Advertisement
ಐತಾಳರು ಹುಟ್ಟಿ ಬೆಳೆದು ಆರಂಭಿಕ ಶಿಕ್ಷಣವನ್ನು ಪಡೆದ ಕೋಟ ಎಂಬ ಪುಟ್ಟ ಊರಿನ ಅಂದಿನ ಪರಿಸರದ ವರ್ಣನೆ, ದೇವಸ್ಥಾನದ ಉತ್ಸವ, ಆಗರ್ಭ ಶ್ರೀಮಂತರೂ ಜಮೀನುದಾರರೂ ಆದ ಅವರ ಹಿರಿಯರು ಬಾಳಿ ಬದುಕಿದ ಅರಮನೆಯಂಥ ಪುರಾತನ ಮನೆಯ ವರ್ಣನೆ, ಕೂಡು ಕುಟುಂಬದಲ್ಲಿ ಐವತ್ತಕ್ಕೂ ಹೆಚ್ಚು ಮಂದಿಯ ಸಹಬಾಳ್ವೆಯ ಚಿತ್ರಣ, ಪೂಜೆ-ಪುನಸ್ಕಾರ, ಹಬ್ಬ-ಹರಿದಿನ, ಆಹಾರ ವೈವಿಧ್ಯಗಳ ವರ್ಣನೆ , ಅಣ್ಣ ತಮ್ಮಂದಿರು-ಅಕ್ಕ-ತಂಗಿಯರು, ಅಜ್ಜ, ಚಿಕ್ಕಪ್ಪ ದೊಡ್ಡಪ್ಪಂದಿರ ಜತೆಗಿನ ಸಂಬಂಧದ ವೈಖರಿ-ಹೀಗೆ ಎಲ್ಲರನ್ನೂ ಅಂದು ತಾವು ಕಂಡಂತೆ ಚಿತ್ರಿಸುವ ಕೃತಿಯ ಮೊದಲರ್ಧ ಭಾಗವು ಅಪೂರ್ವ ಚಿತ್ರಕ ಶಕ್ತಿಯಿಂದ ತುಂಬಿದೆ. ಮನೆಯ ಕಲಾತ್ಮಕ ರಚನೆ ಮತ್ತು ಕುಸುರಿ ಕೆಲಸಗಳ ಭವ್ಯತೆಯ ಇಂಚಿಂಚು ವರ್ಣನೆಯಂತೂ ಕಣ್ಣಿಗೆ ಕಟ್ಟುವಂತಿದೆ.
Related Articles
Advertisement
ಇದನ್ನೂ ಓದಿ : ಕೆಸರಿನಲ್ಲಿ ಸಿಲುಕಿ ಮರಿಯಾನೆ ಒದ್ದಾಟ: ಜೆಸಿಬಿ ಸಹಾಯದಿಂದ ರಕ್ಷಣೆ
ಕೃತಿಯ ಉತ್ತರಾರ್ಧವನ್ನು ಪೂರ್ತಿಯಾಗಿ ಲೇಖಕರು ತಮ್ಮ ಒಡಹುಟ್ಟಿದವರ ಮತ್ತು ಬಂಧು ಬಳಗದವರ ಕುರಿತು ಮತ್ತು ಅವರೊಂದಿಗೆ ತಮ್ಮ ಸಂಬಂಧ ಹೇಗಿತ್ತು ಎಂಬುದನ್ನು ತೋರಿಸಲು ಬಳಸಿದ್ದಾರೆ. ಕಾದಂಬರಿಯೊಂದರ ಪಾತ್ರ ಚಿತ್ರಣದಂತೆ ಇಲ್ಲಿ ಎಲ್ಲರ ಕುರಿತಾದ ಸಮೃದ್ಧ ವಿವರಗಳಿವೆ. ಅದರಲ್ಲೂ ತನ್ನ ತಮ್ಮ ವಾಸುದೇವ ಸಾಕಷ್ಟು ಕಲಿತು ಪದವಿ ಗಳಿಸಿ ಒಳ್ಳೆಯ ಉದ್ಯೋಗ ಸಿಕ್ಕಿದರೂ ಅವೆಲ್ಲವನ್ನೂ ಬಿಟ್ಟು ಹಿರಿಯರು ಕಾಪಾಡಿಕೊಂಡು ಬಂದ ಆಸ್ತಿ-ಮನೆ ವ್ಯವಹಾರಗಳನ್ನು ನೋಡಿಕೊಳ್ಳಲೆಂದು ಊರಿಗೆ ಬಂದು ನೆಲೆಸಿ ಬೇಸಾಯದ ಕೆಲಸವನ್ನು ಕೈಗೊಂಡ ಬಗ್ಗೆ ಲೇಖಕರು ಅವನನ್ನು ಕೃತಜ್ಞತೆಯಿಂದ ನೆನೆಸಿ ಕೊಳ್ಳುತ್ತಾರೆ. ಕಿರಿಯ ತಂಗಿ ಯಶೋದಾ ಬೆಂಗಳೂರಿನಲ್ಲಿ ನೆಲೆಸಿ ತಾವು ಪ್ರತಿ ಬಾರಿ ಅಮೆರಿಕಾದಿಂದ ಬಂದಾಗಲೂ ತನ್ನ ಮನೆಯಲ್ಲೇ ವಾರಗಟ್ಟಲೆ-ತಿಂಗಳುಗಟ್ಟಲೆ ನಿಸ್ಸಂಕೋಚವಾಗಿ ಉಳಿದುಕೊಳ್ಳಲು ವ್ಯವಸ್ಥೆ ಮಾಡುತ್ತಿರುವುದರ ಬಗ್ಗೆ ಲೇಖಕರಿಗೆ ಅಪಾರ ಸಂತೋಷವಿದೆ. ಬದುಕಿನಲ್ಲಿ ಎಷ್ಟೇ ಏಳು ಬೀಳುಗಳಿದ್ದರೂ ಇಂದಿನ ಇಳಿವಯಸ್ಸಿನಲ್ಲಿ ಆ ಘಟನೆಗಳನ್ನು ಮೆಲುಕು ಹಾಕುವುದು ಅವರಿಗೆ ಹಿತವಾಗಿ ಕಾಣಿಸುತ್ತದೆ. ಅಂತೆಯೇ ಕೊನೆಯಲ್ಲಿ ಅವರು ‘ ಬದುಕಿನಲ್ಲಿ ಕಷ್ಟಗಳನ್ನು ಎದುರಿಸಲೇ ಬೇಕಾಗುತ್ತದೆ. ಆದರೆ ಎಂತಹ ಕಷ್ಟ ಬಂದರೂ ಅದನ್ನು ಸಹಿಸಿ, ಸರಿಪಡಿಸಿ ಮುಂದಕ್ಕೆ ಸಾಗುತ್ತಿದ್ದರೆ ನಾವು ಬಹಳಷ್ಟು ತೃಪ್ತಿ ಪಡೆಯುತ್ತೇವೆ. ಅಂದರೆ, ಮನಸ್ಸನ್ನು ನಿಯಂತ್ರಿಸಿಕೊಂಡು ನಮ್ಮ ನಮ್ಮ ಬದುಕನ್ನು ಸಮಯೋಚಿತವಾಗಿ ರೂಪಿಸಿಕೊಳ್ಳುವುದೇ ತೃಪ್ತಿಯ ಬಹು ಮುಖ್ಯ ಸಾಧನ’ ಎಂಬ ತಾತ್ವಿಕ ನಿರ್ಣಯಕ್ಕೆ ಬರುತ್ತಾರೆ.
ತಮಗೆ ಅನುರೂಪಳಾಗಿ ತಮ್ಮ ಬಾಳನ್ನು ರೂಪಿಸಿ ಬದುಕನ್ನು ಅರ್ಥಪೂರ್ಣವಾಗಿಸಿದ ಮಡದಿ ಲಕ್ಷ್ಮಿ(ಪುಟ್ಟಮ್ಮ), ಕೌಟುಂಬಿಕ ಬದುಕಿನ ಭದ್ರತೆಯನ್ನಿತ್ತ ಮಕ್ಕಳಾದ ಅನುರಾಧಾ ಮತ್ತು ಅರವಿಂದರ ಬಗ್ಗೆ ಹೇಳಲು ಕೃತಿಯ ಒಂದು ಸಣ್ಣ ಅಧ್ಯಾಯವನ್ನಷ್ಟೇ ಕೊಟ್ಟದ್ದು ಆಶ್ಚರ್ಯ. ಆತ್ಮಕಥೆಯನ್ನು ತೀರಾ ಸ್ವಕೇಂದ್ರಿತವಾಗಿಸದೆ ಬದುಕಿನಲ್ಲಿ ಬೆರೆತು ಹೋದ ಇತರರಿಗೆ ಪ್ರಾಮುಖ್ಯವನ್ನು ಕೊಟ್ಟು ಆತ್ಮಕತೆಗೊಂದು ಹೊಸ ಭಾಷ್ಯವನ್ನು ಬರೆಯುವುದು ಲೇಖಕರ ಉದ್ದೇಶವಾಗಿರಬಹುದು. ಕೃತಿಯುದ್ದಕ್ಕೂ ಬಳಸಿದ ಭಾಷಾ ಶೈಲಿ, ನಿರೂಪಣೆ, ಮತ್ತು ಎಲ್ಲೂ ವಿಷಯಾಂತರಕ್ಕೆ ಹೋಗದ ಬಿಗಿಯಾದ ರಚನಾ ಬಂಧ ಮತ್ತು ಆತ್ಮಕಥೆಯಲ್ಲಿರಬೇಕಾದ ಪ್ರಾಮಾಣಿಕತೆಗಳು ಕೃತಿಯ ಗಟ್ಟಿತನಕ್ಕೆ ಕಾರಣವಾಗಿವೆ.