ನವದೆಹಲಿ: ಪಠಾಣ್ ಕೋಟ್ ವಾಯು ನೆಲೆಗೆ ಯುದ್ಧ ಕೌಶಲ್ಯದ ಹೊಂದಿರುವ 8 ಬೋಯಿಂಗ್ ಎ ಎಚ್-64ಇ ಅಪಾಚೆ ಗಾರ್ಡಿಯನ್ ಹೆಲಿಕಾಪ್ಟರ್ ಸೇರ್ಪಡೆಯಾಗಿದೆ. ಇದರೊಂದಿಗೆ ಭಾರತೀಯ ವಾಯುಸೇನೆಗೆ (ಐಎಎಫ್) ಆನೆ ಬಲ ಬಂದಂತಾಗಿದೆ.
ಅಪಾಜೆ ಗಾರ್ಡಿಯನ್ ಯುದ್ಧ ಹೆಲಿಕಾಪ್ಟರ್ ಸೇರ್ಪಡೆ ಸಮಾರಂಭದಲ್ಲಿ ವಾಯುಸೇನಾ ಮುಖ್ಯಸ್ಥ ಬಿಎಸ್ ಧನೋವಾ ಹಾಜರಿದ್ದರು. ಭಾರತೀಯ ವಾಯುಸೇನೆಗೆ ಒಟ್ಟು 22 ಎಎಚ್-64ಇ ಅಪಾಚೆ ಹೆಲಿಕಾಪ್ಟರ್ ಸೇರ್ಪಡೆಗೊಳ್ಳಲಿದ್ದು, ಮೊದಲ ಹಂತದಲ್ಲಿ 8 ಹೆಲಿಕಾಪ್ಟರ್ ಐಎಎಫ್ ಗೆ ಸೇರ್ಪಡೆಯಾಗಿದೆ ಎಂದು ವರದಿ ತಿಳಿಸಿದೆ.
2015ರಲ್ಲಿ ಭಾರತ ಸರಕಾರ 13, 952 ಕೋಟಿ ರೂಪಾಯಿ ವೆಚ್ಚದಲ್ಲಿ ಅಪಾಚೆ ಹೆಲಿಕಾಪ್ಟರ್ ಖರೀದಿಗಾಗಿ ಅಮೆರಿಕದ ಜತೆ ಒಪ್ಪಂದ ಮಾಡಿಕೊಂಡಿತ್ತು. 2020ರ ವೇಳೆಗೆ ವಾಯುಪಡೆಗೆ 22 ಅಪಾಚೆ ಹೆಲಿಕಾಪ್ಟರ್ ಗಳು ಸೇರ್ಪಡೆಯಾಗಲಿದೆ.
ಏನಿದರ ವೈಶಿಷ್ಟ್ಯತೆ?
ಅಪಾಚೆ ಯುದ್ಧ ಹೆಲಿಕಾಪ್ಟರ್ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, ಪ್ರತಿಕೂಲ ಹವಾಮಾನದಲ್ಲಿಯೂ ಎದುರಾಳಿ ಯುದ್ಧ ವಿಮಾನ ಗುರುತಿಸಿ ಹೊಡೆದುರುಳಿಸಬಲ್ಲ ಸಾಮರ್ಥ್ಯ ಹೊಂದಿದೆ. ಆಧುನಿಕ ಕೆಮರಾ, ಡಾಟಾ ಉಪಕರಣಗಳು ವೈರಿಗಳ ಶಸ್ತ್ರಾಸ್ತ್ರ ಗುರುತು ಪತ್ತೆ, ವೈರಿ ವಿಮಾನಗಳ ಚಲನವಲನ ಪತ್ತೆ ಹಚ್ಚಿ ಸಂದೇಶ ರವಾನಿಸುತ್ತದೆ. ಅಲ್ಲದೇ ಇದರಲ್ಲಿ ಸ್ಟಿಂಗರ್ ವೈಮಾನಿಕ ಕ್ಷಿಪಣಿ, ಹೆಲ್ ಫೈರ್ ಲಾಂಗ್ ಬೋ ವೈಮಾನಿಕ ಟು ಭೂ ಕ್ಷಿಪಣಿ, ಗನ್ ಮತ್ತು ರಾಕೆಟ್ ಗಳನ್ನು ಹೊಂದಿದೆ. ಪರ್ವತ ಪ್ರದೇಶದಲ್ಲಿಯೂ ಅಪಾಚೆ ಗಾರ್ಡಿಯನ್ ಹೆಲಿಕಾಪ್ಟರ್ ಸಮರ್ಥವಾಗಿ ಕಾರ್ಯನಿರ್ವಹಿಸುತ್ತದೆ.