಸಲಾದ ಕೊರೊನಾ ಲಸಿಕೆ ಕೊವ್ಯಾಕ್ಸಿನ್‌ನ ಎರಡು ಡೋಸ್‌ಗಳು ಸೋಂಕಿನಿಂದ ಶೇ.77.8ರಷ್ಟು ರಕ್ಷಣೆ ನೀಡುತ್ತದೆ ಮಾತ್ರವಲ್ಲ, ಅದರಿಂದ ಯಾವುದೇ ಗಂಭೀರ ಸುರಕ್ಷತ ಆತಂಕ ಎದುರಾಗಿಲ್ಲ ಎಂದು ಲ್ಯಾನ್ಸೆಟ್‌ ವರದಿ ಹೇಳಿದೆ.

ಮಕ್ಕಳ ಉಡುಪು ಡೆಲಿವರಿ ಮೇಲೆ ಚೀನ ನಿಗಾ! :

ಬೀಜಿಂಗ್‌: ಚೀನದಲ್ಲಿ ಕೊರೊನಾದ ಡೆಲ್ಟಾ ರೂಪಾಂತರಿ ಪ್ರಕರಣಗಳು ಹೆಚ್ಚಲು ಮಕ್ಕಳ ಉಡುಪುಗಳ ಆನ್‌ಲೈನ್‌ ಡೆಲಿವರಿ ಕಾರಣವೇ? ಇಂಥದ್ದೊಂದು ಸಂದೇಹವನ್ನು ಇಲ್ಲಿನ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ದೇಶದಲ್ಲೇ ಅತೀ ದೊಡ್ಡ ವಾರ್ಷಿಕ ಆನ್‌ಲೈನ್‌ ಶಾಪಿಂಗ್‌ ಉತ್ಸವ ಈಗಾಗಲೇ ಆರಂಭವಾಗಿದ್ದು, ವಿವಿಧ ಮೂಲೆಗಳಿಂದ ಜನರು ಆನ್‌ಲೈನ್‌ ಮೂಲಕ ವಸ್ತ್ರಗಳನ್ನು ಖರೀದಿಸುತ್ತಿದ್ದಾರೆ. ಇಂಥ ಪಾರ್ಸೆಲ್‌ಗ‌ಳಿಂದಲೇ ಕೊರೊನಾ ವ್ಯಾಪಿಸುತ್ತಿದೆ ಎನ್ನುವುದು ಅಧಿಕಾರಿಗಳ ವಾದ. ಅದಕ್ಕೆ ಪುಷ್ಟಿ ನೀಡುವಂತೆ, ಹೆಬೈ ಪ್ರಾಂತ್ಯದಲ್ಲಿ ಮಕ್ಕಳ ಉಡುಪು ತಯಾರಿಕಾ ಸಂಸ್ಥೆಯ ಮೂವರು ಕಾರ್ಮಿಕರಿಗೆ ಕೊರೊನಾ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಹೆಬೈ ಪ್ರಾಂತ್ಯದಲ್ಲಿ ಹಾಹೂಯಿ ಇ-ಕಾಮರ್ಸ್‌ ಕಂಪೆನಿಯ ಸುಮಾರು 300 ಪ್ಯಾಕೇಜ್‌ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ, ಎಲ್ಲ ಪರೀಕ್ಷೆಯ ವರದಿಯೂ ನೆಗೆಟಿವ್‌ ಎಂದೇ ಬಂದಿದೆ ಎಂದು ಹೇಳಲಾಗಿದೆ. ಕ್ಸಿಂಜಿ ಮತ್ತು ಜಿನೊlà ಎಂಬ ಎರಡು ನಗರಗಳಲ್ಲಿ ಪಾರ್ಸೆಲ್‌ ಡೆಲಿವರಿ ಸೇವೆಯನ್ನೇ ಸ್ಥಗಿತಗೊಳಿಸಲಾಗಿದೆ.

