Advertisement

ಪಠ್ಯಕ್ರಮ ಮುಗಿಸುವುದಷ್ಟೇ ಪ್ರಾಧ್ಯಾಪಕರ ಕೆಲಸ ಅಲ್ಲ

05:28 PM May 16, 2022 | Team Udayavani |

ನಂಜನಗೂಡು: ತಮ್ಮ ಪಾಲಿನ ಪಠ್ಯಕ್ರಮ ಮುಗಿಸುವುದೇ ಪ್ರಾಧ್ಯಾಪಕ ವೃತ್ತಿ ಎಂದು ತಿಳಿದವರೇ ಹೆಚ್ಚು. ಆದರೆ, ಪ್ರೊ.ಡಿ.ಎಸ್‌. ಸದಾಶಿವಮೂರ್ತಿ ಅವರು, ಪಾಠದ ಜೊತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯೂ ನಮ್ಮ ಕರ್ತವ್ಯ ಎಂದು ತಿಳಿದವರು ಎಂದು ರಾಜ್ಯ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ನಂದೀಶ ಹಂಚೆ ಅಭಿಪ್ರಾಯಪಟ್ಟರು.

Advertisement

ನಗರದ ಜೆಎಸ್‌ಎಸ್‌ ಮಂಗಳ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರೊ.ಡಿ.ಎಸ್‌. ಸದಾಶಿವಮೂರ್ತಿಗಳ ಅಭಿನಂದನಾ ಗ್ರಂಥದ ಲೋಕಾರ್ಪಣೆ ಸಮಾರಂಭದಲ್ಲಿ ಭಾಗಿಯಾಗಿ, ಸದಾಶಿವ ಮೂರ್ತಿಗಳ ಕೃತಿಗಳಾದ ದಾಸೋಹ ಪಥ, ದೇವನೂರ ಒಡಲೊಳಗೆ ಕೃತಿಗಳ ಬಿಡುಗಡೆ ಸಮಾರಂಭಕ್ಕೆ ಸಾಕ್ಷಿಯಾಗಿ ಅವರು ಮಾತನಾಡಿದರು.

ಪಠ್ಯಕ್ರಮಕ್ಕೆ ಸೀಮಿತವಾದ ಅಧ್ಯಾಪಕರಿಂದಾಗಿಯೇ ಗ್ರಾಮೀಣ ಭಾರತ ವೃದ್ಧಾಶ್ರಮ ಆಗಲಾರಂಭಿಸಿದೆ ಎಂದ ಹಂಚೆ, ಹೂಟ್ಟೂರು ಬಗ್ಗೆ ಅಭಿಮಾನ ಹೊಂದಿದ ಸದಾಶಿವಮೂರ್ತಿಗಳಂತವರ ಸಂಖ್ಯೆ ಹೆಚ್ಚಾದಲ್ಲಿ ಗ್ರಾಮೀಣ ಭಾರತದಲ್ಲೂ ಜೀವಂತಿಕೆಯನ್ನು ಕಾಣಲು ಸಾಧ್ಯ ಎಂದು ಹೇಳಿದರು.

ಪ್ರೊ.ಸದಾಶಿವಮೂರ್ತಿಗಳ ಎರಡೂ ಕೃತಿಗಳನ್ನು ಪರಿಚಯಿಸಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರೊ.ಮಲೆಯೂರು ಗುರುಸ್ವಾಮಿ, ಸದಾಶಿವಮೂರ್ತಿಗಳು ಹುಟ್ಟು ದೇವನೂರು ಗುರುಮಲ್ಲೇಶ್ವರ ಮಠದ ಸನ್ನಿಧಿಯಲ್ಲಿ. ವಿದ್ಯಾಭ್ಯಾಸ ಮಲ್ಲನಮೂಲೆಯ ಕಂಬೇಶ್ವರರ ಮಠದಲ್ಲಿ, ವೃತ್ತಿ ಜೀವನ ಸುತ್ತೂರು ಮಠದ ಸಂಸ್ಥೆಯಲ್ಲಿ, ಈ ಮೂರು ಮಠಗಳ ಸದಾಶಯಗಳ ಅನುಭವದಿಂದ ಅವರು ಈ ಕೃತಿಯ ಜನಕರಾಗಿದ್ದಾರೆ ಎಂದು ವಿವರಿಸಿದರು.

