Advertisement

ಕೃಷಿಯಿಂದ ಕೌಟುಂಬಿಕ ಒಡನಾಟ ಗಟ್ಟಿ: ನರೇಂದ್ರ ರೈ ದೇರ್ಲ

10:29 AM Jul 02, 2018 | Team Udayavani |

ಮಹಾನಗರ: ಕೃಷಿಯ ಮೂಲಕವಾಗಿ ಕೌಟುಂಬಿಕ ಒಡನಾಟ ಗಟ್ಟಿಗೊಳ್ಳಲು ಸಾಧ್ಯ. ಕೃಷಿಯಿಂದಾಗಿ ಜೀವನೋತ್ಸಾಹ ಪಡೆಯಲೂ ಸಾಧ್ಯ ಎಂದು ಅಂಕಣಕಾರ ನರೇಂದ್ರ ರೈ ದೇರ್ಲ ಅಭಿಪ್ರಾಯಪಟ್ಟರು. ಡಿವಿಜಿ ಬಳಗ ಪ್ರತಿಷ್ಠಾನ ಮಂಗಳೂರು ಇದರ ಆಶ್ರಯದಲ್ಲಿ ಕೊಡಿಯಾಲಬೈಲ್‌ನ ಕರ್ಣಾಟಕ ಬ್ಯಾಂಕ್‌ ಸಭಾಂಗಣದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ವಸಂತ ಕಜೆ ಅವರು ಬರೆದ ‘ಐಟಿಯಿಂದ ಮೇಟಿಗೆ’ ಎಂಬ ಪುಸ್ತಕ ಅನಾವರಣಗೊಳಿಸಿ ಅವರು ಮಾತನಾಡಿದರು.

Advertisement

ಕೃಷಿಯಲ್ಲಿ ಉತ್ಸಾಹ ಕಮ್ಮಿಯಾಯಿತು ಎಂದಾದಲ್ಲಿ ಆತ ಕೃಷಿಕನಾಗಲು ಸಾಧ್ಯವಿಲ್ಲ. ನವಧಾನ್ಯಗಳ ಮಧ್ಯೆ ಮನುಷ್ಯ ನಿಂತಾಗ ಎದ್ದು ಕಾಣುತ್ತಾನೆ. ಆದರೆ ಇವುಗಳ ನಡುವೆ ರಬ್ಬರ್‌, ಅಡಿಕೆ ಮೊದಲಾದ ವಾಣಿಜ್ಯ ಬೆಳೆಗಳು ಬಂದಾಗ ವ್ಯಕ್ತಿಯು ಅಡಗಿ ಅಹಂಭಾವ ಹೆಚ್ಚುತ್ತದೆ. ಈ ಅಹಂಭಾವದ ಪರಮಾವಧಿ ಐಟಿ, ಬಿಟಿಯಾಗಿದೆ. ವಸಂತ ಕಜೆಯವರು ಅನ್ನವನ್ನು ಹುಡುಕುವ ದಾರಿಯಲ್ಲಿ ಬಡತನ ಇಷ್ಟ ಪಡುತ್ತಾರೆ. ವಸಂತ ಕಜೆಯವರು ಸ್ವತಃ ಕೃಷಿಕ ಲೇಖಕನಾಗಿ ಅನುಭವಗಳನ್ನು ಕಟ್ಟಿಕೊಟ್ಟಿದ್ದಾರೆ. ಮನುಷ್ಯ ಮತ್ತು ನಿಸರ್ಗದ ಅನುಸಂಧಾನದ ಭಾಗ ಕೃಷಿ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಎಂದರು.

