Advertisement

ವಿದ್ಯಾರ್ಥಿಗಳಿಗಾಗಿ ಕಾಲೇಜಲ್ಲೇ ಬುಕ್‌ಬ್ಯಾಂಕ್‌

06:25 AM Jan 21, 2018 | Team Udayavani |

ಬೆಂಗಳೂರು: ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಇನ್ಮುಂದೆ ಪಠ್ಯಪುಸ್ತಕ ಖರೀದಿಯ ಕಿರಿಕಿರಿ ತಪ್ಪಲಿದೆ.

Advertisement

ರಾಜ್ಯದ ಸರ್ಕಾರಿ ಪಿಯು ಕಾಲೇಜಿನಲ್ಲಿ ರಚನೆಯಾಗಲಿದೆ “ಬುಕ್‌ ಬ್ಯಾಂಕ್‌’. ಕಲಾ, ವಾಣಿಜ್ಯಮತ್ತು ವಿಜ್ಞಾನ ವಿಭಾಗದ ಪಠ್ಯಪುಸ್ತಕ ಸೇರಿದಂತೆ ಭಾಷಾ ವಿಷಯಗಳ ಪಠ್ಯ ಪುಸ್ತಕವೂ ಬುಕ್‌ ಬ್ಯಾಂಕ್‌ನಲ್ಲಿ ಲಭ್ಯವಿರಲಿದೆ.

ವಿದ್ಯಾರ್ಥಿಗಳು ಬುಕ್‌ ಬ್ಯಾಂಕ್‌ನಿಂದ ಪಡೆದ ಪುಸ್ತಕವನ್ನು ವರ್ಷಪೂರ್ತಿ ಮನೆಯಲ್ಲಿ ಅಥವಾ ಕಾಲೇಜಿನಲ್ಲಿ ಇಟ್ಟುಕೊಂಡು ವ್ಯಾಸಂಗ ಮಾಡಬಹುದು. ಶೈಕ್ಷಣಿಕ ವರ್ಷ ಮುಗಿದ ನಂತರ ಅದನ್ನು ವಾಪಸ್‌ ಕಾಲೇಜಿಗೆ ನೀಡಬೇಕು. ಅದೇ ಪುಸ್ತಕವನ್ನು ಮುಂದಿನ ವರ್ಷ ಬೇರೆ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತದೆ.

ಪ್ರತಿ ವರ್ಷ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ಪಠ್ಯ ಪುಸ್ತಕ ನಿಗದಿತ ಸಮಯದೊಳಗೆ ಸಿಗುವುದಿಲ್ಲ. ಪ್ರಸಕ್ತ ಸಾಲಿನಲ್ಲೂ ಇದೇ ಸಮಸ್ಯೆ ಉದ್ಭವವಾಗಿತ್ತು. ದಸರಾ ರಜೆ ಮುಗಿದರೂ ಪಠ್ಯಪುಸ್ತಕ ಲಭ್ಯವಾಗಿರಲಿಲ್ಲ. ಅನೇಕ ಕಡೆಗಳಲ್ಲಿ ಲಭ್ಯವಿರುವ ಪಠ್ಯಪುಸ್ತಕವನ್ನೇ ಜೆರಾಕ್ಸ್‌ ಮಾಡಿಕೊಂಡಿರುವ ನಿದರ್ಶನವೂ ಇದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಹೆಚ್ಚು ಪಠ್ಯಪುಸ್ತಕ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾಲೇಜಿನಲ್ಲೊಂದು ಬುಕ್‌ಬ್ಯಾಂಕ್‌ ತೆರೆಯಲಾಗುತ್ತಿದೆ.

