Advertisement

ಬೂಂ ಬೂಂ ಅಫ್ರಿದಿ ಬೈ ಬೈ

10:42 AM Feb 21, 2017 | Team Udayavani |

ಶಾರ್ಜಾ: ಪಾಕಿಸ್ಥಾನದ “ಲೆಜೆಂಡ್ರಿ ಆಲ್‌ರೌಂಡರ್‌’ ಶಾಹಿದ್‌ ಅಫ್ರಿದಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ ವಿಶ್ವ ಕ್ರಿಕೆಟಿನ ಸ್ಫೋಟಕ ಹಾಗೂ ವರ್ಣರಂಜಿತ ಅಧ್ಯಾಯಕ್ಕೆ ತೆರೆ ಬಿದ್ದಿದೆ.
ರವಿವಾರ ರಾತ್ರಿಯ “ಪಾಕಿಸ್ಥಾನ ಸೂಪರ್‌ ಲೀಗ್‌’ ಕೂಟದ ಕರಾಚಿ ಕಿಂಗ್ಸ್‌-ಪೇಶಾವರ್‌ ಝಲಿ¾ ಪಂದ್ಯದ ಬಳಿಕ ಅಫ್ರಿದಿ ಅಂತಾರಾಷ್ಟ್ರೀಯ ಕ್ರಿಕೆಟ್‌ ವಿದಾಯವನ್ನು ಪ್ರಕಟಿಸಿದರು. ಈ ಪಂದ್ಯದಲ್ಲಿ ಅಫ್ರಿದಿ ಪೇಶಾವರ್‌ ತಂಡದ ಪರ 28 ಎಸೆತಗಳಿಂದ 54 ರನ್‌ ಸಿಡಿಸಿದರು. ಆದರೂ ತಂಡದ ಗೆಲುವಿಗೆ ಇದು ಸಾಕಾಗಲಿಲ್ಲ.

Advertisement

“ನಾನು ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳುತ್ತಿದ್ದೇನೆ. ಆದರೆ ಅಭಿಮಾನಿಗಳಿಗೋಸ್ಕರ ಇಂಥ ಲೀಗ್‌ ಪಂದ್ಯಾವಳಿಗಳಲ್ಲಿ ಆಡುವುದನ್ನು ಇನ್ನೆರಡು ವರ್ಷಗಳ ಕಾಲ ಮುಂದುವರಿಸುತ್ತೇನೆ’ ಎಂದು ಅಫ್ರಿದಿ ಹೇಳಿದರು.
ಮಾರ್ಚ್‌ ಒಂದಕ್ಕೆ 37 ವರ್ಷ ಪೂರ್ತಿಗೊಳಿಸಲಿರುವ ಶಾಹಿದ್‌ ಅಫ್ರಿದಿ ಈಗಾಗಲೇ 2010ರಲ್ಲಿ ಟೆಸ್ಟ್‌ ಕ್ರಿಕೆಟಿಗೆ, 2015ರ ವಿಶ್ವಕಪ್‌ ಬಳಿಕ ಏಕದಿನ ಕ್ರಿಕೆಟಿಗೆ ವಿದಾಯ ಹೇಳಿದ್ದರು. ಆದರೂ 2016ರ ಟಿ-20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಅವರನ್ನು ಪಾಕಿಸ್ಥಾನ ತಂಡದ ನಾಯಕನನ್ನಾಗಿ ಉಳಿಸಿಕೊಳ್ಳಲಾಗಿತ್ತು. ಆದರೆ ಇಲ್ಲಿ ಪಾಕ್‌ ಮೊದಲ ಸುತ್ತಿನಲ್ಲೇ ಹೊರಬಿತ್ತು. ಅಫ್ರಿದಿ ಮೂಲೆಗುಂಪಾದರು. ಕಳೆದ ಸೆಪ್ಟಂಬರ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಯುಎಇಯಲ್ಲಿ ಅಫ್ರಿದಿ ವಿದಾಯ ಟಿ-20 ಪಂದ್ಯವೊಂದನ್ನು ಆಡಲು ಬಯಸಿದರಾದರೂ ಅವರನ್ನು ಆಯ್ಕೆಗಾರರು ಗಣನೆಗೇ ತೆಗೆದುಕೊಳ್ಳಲಿಲ್ಲ.

