Advertisement

ಜಿಎಸ್‌ಟಿಯಿಂದ ಪುಸ್ತಕಗಳಿಗೆ ವಿನಾಯಿತಿ ಅಗತ್ಯ

03:46 PM Apr 24, 2018 | Team Udayavani |

ಬೆಂಗಳೂರು: ಪುಸ್ತಕಗಳ ಮೇಲೆ ವಿಧಿಸಿರುವ ಶೇ. 12ರಷ್ಟು ಜಿಎಸ್‌ಟಿಯಿಂದ ಲೇಖಕರು ಹಾಗೂ ಪ್ರಕಾಶಕರಿಗೆ ಅನ್ಯಾಯವಾಗುತ್ತಿದ್ದು, ಪುಸ್ತಕಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಬೇಕು ಎಂದು ಕವಿ ಡಾ.ಸಿದ್ದಲಿಂಗಯ್ಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement

ನಗರದ ಸೆಂಟ್ರಲ್‌ ಕಾಲೇಜು ಆವರಣದ ಕೇಂದ್ರ ಸಾಹಿತ್ಯ ಅಕಾಡೆಮಿ ಸಭಾಂಗಣದಲ್ಲಿ ಸೋಮವಾರ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಪ್ರಕಾಶಕರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವಪುಸ್ತಕ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾದರೂ ಬರೆಯುವವರ ಹಾಗೂ ಮುದ್ರಿಸುವವರ ಸಂಖ್ಯೆ ಕಡಿಮೆಯಾಗಿಲ್ಲ.

ರಾಜ್ಯಸರ್ಕಾರ ಕರ್ನಾಟಕ ಪುಸ್ತಕ ನೀತಿಯನ್ನು ಅಂಗೀಕರಿಸಿದ್ದು, ಶೀಘ್ರವಾಗಿ ಅದನ್ನು ಜಾರಿಗೊಳಿಸಬೇಕು. ಇದರ ಜತೆಗೆ ಮುದ್ರಕರಿಗೆ ಸಬ್ಸಿಡಿ ದರದಲ್ಲಿ ಮುದ್ರಣ ಕಾಗದ ನೀಡಬೇಕು. ಗ್ರಂಥಾಲಯ ಪ್ರಾಧಿಕಾರಕ್ಕೆ ನೀಡಬೇಕಾಗಿರುವ ಸೆಸ್‌ನಲ್ಲಿ ಬಿಬಿಎಂಪಿ 300 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದು ಅದನ್ನು ಕೂಡಲೇ ಪಾವತಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.

ಇವುಗಳ ಜತೆಗೆ ಪುಸ್ತಕ ಓದುಗರನ್ನು ಪ್ರೋತ್ಸಾಹಿಸಲು ತಮಿಳುನಾಡು ಸರ್ಕಾರ ಕೈಗೊಂಡಿರುವ ಕೆಲವು ಯೋಜನೆಗಳ ಪೈಕಿ ಕೆಲವನ್ನು ರಾಜ್ಯದಲ್ಲೂ ಅಳವಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಇಂದು ತಂತ್ರಜ್ಞಾನ ಸುಧಾರಣೆಯಿಂದ ಮೊಬೈಲ್‌ ಹಾಗೂ ಕಂಪ್ಯೂಟರ್‌ಗಳಲ್ಲಿ ಓದುವ ಇ-ಪುಸ್ತಕಗಳು ಬಂದಿದ್ದು, ಐಟಿ ಬಿಟಿ ವಲಯದ ಓದುಗರ ಸಂಖ್ಯೆ ಹೆಚ್ಚಾಗಿರುವುದು ಆರೋಗ್ಯಕರ ಬೆಳವಣೆಗೆಯಾಗಿದೆ ಎಂದರು.

ಪುಸ್ತಕ ಪ್ರಾಧಿಕಾರ ಅಧ್ಯಕ್ಷೆ ಡಾ.ವಸುಂದರಾ ಭೂಪತಿ ಮಾತನಾಡಿ, ಮರುಮುದ್ರಣ ಮಾಡಲಾಗದ ಹಳೆಯ ಪುಸ್ತಕಗಳನ್ನು ಓದುಗರಿಗಾಗಿ ಇ-ಪುಸ್ತಕಗಳ ಮಾಡುವ ಯೋಜನೆಯನ್ನು ಪ್ರಾಧಿಕಾರ ಹಾಕಿಕೊಂಡಿದ್ದು, ಹೀಗೆ ಮಾಡಿದರೆ ಉಚಿತವಾಗಿ ನೀಡಿದಂತಾಗುತ್ತದೆ ಈ ನಿಟ್ಟಿನಲ್ಲಿ ಇ-ಪುಸ್ತಕದ ವ್ಯವಹಾರ ಮಾದರಿ ಹಾಗೂ ಆದಾಯ ಕುರಿತು ಸೂಕ್ತ ಚರ್ಚೆಯಾಗಬೇಕು ಎಂದರು.

Advertisement

ಕರ್ನಾಟಕ ಪ್ರಕಾಶಕರ ಸಂಘ ಅಧ್ಯಕ್ಷ ಪ್ರಕಾಶ್‌ ಕಂಬತ್ತಳ್ಳಿ, ಸಾಹಿತ್ಯ ಅಕಾಡೆಮಿ ದಕ್ಷಿಣ ಪ್ರಾದೇಶಿಕ ಕೇಂದ್ರ ಕಾರ್ಯದರ್ಶಿ ಎಸ್‌.ಪಿ. ಮಹಾಲಿಂಗೇಶ್ವರ್‌, ಐಬಿಎಚ್‌ ಪ್ರಕಾಶನ ಮುಖ್ಯಸ್ಥ ಸಂಜಯ ಅಡಿಗ, ಭಾರತಿ ಪ್ರಕಾಶನ ಮಾಲೀಕ ಶ್ರೀನಿವಾಸ್‌, ನವಕರ್ನಾಟಕ ಪ್ರಕಾಶನ ಮುಖ್ಯಸ್ಥ ರಮೇಶ ಉಡುಪ ಹಾಗೂ ಕರ್ನಾಟಕ ಪ್ರಕಾಶಕರ ಸಂಘ ಪ್ರಧಾನ ಕಾರ್ಯದರ್ಶಿ ನ.ರವಿಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next