ಎಲ್ಲಿ ನೋಡಿದರಲ್ಲಿ ಬರೀ ಪುಸ್ತಕಗಳು. ಸಾರ್ವಜನಿಕ ಲೈಬ್ರರಿ ಇರಬೇಕು ಎಂದುಕೊಂಡರೆ, ನಿಮ್ಮ ಊಹೆ ಶುದ್ಧ ಸುಳ್ಳು. ಈ “ಬುಕ್ ವರ್ಲ್ಡ್’ ಅನ್ನು ಶ್ರದ್ಧೆಯಿಂದ ಕಟ್ಟಿದವರು, ರೇಣುಕಾ. ವಿಜ್ಞಾನಿ ಆಗಿದ್ದ ಇವರನ್ನು ಲೈಬ್ರರಿ ಲೋಕ ಹೇಗೆ ಸೆಳೆಯಿತು?
“ಬುಕ್ ವರ್ಲ್ಡ್’ ಎಂಬ ಪುಸ್ತಕಗಳ ಲೋಕಕ್ಕೆ ಕಾಲಿಟ್ಟಾಗ, ನನ್ನ ಸುತ್ತ ವಿಸ್ಮಯದ ಕೋಟೆ ಕಟ್ಟಿದಹಾಗೆ ಆಗಿತ್ತು. ಸಾರ್ವಜನಿಕರಿಗಾಗಿಯೇ ಹುಟ್ಟಿಕೊಂಡ ಈ ಖಾಸಗಿ ಗ್ರಂಥಾಲಯದಲ್ಲಿ 5,500ಕ್ಕೂ ಹೆಚ್ಚು ಪುಸ್ತಕಗಳಿವೆ. 25ಕ್ಕೂ ಹೆಚ್ಚು ಪಾಕ್ಷಿಕ, ಮಾಸಿಕ ಮತ್ತು ವಾರಪತ್ರಿಕೆಗಳು ಮನೆಗೆ ತಂದು ಓದಲು ಲಭ್ಯವಿದೆ. ಪುಸ್ತಕದ ಹುಚ್ಚು ಹೆಚ್ಚೇ ಇರುವ ರೇಣುಕಾ ಅವರ ಕನಸಿನ ಕೂಸಾದ “ಬುಕ್ ವರ್ಲ್ಡ್’ 6 ವರ್ಷಗಳ ಹಿಂದೆ ನಾಗರಭಾವಿಯಲ್ಲಿ ಚಿಕ್ಕ ಕೋಣೆಯಲ್ಲಿ ಜನ್ಮ ತಾಳಿತು. ಈಗ 3 ವರ್ಷಗಳ ಹಿಂದೆ ರಾಜರಾಜೇಶ್ವರಿ ನಗರಕ್ಕೆ ಶಿಫ್ಟ್ ಆಗಿದೆ.
ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ರೇಣುಕಾ, ವಿಜ್ಞಾನಿಯಾಗಿ 14 ವರ್ಷ ಸೇವೆ ಸಲ್ಲಿಸಿದವರು. ಮನೆ ಕೆಲಸ ಮತ್ತು ವೃತ್ತಿ ಜೀವನ ಎರಡನ್ನೂ ಚೆಂದವಾಗಿಯೇ ನಿಭಾಯಿಸುತ್ತಿದ್ದರೂ ತಾವು ಸಮಾಜಕ್ಕೆ ಇನ್ನೇನಾದರೂ ಒಳಿತು ಮಾಡಬೇಕೆಂಬ ಮಹದಾಸೆಯಿಂದ ಖಾಸಗಿ ಲೈಬ್ರರಿ ತೆರೆಯಲು ಮುಂದಾದರು. ಹೊಸತೇನನ್ನೋ ಮಾಡುತ್ತೇನೆ ಎನ್ನುವ ತುಡಿತಕ್ಕೆ ಪತಿಯ ಬೆಂಬಲವೂ ಜೊತೆಯಾಯಿತು. ಈಗ ಸುಸಜ್ಜಿತವಾದ ಸ್ವಂತ ಗ್ರಂಥಾಲಯ ತೆರೆದು, ಅನೇಕ ಓದುಗರಿಗೆ, ವಿಶೇಷವಾಗಿ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಓದುವ ಹವ್ಯಾಸ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಎಲ್ಲಿದೆ? ಅಲ್ಲೇನುಂಟು?: ರಾಜರಾಜೇಶ್ವರಿ ನಗರದಲ್ಲಿರುವ ಬಾಲಕೃಷ್ಣ ರಂಗಮಂದಿರದ ಪಕ್ಕದಲ್ಲಿಯೇ ಚಿಕ್ಕದೊಂದು ಜಾಗ ಬಾಡಿಗೆಗೆ ಪಡೆದಿದ್ದಾರೆ. ಸೋಮವಾರ ಮತ್ತು ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಓದುಗರು ಬಂದು ಇಲ್ಲಿಯೇ ಕುಳಿತು ಮಾಸಿಕ ಪಾಕ್ಷಿಕ ಮತ್ತಿತರ ಪತ್ರಿಕೆಗಳನ್ನು ಓದಬಹುದು. ಪುಸ್ತಕಗಳನ್ನು ಮನೆಗೆ ಒಯ್ಯಲು, ನಿಗದಿತ ಶುಲ್ಕ ಕಟ್ಟಿ ಸದಸ್ಯರಾಗಿರಬೇಕು. ಒಬ್ಬರು ಒಂದು ಮ್ಯಾಗಜಿನ್ ಮತ್ತು ಒಂದು ಪುಸ್ತಕವನ್ನು ಮನೆಗೆ ಒಯ್ಯಬಹುದು. ಸದಸ್ಯತ್ವದಲ್ಲೂ ವಿವಿಧ ಪ್ಯಾಕೇಜುಗಳಿವೆ. ಹಳೆಯ ಮತ್ತು ಹೊಸತಲೆಮಾರಿನ ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯ, ಮಕ್ಕಳ ಸಾಹಿತ್ಯ, ಜ್ಞಾನದ ಆಗರವಾದ ವಿವಿಧ ಬಗೆಯ ವಿಶ್ವಕೋಶಗಳು ಇವರ ಸಂಗ್ರಹದಲ್ಲಿವೆ.