2ನೇ ಏಕದಿನದಲ್ಲೇ ವಿಶ್ವದಾಖಲೆ: 1996ರಲ್ಲಿ ಕೀನ್ಯಾ ವಿರುದ್ಧ “ಕೆಸಿಎ ಸೆಂಟಿನರಿ ಸಿರೀಸ್‌’ನಲ್ಲಿ ಏಕದಿನ ಪಂದ್ಯವಾಡುವ ಮೂಲಕ ಶಾಹಿದ್‌ ಅಫ್ರಿದಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಅಡಿಯಿರಿಸಿದ್ದರು.  ಮೊದಲ ಪಂದ್ಯದಲ್ಲಿ ಅವರಿಗೆ ಬ್ಯಾಟ್‌ ಹಿಡಿಯುವ ಅವಕಾಶ ಸಿಗಲಿಲ್ಲ. ಶ್ರೀಲಂಕಾ ವಿರುದ್ಧ ಆಡಿದ ದ್ವಿತೀಯ ಪಂದ್ಯದಲ್ಲೇ 37 ಎಸೆತಗಳಿಂದ ಸೆಂಚುರಿ ಸಿಡಿಸಿ ವಿಶ್ವ ಕ್ರಿಕೆಟ್‌ನಲ್ಲಿ ಭರ್ಜರಿ ಸಂಚಲನ ಮೂಡಿಸಿದರು. ಅವರ ಈ ಶರವೇಗದ ಶತಕದ ವಿಶ್ವದಾಖಲೆ 18 ವರ್ಷಗಳ ಕಾಲ ಅಜೇಯವಾಗಿತ್ತು. 

ಆಗಲೇ ಅಫ್ರಿದಿ ಅಭಿಮಾನಿ ವರ್ಗ ಹುಟ್ಟಿಕೊಂಡಿತು. ಪ್ರತಿ ಪಂದ್ಯದಲ್ಲೂ ಅವರಿಂದ ಸ್ಫೋಟಕ ಬ್ಯಾಟಿಂಗನ್ನು ಬಯಸತೊಡಗಿತು. ಅಫ್ರಿದಿ ನಿರಾಸೆಗೊಳಿಸಲಿಲ್ಲ. ಎದುರಾಳಿ ಬೌಲರ್‌ಗಳಿಗೆ ಅವರು ಸಿಂಹಸ್ವಪ್ನರಾಗುತ್ತಲೇ ಹೋದರು. ಲೆಗ್‌ಸ್ಪಿನ್‌ ಬೌಲಿಂಗ್‌ ಮೂಲಕ ನಿರ್ಣಾಯಕ ಹಂತಗಳಲ್ಲಿ ವಿಕೆಟ್‌ ಕೀಳುವ ಕಲೆಗಾರಿಕೆಯೂ ಅವರಿಗೆ ಸಿದ್ದಿಸಿತ್ತು.

ಆದರೆ ಕ್ರಿಕೆಟ್‌ನಲ್ಲಿ ಮೇಲೇರಿದಂತೆಲ್ಲ ಅಫ್ರಿದಿ ಸಾಕಷ್ಟು ವಿವಾದಗಳಿಂದ ಹೆಸರು ಕೆಡಿಸಿಕೊಂಡರು. ನಿಷೇಧಕ್ಕೂ ಒಳಗಾದರು. ಪಿಸಿಬಿ ಜತೆಗಿನ ಇವರ ಸಂಬಂಧ ಕೂಡ ಹಳಸತೊಡಗಿತು. ಇವೆಲ್ಲವೂ ಅವರ ಕ್ರಿಕೆಟ್‌ ಸಾಧನೆಗೆ ಅಂಟಿಕೊಂಡ ಕಪ್ಪುಚುಕ್ಕಿಗಳಾಗಿಯೇ ಉಳಿಯುತ್ತವೆ.

Advertisement

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಫ್ರಿದಿ ಸಾಧನೆ
– 27 ಟೆಸ್ಟ್‌, 1,716 ರನ್‌, 5 ಶತಕ, 48 ವಿಕೆಟ್‌
– 398 ಏಕದಿನ, 8,064 ರನ್‌, 6 ಶತಕ, 395 ವಿಕೆಟ್‌
– 98 ಟಿ-20, 1,405 ರನ್‌, 4 ಅರ್ಧ ಶತಕ, 97 ವಿಕೆಟ್‌

Advertisement

Udayavani is now on Telegram. Click here to join our channel and stay updated with the latest news.

Next