ಬೆಂಗಳೂರು: ಓಲಾ, ಉಬರ್‌ನಂತೆ ಬಿಎಂಟಿಸಿ ಬಸ್ ಗಳಲ್ಲಿ ಕೂಡ ನೀವು ಇನ್ಮುಂದೆ ಮೊದಲೇ ಸೀಟು ಬುಕಿಂಗ್ ಮಾಡಿ ಪ್ರಯಾಣಿಸಬಹುದು. ದೇಶದ ನಗರ ಸಮೂಹ ಸಾರಿಗೆಯಲ್ಲಿ ಇದೇ ಮೊದಲ ಬಾರಿಗೆ ಇಂತಹದ್ದೊಂದು ವ್ಯವಸ್ಥೆ ಪರಿಚಯಿಸುತ್ತಿದ್ದು, ಐಟಿ ರಾಜಧಾನಿ ಈ ವಿನೂತನ ವ್ಯವಸ್ಥೆಗೆ ಈಗ ಸಾಕ್ಷಿಯಾಗುತ್ತಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ “ವಾಯುವಜ್ರ’ ಹವಾನಿಯಂತ್ರಿತ ವೋಲ್ವೊಬಸ್ ಸೇವೆಗಳಲ್ಲಿ ಈ ಸೌಲಭ್ಯವನ್ನು ಕಲ್ಪಿಸಿದ್ದು, ನಗರದ ವಿವಿಧೆಡೆ ನಿಲ್ದಾಣಕ್ಕೆ ತೆರಳುವ ವೋಲ್ವೊ ಬಸ್ ಗಳಲ್ಲಿ ಪ್ರಯಾಣಿಕರು ಕೇವಲ ಅರ್ಧಗಂಟೆ ಮುಂಚಿತವಾಗಿ (ಗರಿಷ್ಠ 30 ದಿನ ಮುಂಚಿತವೂ ಆಗಬಹುದು)ಬುಕಿಂಗ್‌ಮಾಡಿ,ಪ್ರಯಾಣಿಸಬಹುದು.
ಶನಿವಾರದಿಂದಲೇ ಈ ಯೋಜನೆ ಜಾರಿಗೊಳಿಸಿದ್ದು, ಭಾನುವಾರದಿಂದ ಈ ಸೇವೆ ಲಭ್ಯವಾಗಲಿದೆ. ಹೀಗೆ ಮೊದಲೇ ಬುಕಿಂಗ್ ಮಾಡಿ ಪ್ರಯಾಣಿಸುವ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಬಿಎಂಟಿಸಿಯ ಹಲವು ವರ್ಷಗಳ ಕನಸು. ದಶಕದ ಹಿಂದೆ ಕೂಡ ಈ ಚರ್ಚೆ ನಡೆದಿತ್ತು. ಈಗ ನನಸಾಗಿದೆ.
ನಗರದ ಎಚ್‌ಎಎಲ್, ವೈಟ್‌ಫೀಲ್ಡ್, ಬನಶಂಕರಿ, ಕಾಡುಗೋಡಿ, ಎಲೆಕ್ಟ್ರಾನಿಕ್ ಸಿಟಿ, ಚಂದಾಪುರ, ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ಸ್ಯಾಟಲೈಟ್ ಬಸ್ ನಿಲ್ದಾಣ, ಡಿಎಲ್‌ಎಫ್ ಅಪಾರ್ಟ್ ಮೆಂಟ್ ಸೇರಿದಂತೆ ವಿವಿಧೆಡೆಯಿಂದ ಕೆಎಸ್‌ಆರ್ ಟಿಸಿಯ ಅವತಾರ್ ತಂತ್ರಾಂಶದ ಮೂಲಕ ಅಥವಾ ಕೆಎಸ್‌ಆರ್‌ಟಿಸಿ ಮೊಬೈಲ್ ಆ್ಯಪ್ ಅಥವಾ ನಗರದಾದ್ಯಂತ ನೂರಕ್ಕೂ ಹೆಚ್ಚು ಇರುವ ಕೆಎಸ್‌ಆರ್‌ಟಿಸಿಯ ಅಧಿಕೃತ ಫ್ರ್ಯಾಂಚೈಸಿಗಳಲ್ಲಿ ಟಿಕೆಟ್ ಕಾಯ್ದಿರಿಸಬಹುದು. ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ, ಪ್ರಯಾಣ ದರ 200 ರೂ.ಗಿಂತ ಅಧಿಕವಾಗಿದ್ದರೆ10 ರೂ. ಹಾಗೂ 200 ರೂ. ಕಡಿಮೆ ಇದ್ದರೆ 5 ರೂ. ಬುಕಿಂಗ್ ಶುಲ್ಕ ವಿಧಿಸಲಾಗುವುದು ಎಂದು ಬಿಎಂಟಿಸಿ ತಿಳಿಸಿದೆ.
ಒಂದೇ ಗುಂಪಿನ ನಾಲ್ವರು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಬುಕಿಂಗ್ ಮಾಡಿದರೆ, ಪ್ರಯಾಣ ದರದಲ್ಲಿ ಶೇ. 5ರಷ್ಟು ರಿಯಾಯ್ತಿ ಹಾಗೂ ಹೋಗಿ-ಬರುವ ಪ್ರಯಾಣಕ್ಕೆ ಒಮ್ಮೆಲೆ ಆಸನ ಕಾಯ್ದಿರಿಸಿದರೆ, ಶೇ. 10 ರಿಯಾಯ್ತಿ ದೊರೆಯಲಿದೆ. ಹೀಗೆ ಬುಕಿಂಗ್ ಮಾಡಿದ ಪ್ರಯಾಣಿಕರ ಮೊಬೈಲ್‌ಗೆ ಸೀಟು ಖಾತ್ರಿ ಬಗ್ಗೆ ಎಸ್‌ಎಂಎಸ್ ಬರುತ್ತದೆ. ಇ-ಟಿಕೆಟ್ ನೊಂದಿಗೆ ಭಾವಚಿತ್ರವಿರುವ ಗುರುತಿನ ಚೀಟಿ,ಆಧಾರ್ ಸೇರಿದಂತೆ ಐಡಿ ಹೊಂದಿರಬೇಕು.
ನಗರದಿಂದ ವಿಮಾನ ನಿಲ್ದಾಣಕ್ಕೆ ಸುಮಾರು 335 ವೋಲ್ವೊ ಟ್ರಿಪ್‌ಗ್ಳನ್ನು ಬಿಎಂಟಿಸಿ ಹೊಂದಿದೆ. ಸದ್ಯ ಕಿ.ಮೀ.ಗೆ 80 ರೂ. ಖರ್ಚಾಗುತ್ತಿದ್ದು, ಆದಾಯ ಪ್ರತಿಕೀ.ಮೀ.ಗೆ 60 ರೂ. ಇದೆ.ಈವ್ಯವಸ್ಥೆಯಿಂದ ಕೊರತೆಯಾಗುವ 20 ರೂ.ಯನ್ನು ಸರಿದೂಗಿಸುವ ಲೆಕ್ಕಾಚಾರ ಬಿಎಂಟಿಸಿ ಹೊಂದಿದೆ.