ಸಾಗರದ ಪ್ರಗತಿಪರ ಕೃಷಿಕ ಆನಂದ್‌ ಅವರು ಮಾತನಾಡಿ, ವಿದ್ಯಾರ್ಜನೆ ಮಾಡಿ ನಗರದತ್ತ ಮುಖ ಮಾಡುವ ಯುವ ಜನಾಂಗ ಕೃಷಿ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ನಗರದ ಕಚೇರಿಗಳಲ್ಲಿ ಕೃಷಿಕನನ್ನು ಕಾಣುವ ರೀತಿಯಿಂದ ಕೃಷಿ ಬೇಡ ಎಂಬ ಕೀಳರಿಮೆ ಮೂಡಿದೆ. ಹೀಗಾಗಿ ಕೃಷಿಕನ ಬದುಕಿಗೆ ಗೌರವ ಸಿಗಬೇಕಿದೆ. ಕೃಷಿಕನಿಗೆ ಗೌರವ ಕೊಡುವಂತಾದರೆ ಮಾತ್ರ ದೇಶದಲ್ಲಿ ಕೃಷಿ ಸಂಸ್ಕೃತಿ ಉಳಿಯಲು ಸಾಧ್ಯ ಎಂದವರು ಹೇಳಿದರು. ಮಂಗಳೂರು ಡಿವಿಜಿ ಬಳಗದ ಟ್ರಸ್ಟಿ ವಿರೂಪಾಕ್ಷ ದೇವರಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲೇಖಕ ವಸಂತ
ಕಜೆ ಅನುಭವ ಹಂಚಿಕೊಂಡರು. ಎ.ಪಿ. ಚಂದ್ರಶೇಖರ್‌ ಸ್ವಾಗತಿಸಿ, ಕನಕರಾಜು ಕಾರ್ಯಕ್ರಮ ನಿರೂಪಿಸಿದರು.

ಗಮನಸೆಳೆದ ಜೇಡಗಳ ಛಾಯಾಚಿತ್ರ ಪ್ರದರ್ಶನ
ಕಾರ್ಯಕ್ರಮದ ಪೂರ್ವಭಾವಿಯಾಗಿ ಸಾಲಿಗ ತಂಡದಿಂದ ‘ಊರ್ಣನಾಭನಿಗೆ ನಮಸ್ಕಾರ’ ಎಂಬ ಹೆಸರಿನಲ್ಲಿ ಜೇಡಗಳ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಯಿತು. 200 ಕ್ಕೂ ಅಧಿಕ ಛಾಯಾಚಿತ್ರಗಳ ಪ್ರದರ್ಶನ ಮತ್ತು ಜೇಡಗಳ ಜೀವನ ಕ್ರಮದ ಸ್ಲೈಡ್  ಶೋ ಏರ್ಪಡಿಸಲಾಯಿತು. ನೂರಾರು ಜೇಡಗಳ ಛಾಯಾಚಿತ್ರಗಳು ಗಮನಸೆಳೆಯಿತು. ಬೆಳಗ್ಗೆಯಿಂದ ಸಂಜೆಯವರೆಗೆ ನೂರಾರು ಮಂದಿ ಭಾಗವಹಿಸಿ ಚಿತ್ರ ಪ್ರದರ್ಶನ ವೀಕ್ಷಿಸಿದರು. ಪ್ರದರ್ಶನವನ್ನು ಡಾ|ಮನೋಹರ್‌ ಉಪಾಧ್ಯ ಉದ್ಘಾಟಿಸಿ ಜೇಡಗಳ ಕಾಯಕದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿರುವುದು ಅತ್ಯಂತ ವಿಶೇಷ ಸಂಗತಿ. ಕೇವಲ ತಾವು ಕುತೂಹಲ ಬೆಳೆಸಿಕೊಂಡಿದ್ದಲ್ಲದೆ, ಬೇರೆಯವರಲ್ಲಿ ಕುತೂಹಲ ಬೆಳೆಸಿರುವುದು ಉಲ್ಲೇಖನೀಯ ಎಂದರು. ಪ್ರದರ್ಶನ ತಂಡದ ಸದಸ್ಯ ಡಾ|ಅಭಿಜಿತ್‌ ಹಾಗೂ ತಂಡದ ಇತರ ಸದಸ್ಯರು ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next