4 ಕೋಟಿ ವೆಚ್ಚದಲ್ಲಿ ಯೋಜನೆ: ರಾಜ್ಯದ ಎಲ್ಲಾ ಸರ್ಕಾರಿ ಪಿಯು ಕಾಲೇಜಿನಲ್ಲಿರುವ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕಾಲೇಜಿನ ಪ್ರಾಂಶುಪಾಲರಿಗೆ ಪುಸ್ತಕ ಖರೀದಿಸಲು ಅನುದಾನ ಒದಗಿಸಲಾಗುತ್ತದೆ. ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪುಸ್ತಕಗಳಿಗೆ 2 ಕೋಟಿ ರೂ. ಹಾಗೂ ಕಲಾ ಮತ್ತು ಭಾಷಾ ವಿಭಾಗದ ಪುಸ್ತಕಕ್ಕೆ 2 ಕೋಟಿ ಸೇರಿ 4 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಪ್ರಾಂಶುಪಾಲರು ನೀಡುವ ಮಾಹಿತಿಗೆ
ಅನುಗುಣವಾಗಿ ಅನುದಾನ ಮಂಜೂರು ಮಾಡಲಾಗುತ್ತದೆ. ಪುಸಕ್ತ ಖರೀದಿ, ಬುಕ್‌ಬ್ಯಾಂಕ್‌ ನಿರ್ಮಾಣ ಹಾಗೂ ನಿರ್ವಹಣೆಯ ಹೊಣೆಯನ್ನು ಪ್ರಾಂಶುಪಾಲರಿಗೆ ನೀಡಲಾಗಿದೆ.

Advertisement

ಸಾಫ್ಟ್ವೇರ್‌ ಮೂಲಕ ನಿಗಾ: ಬುಕ್‌ಬ್ಯಾಂಕ್‌ನಿಂದ ವಿದ್ಯಾರ್ಥಿಗಳು ಪುಸ್ತಕ ಪಡೆದಿದ್ದಾರೋ, ಇಲ್ಲವೋ ಎನ್ನುವ ಮಾಹಿತಿಯನ್ನು ಇಲಾಖೆಯ ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಟ್ರ್ಯಾಕ್‌ ಮಾಡಲಿದ್ದಾರೆ. ಇದಕ್ಕಾಗಿಯೇ ಸಾಫ್ಟ್ವೇರ್‌ ರಚನೆ ಮಾಡಲಾಗಿದೆ. ಕಾಲೇಜಿನವರು ಖರೀದಿಸಿರುವ ಪುಸ್ತಕದ ಮಾಹಿತಿಮತ್ತು ವಿದ್ಯಾರ್ಥಿಗಳ ಮಾಹಿತಿಯನ್ನು ಸಾಫ್ಟ್ವೇರ್‌ನಲ್ಲಿ ಅಪ್‌ ಲೋಡ್‌ ಮಾಡಿ ನಿಗಾ ವಹಿಸಲಾಗುತ್ತದೆ.

ಪುಸ್ತಕ ಜೋಪಾನ
ಆಯಾ ಕಾಲೇಜಿನಲ್ಲಿ ವಿದ್ಯಾರ್ಥಿ ಗಳು ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿಷಯದ ಪುಸ್ತಕ ಬುಕ್‌ಬ್ಯಾಂಕ್‌ನಲ್ಲಿ ಲಭ್ಯವಿರುತ್ತದೆ. ವರ್ಷಪೂರ್ತಿ ಪುಸ್ತಕವನ್ನು ಜೋಪಾನವಾಗಿಟ್ಟುಕೊಳ್ಳುವ ಜವಾಬ್ದಾರಿಯೂ ವಿದ್ಯಾರ್ಥಿಗಳ ಮೇಲಿದೆ. ಕಾಲೇಜು ಆರಂಭದಿಂದಲೇ ವಿದ್ಯಾರ್ಥಿಗಳಿಗೆ ಬುಕ್‌ಬ್ಯಾಕ್‌ನಲ್ಲಿ ಪುಸ್ತಕ ಸಿಗುವಂತೆ ಮಾಡಲಾಗುತ್ತದೆ ಎಂದು ಪಿಯು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ಎಲ್ಲ ಸರ್ಕಾರಿ ಪಿಯು ಕಾಲೇಜಿನಲ್ಲಿ ಬುಕ್‌ಬ್ಯಾಂಕ್‌ ತೆರೆಯುತ್ತಿದ್ದೇವೆ. ಬುಕ್‌ಬ್ಯಾಂಕ್‌ ನಿಂದ ಪುಸ್ತಕ ಪಡೆದ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷ ಮುಗಿದ ನಂತರ ವಾಪಸ್‌ ನೀಡಬೇಕಾಗುತ್ತದೆ. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ.
–  ಸಿ.ಶಿಖಾ, ಪಿಯು ಇಲಾಖೆ ನಿರ್ದೇಶಕಿ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next