ರಾಯಚೂರು: ಕೊರೊನಾ ಆತಂಕದಿಂದ ಒಂದು ಮತ್ತು ಎರಡನೇ ಡೋಸ್ ಪಡೆಯಲು ನಾ ಮುಂದು ನೀ ಮುಂದು ಎಂದು ಬರುತ್ತಿದ್ದ ಜನ ಬೂಸ್ಟರ್ ಡೋಸ್ ಪಡೆಯಲು ಮಾತ್ರ ತಾತ್ಸಾರ ಮಾಡುತ್ತಿದ್ದಾರೆ.
ಆರಂಭದಲ್ಲಿ ಬೂಸ್ಟರ್ ಡೋಸ್ ಗೆ ಹಣ ನೀಡಬೇಕಿದೆ ಎನ್ನುವ ಕಾರಣಕ್ಕೆ ಜನ ಹಿಂದೇಟಾಕಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಈಗ ಉಚಿತವಾಗಿ ಲಸಿಕೆ ನೀಡುತ್ತಿದ್ದರು ಜನ ಮಾತ್ರ ಸ್ವಯಂ ಪ್ರೇರಣೆಯಿಂದ ಮುಂದೆ ಬರುತ್ತಿಲ್ಲ. ಆದರೂ ಆರೋಗ್ಯ ಇಲಾಖೆಯೇ ಬೂಸ್ಟರ್ ಡೋಸ್ ನೀಡಲು ಎಲ್ಲ ಕಡೆ ತೆರಳುತ್ತಿದ್ದು, ಜನ ಜಾಗೃತಿ ಮೂಡಿಸುತ್ತಿದೆ.
ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಜನ ಬರುತ್ತಿಲ್ಲ. ಹೀಗಾಗಿ ಆರೋಗ್ಯ ಸಾಮೂಹಿಕವಾಗಿ ಲಸಿಕೆ ನೀಡಲು ಸಂಸ್ಥೆಗಳಲ್ಲೇ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ವಿವಿಧ ಸಂಘ-ಸಂಸ್ಥೆಗಳು ಶಿಬಿರ ಆಯೋಜಿಸಿ ತಮ್ಮ ಸಿಬ್ಬಂದಿ ಲಸಿಕೆ ಕೊಡಿಸುತ್ತಿದ್ದಾರೆ. ಹಿಂದೆ ಜಿಲ್ಲೆಯಲ್ಲಿ ಮೊದಲ ಡೋಸ್ ಲಸಿಕೆಯನ್ನು 15,32,449 ಜನರಿಗೆ ನೀಡಲಾಗಿತ್ತು. ಅದರಂತೆ 15,19,170 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿತ್ತು. ಅನಾರೋಗ್ಯ ನಿಮಿತ್ತ, ಅಶಕ್ತರಿಗೆ ಹೊರತುಪಡಿಸಿ ಬಹುತೇಕ ಶೇ.99.96ರಷ್ಟು ಜನರಿಗೆ ಲಸಿಕೆ ನೀಡುವ ಮೂಲಕ ಗುರಿ ತಲುಪಲಾಗಿತ್ತು. ಬೂಸ್ಟರ್ ಡೋಸ್ ಕೂಡ ಅದೇ ಮಾದರಿಯಲ್ಲಿ ನೀಡಬೇಕು ಎನ್ನುವ ಗುರಿಯನ್ನು ಆರೋಗ್ಯ ಇಲಾಖೆ ಹಾಕಿಕೊಂಡಿದೆ.
ಬೂಸ್ಟರ್ ಡೋಸ್ 18 ವರ್ಷದಿಂದ 59 ವರ್ಷದವರಿಗೆ ಹಾಗು 60+ ವರ್ಷದವರೆಗೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 18-59 ವರ್ಷದ 8,92,240 ಜನರಿದ್ದರೆ, 88,412 ಜನ 60 ವರ್ಷ ಮೇಲ್ಪಟ್ಟವರಿದ್ದಾರೆ. ಅದರಲ್ಲಿ 1,16,535 ಜನರಿಗೆ ಈವರೆಗೆ ಲಸಿಕೆ ನೀಡಲಾಗಿದೆ. ಅಂದರೆ ಶೇ.11.9ರಷ್ಟು ಗುರಿ ತಲುಪಲಾಗಿದೆ.
ಆರು ತಿಂಗಳಾದವರು ಮೂರನೇ ಡೋಸ್‌ಗೆ ಅರ್ಹರು. ಹತ್ತಿರದ ಕೇಂದ್ರಗಳಿಗೆ ಹೋದರೆ ಲಸಿಕೆ ಪಡೆಯಬಹುದು. ಕೆಲವರು ಅರ್ಜಿ ನೀಡಿದರೆ ಅಲ್ಲಿಗೆ ಹೋಗಿ ಲಸಿಕೆ ನೀಡಲಾಗುತ್ತಿದೆ. ಆಗಸ್ಟ್ ಒಳಗಾಗಿ ನಮ್ಮಲ್ಲಿ ವ್ಯಾಕ್ಸಿನ್ ಅಗತ್ಯದಷ್ಟು ಲಭ್ಯವಿದೆ. ಸೋಮವಾರ, ಬುಧವಾರ, ಶುಕ್ರವಾರ ಲಸಿಕೆ ಮೇಳ ಮಾಡುತ್ತಿದ್ದು, ಆ ದಿನ 5ರಿಂದ 10 ಸಾವಿರ ಲಸಿಕೆ ಹಾಕಲಾಗುತ್ತಿದೆ. ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಎರಡು ಲಭ್ಯವಿದ್ದು, ಕೊರತೆ ಬೀಳುವ ಮುನ್ನವೇ ಪ್ರಸ್ತಾವನೆ ಸಲ್ಲಿಸಿ ಲಸಿಕೆ ತರಿಸಲಾಗುವುದು.
–ಡಾ| ಸುರೇಂದ್ರ ಬಾಬು, ಜಿಲ್ಲಾ ಆರೋಗ್ಯಾಧಿಕಾರಿ