ಅನುಮಾನ, ಆತ್ಮವಿಶ್ವಾಸವಾಗಿ…: ಈಗ ಅನ್‌ಲಿಮಿಟೆಡ್ ಡಾಟಾ ಯುಗದಲ್ಲಿ ಎಲ್ಲವೂ ಬೆರಳ ತುದಿಯಲ್ಲಿದೆ ಎನ್ನುವಾಗ ಮಕ್ಕಳಿಗೆ ಓದುವ ಚಟ ಹತ್ತಿಸಬೇಕೆಂಬ ಅವರ ಬಯಕೆಯ ಬಗ್ಗೆ ಮೊದಲು ಅನುಮಾನವೇ ಇತ್ತಂತೆ. ಆದರೆ, ಶಾಲೆಯಲ್ಲಿ ಮಕ್ಕಳಿಗೆ ಪ್ರಾಜೆಕ್ಟ್ ಮತ್ತು ಅಸೈನ್‌ಮೆಂಟ್ ಕೊಟ್ಟಾಗ ತರಗತಿಯಲ್ಲಿ 30ರಲ್ಲಿ 27 ಮಂದಿ ಇಂಟರ್ನೆಟ್ ನೋಡಿ ಒಂದೇ ಬಗೆಯ ವಾಕ್ಯಗಳನ್ನು ಬರೆಯುತ್ತಾರೆ.
“ತರಗತಿಯಲ್ಲಿ ಮೂವರಾದರೂ ಹೊಸ ವಿಷಯ ಬೇಕು ಎಂದು ನಮ್ಮ ಲೈಬ್ರರಿಗೆ ಬಂದು ಪುಸ್ತಕ ಕೇಳುವಾಗ ನನ್ನ ಕೆಲಸದ ಬಗ್ಗೆ ಸಾರ್ಥಕ್ಯ ಮೂಡುತ್ತದೆ’ ಎನ್ನುತ್ತಾರೆ, ರೇಣುಕಾ. ಒಂದೊಂದು ತರಗತಿಯಲ್ಲಿ ಹೀಗೆ “ಔಟ್ ಆಫ್ ಬಾಕ್ಸ್’ ಯೋಚಿಸಿ ವಿಷಯ ಹುಡುಕಿ ಬರೆಯುವ ಪ್ರತಿಭಾವಂತ ಮಕ್ಕಳಿದ್ದರೆ ಅದೇ ಸಂತಸದ ಸಮಾಚಾರವಲ್ಲವೇ? ಮಾತೆತ್ತಿದರೆ ಮೊಬೈಲ್ ಗೇಮ್, ಟಿ.ವಿ. ಕಾಟೂನ್‌ಗಳೇ ನಮ್ಮ ಪ್ರಪಂಚ ಎನ್ನುವ ಮಕ್ಕಳನ್ನು ಎಳೆತಂದು ಪುಸ್ತಕ ಪ್ರೀತಿ ಬೆಳೆಸುವ ಸಾಹಸಕ್ಕೆ ಕೈ ಹಾಕಿದ ರೇಣುಕಾ ಅವರ ಪ್ರಯತ್ನ ನಿಜಕ್ಕೂ ಮಾದರಿ.
ಓದೋದಷ್ಟೇ ಅಲ್ಲ, ಕಥೆಯೂ ಇರುತ್ತೆ!
– ಪ್ರತಿ ಶನಿವಾರ ಮಧ್ಯಾಹ್ನ 4 ಗಂಟೆಗೆ ಮಕ್ಕಳನ್ನು ಒಟ್ಟುಗೂಡಿಸಿ ಕಥೆ ಕಟ್ಟುವ ಕಾರ್ಯಕ್ರಮ ನಡೆಸುತ್ತಾರೆ.
– ಗಿರಿಜಾ ರಾಮ್, ರಾಜೇಶ್ ಎಂಬಿಬ್ಬರು ಯಾವುದೇ ಫಲಾಪೇಕ್ಷೆಯಿಲ್ಲದೆ ಮಕ್ಕಳೊಂದಿಗೆ ಕಥಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.
– ಕಥಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಕ್ಕಳು ಯಾವುದೇ ಶುಲ್ಕವನ್ನು ಕಟ್ಟಬೇಕಿಲ್ಲ.
– 3ರಿಂದ 10 ವರ್ಷದ ಮಕ್ಕಳಿಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವುದೇ ಒಂದು ಖುಷಿಯ ಸಂಗತಿ.
* ವಿದ್ಯಾ ದತ್ತಾತ್ರಿ ಹೊಸಕೊಪ್ಪ