ಸಾರ್ವಜನಿಕ ಜೀವನದಲ್ಲಿ ಪ್ರೀತಿ, ವಿಶ್ವಾಸಗಳಿಸುವುದೂ ಅತ್ಯಂತ ಕಷ್ಟದ ವಿಚಾರ. ಆದರೆ, ನಮ್ಮ ಪ್ರೊ.ಸದಾಶಿವಮೂರ್ತಿಗಳು ಎಲ್ಲರ ಪ್ರೀತಿ ವಿಶ್ವಾಸಕ್ಕೆ ಭಾಜನರಾಗಿದ್ದಾರೆ ಎಂದು ಮಲೆಯೂರು ದೇವನೂರು ಮಠದ ದಾಸೋಹದ ಪರಂಪರೆಯನ್ನು ಜನಸಾಮಾನ್ಯರಿಗೆ ತಿಳಿಯುವಂತೆ ಈ ಪುಸ್ತಕದಲ್ಲಿ ದಾಖಲಿಸಲಾಗಿದೆ ಎಂದು ಹೇಳಿದರು.

Advertisement

ದೇವನೂರಿನ ಮಣ್ಣಲ್ಲೇ ವಿಶಿಷ್ಟ ಗುಣವಿದೆ. ಹಾಗಾಗಿ ಅಲ್ಲಿನವರೆಲ್ಲ ಸಾಧನೆ ಗೈಯುತ್ತಲೇ ಇದ್ದಾರೆ ಎಂದು ಅವರು ಅಭಿಪ್ರಾಯ ಪಟ್ಟರು. ಶಿಷ್ಯ ಕೋಟಿ ಹಾಗೂ ಸಹೋದ್ಯೋಗಿಗಳಿಂದ

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸದಾಶಿವಮೂರ್ತಿಗಳು, ತಮ್ಮ ವ್ಯಕ್ತಿತ್ವ ವಿಕಾಸಕ್ಕೆ ದೇವನೂರು, ಮಲ್ಲನಮೂಲೆ ಹಾಗೂ ಸುತ್ತೂರು ಮಠಗಳೇ ಕಾರಣ ಎಂದ ಅವರು, ನಿಮ್ಮ ಅಭಿನಂದನೆ ತನಗೆ ಮುಜುಗರ ತಂದಿದೆ ಎಂದ ಅವರು, ಒಳ್ಳೆಯತನಕ್ಕೆ ಎಂದಿಗೂ ಬೆಲೆ ಗೌರವ ಇದೆ ಎನ್ನುವುದಕ್ಕೆ ಇಂದಿನ ಸಮಾರಂಭವೇ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಸುತ್ತೂರಿನ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು, ದೇವನೂರಿನ ಮಹಂತ ಸ್ವಾಮಿಗಳು ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಪ್ರೊ. ಸದಾಶಿವಮೂರ್ತಿ, ಅವರ ಪತ್ನಿ ದಾಕ್ಷಾಯಿಣಿ ಮತ್ತು ಅವರ ತಾಯಿ ಮರಮ್ಮ ಅವರನ್ನು ಗೌರವಿಸಿ ಅಭಿನಂದನೆ ಸಲ್ಲಿಸಲಾಯಿತು. ಡಾ.ಡಿ.ಎಸ್‌.ಗುರು ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದ ಸಮಾರಂಭದ ವೇದಿಕೆಯಲ್ಲಿ ಎನ್‌.ವಿ.ಶಿವಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next