ಹೊಸದಿಲ್ಲಿ: “ಮೇಕ್ ಇನ್ ಇಂಡಿಯಾ’ಕ್ಕೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿರುವ ಭೂಸೇನೆಯು ಸ್ವದೇಶೀಯವಾಗಿ ತಯಾರಾದ, ಒಟ್ಟು 14,000 ಕೋಟಿ ರೂ. ಮೌಲ್ಯದ ವಿವಿಧ ಪರಿಕರಗಳನ್ನು ಖರೀದಿಸಲು ಮುಂದಾಗಿದೆ.
“ಆಕಾಶ್-ಎಸ್’ ಕ್ಷಿಪಣಿಯ ಎರಡು ರೆಜಿಮೆಂಟ್ ಮತ್ತು 25 “ಸುಧಾರಿತ ಲಘು ಹೆಲಿಕಾಪ್ಟರ್’ (ಎಎಲ್‌ಎಚ್) ಗಳನ್ನು ಕೊಳ್ಳಲು ಮುಂದಾಗಿದೆ. ಈ ನಿಟ್ಟಿನಲ್ಲಿ ರಕ್ಷಣ ಇಲಾಖೆಗೆ ಸೇನೆ ಪ್ರಸ್ತಾವನೆ ಸಲ್ಲಿಸಿದ್ದು, ಸದ್ಯದಲ್ಲೇ ರಕ್ಷಣ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಆಕಾಶ್-ಎಸ್ ಈ ಹಿಂದೆ ತಯಾರಿಸಲಾಗಿದ್ದ ಆಕಾಶ್ ಕ್ಷಿಪಣಿ ವ್ಯವಸ್ಥೆಯ ಸುಧಾರಿತ ರೂಪ. ಶತ್ರುಗಳ ಯುದ್ಧ ವಿಮಾನ ಮತ್ತು ಕ್ಷಿಪಣಿಗಳನ್ನು 25-30 ಕಿ.ಮೀ. ದೂರದಿಂದಲೇ ಕರಾರುವಾಕ್ ಆಗಿ ಹೊಡೆದುರುಳಿಸಬಲ್ಲುದು.
ಡಿಆರ್‌ಡಿಒದಿಂದ ಅಭಿವೃದ್ಧಿ :
ಗುಡ್ಡಗಾಡು ಮತ್ತು ದುರ್ಗಮ ಪ್ರದೇಶಗಳಲ್ಲಿ ಈ ಕ್ಷಿಪಣಿಗಳನ್ನು ಸೇನೆ ಸುಲಭವಾಗಿ ಬಳಸಬಹುದು. ಲಡಾಖ್ ನಂಥ ಭಾರೀ ಚಳಿಯ ವಾತಾವರಣದಲ್ಲೂ ಇದು ಪರಿಣಾಮ ಕಾರಿಯಾಗಿ ಕೆಲಸ ಮಾಡಬಲ್ಲುದು. ಇದನ್ನು ಚೀನ, ಪಾಕ್ ಗಡಿಯಲ್ಲಿ ಬಳಸಬಹುದಾಗಿದೆ. ಇದನ್ನು ಭಾರತೀಯ ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ತಯಾರಿಸಿದೆ. 25 ಎಎಲ್‌ಎಚ್ “ಧ್ರುವ್ ಮಾರ್ಕ್ 3′ ಗಸ್ತು ಹೆಲಿಕಾಪ್ಟರ್‌ಗಳನ್ನು ಕೊಳ್ಳಲು ಸೇನೆ ಸಿದ್ಧವಾಗಿದೆ. ಈ ಹೆಲಿಕಾಪ್ಟರ್‌ಗಳನ್ನು ಎಚ್‌ಎಎಲ್ ನಿರ್ಮಿಸುತ್ತದೆ.