13 ನೊರೊ ವೈರಸ್‌ ಕೇಸ್‌ ಪತ್ತೆ :

ತಿರುವನಂತಪುರ: ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಲ್ಲ ನೊರೊವೈರಸ್‌ನ 13 ಪ್ರಕರಣಗಳು  ವಯನಾಡ್‌ನ‌ಲ್ಲಿ  ಪತ್ತೆಯಾಗಿದೆ. ಈ ಸೋಂಕು ಕಲುಷಿತ ನೀರು ಮತ್ತು ಆಹಾರದ ಮೂಲಕ ಮನುಷ್ಯನ ದೇಹದೊಳಗೆ ಸೇರಬಲ್ಲದು. ಅನಂತರ ಸೋಂಕಿತನ ವಾಂತಿ ಮತ್ತು ಮಲವಿಸರ್ಜನೆಯಿಂದ ಇತರರಿಗೂ ಹರಡಬಲ್ಲದು. ಇದರಿಂದಾಗಿ ಹೊಟ್ಟೆನೋವು, ವಾಂತಿ, ತಲೆನೋವು, ಜ್ವರ, ದೇಹದಲ್ಲಿ ನೋವು ಹಾಗೂ ಜಠರ ಸಂಬಂಧಿತ ಕೆಲವು ಕಾಯಿಲೆಗಳು ಕಾಣಿಸಿಕೊಳ್ಳಬಹುದು ಎಂದು ಕೇರಳ ಆರೋಗ್ಯ ಸಚಿವರಾಗಿರುವ ವೀಣಾ ಜಾರ್ಜ್‌ ತಿಳಿಸಿದ್ದಾರೆ.

ನೊರೊ ವೈರಸ್‌  ತೊಡೆದುಹಾಕಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಜನರು ಕೈಗಳನ್ನು ಸ್ವತ್ಛವಾಗಿ ತೊಳೆಯುತ್ತಿರಬೇಕು. ಸೋಂಕಿತರು ಹೆಚ್ಚು ಒಆರ್‌ಎಸ್‌ ಮತ್ತು ಬಿಸಿ ನೀರನ್ನು ಸೇವಿಸಬೇಕು. ಪ್ರತಿಯೊಬ್ಬರೂ ಈ ವೈರಸ್‌ ಬಗ್ಗೆ ಎಚ್ಚರವಾಗಿರಬೇಕು ಎಂದು ತಿಳಿಸಿರುವ ವೀಣಾ ಅವರು ಅದಕ್ಕೆ ಸಂಬಂಧಪಟ್ಟಂತೆ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದ್ದಾರೆ.

ಕೊರೊನಾ ಬುಲೆಟ್‌ :

  • ನೆದರ್ಲೆಂಡ್‌ನ‌ಲ್ಲಿ ಹೆಚ್ಚುತ್ತಿ ರುವ ಪ್ರಕರಣ; ಆಂಶಿಕ ಲಾಕ್‌ಡೌನ್‌ಗೆ ನಿರ್ಧಾರ
  • ಆಸ್ಟ್ರಿಯಾದಲ್ಲಿ ಸಂಡೇ ಲಾಕ್‌ಡೌನ್‌: ಲಸಿಕೆ ಪಡೆದಯದವರಿಗೆ ಈ ಅವಧಿಯಲ್ಲಿ ಪೂರೈಕೆ
  • ನಾರ್ವೆಯಲ್ಲಿ 3ನೇ ಡೋಸ್‌ ನೀಡಲು ಚಿಂತನೆ; ಸ್ಥಳೀಯ ಪ್ರತಿಬಂಧಕ ಕ್ರಮ ಜಾರಿ
  • ಜನಸಂದಣಿ ಇರುವಲ್ಲಿಗೆ ತೆರಳುವುದು ಬೇಡ: ಜರ್ಮನಿಗರಿಗೆ ಸೂಚನೆ
Advertisement

Udayavani is now on Telegram. Click here to join our channel and stay updated with the latest news.

Next