ಮೈಸೂರು: ವಿಜ್ಞಾನ ಲೇಖಕ ಪ್ರೊ.ಎಸ್.ಎನ್. ಹೆಗಡೆ ಅವರ ವೈದ್ಯಕೀಯ ಕ್ಷೇತ್ರದ ನೊಬೆಲ್ ಪುರಸ್ಕೃತರು ಸಂಪುಟಗಳ ಮುಂದಿನ ಮುದ್ರಣವನ್ನು ವಿವಿಯ ಪ್ರಸಾರಂಗದಿಂದ ಪ್ರಕಟಿಸಲಾಗುವುದು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ ಕುಮಾರ್ ಹೇಳಿದರು.
ಮೈಸೂರು ವಿವಿ ವಿಜ್ಞಾನ ಭವನದಲ್ಲಿ ಸೋಮವಾರ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ ಡಾ. ಎಂ.ಆರ್. ರಾಜಶೇಖರ್ ಶೆಟ್ಟಿ ಅವರ 101ನೇ ಜನ್ಮ ದಿನಾಚರಣೆ ವರ್ಚುವಲ್ ಕಾರ್ಯಕ್ರಮ ಹಾಗೂ ಲೇಖಕ ಡಾ.ಎಸ್.ಎನ್.ಹೆಗಡೆ ಅವರ “ವೈದ್ಯಕೀಯ ಕ್ಷೇತ್ರದ ನೊಬೆಲ್ ಪುರಸ್ಕೃತರು’ ಸಂಪುಟ 2 ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲೇಖಕರು ಈ ಕೃತಿಯನ್ನು ಡಾ. ಎಂ.ಆರ್. ರಾಜಶೇಖರ್ ಶೆಟ್ಟಿ ಅವರಿಗೆ ಅರ್ಪಣೆ ಮಾಡಿರುವುದು ವಿಶೇಷವಾಗಿದೆ. ಹೆಗಡೆ ಅವರು ಈಗಾಗಲೇ ಎರಡು ಸಂಪುಟಗಳನ್ನು ಹೊರ ತಂದಿದ್ದು, ಒಟ್ಟು 8 ಸಂಪುಟಗಳ ಪ್ರಕಟಿಸುವ ಕನಸು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಯಪ್ರಸಾರಂಗದ ವತಿಯಿಂದ ಉಳಿದ ಸಂಪುಟಗಳ ಮುದ್ರಣಕ್ಕೆ ಒತ್ತು ನೀಡಲಾಗುವುದು. ಈ ಕುರಿತು ಚರ್ಚಿಸಲಾಗುವುದು ಎಂದರು.
ಕೃತಿ ಬಿಡುಗಡೆ ಮಾಡಿ ಮಾತನಾಡಿದ ಮೈಸೂರು ವಿವಿ ಸಂದರ್ಶಕ ಪ್ರಾಧ್ಯಾಪಕ ಪ್ರೊ. ಎಚ್.ಎ.ರಂಗನಾಥ್, ಮೈಸೂರು ವಿವಿಯಲ್ಲಿ ಪ್ರಾಣಿಶಾಸ್ತ್ರ ಅಧ್ಯಯನ ಅರಂಭಕ್ಕೆ ಪ್ರಮುಖರಾದ, ವಿಜ್ಞಾನ ದಾಹ ಮೂಡಿಸಿ, ವಿಶಿಷ್ಟ ಪರಂಪರೆ ಬಿಟ್ಟು ಹೋದ ಡಾ.ಎಂ.ಆರ್. ರಾಜಶೇಖರ್ ಶೆಟ್ಟಿ ಅವರನ್ನು ಸ್ಮರಿಸುವ ನಿಟ್ಟಿನಲ್ಲಿ ವೈದ್ಯಕೀಯ ಕ್ಷೇತ್ರದ ನೊಬೆಲ್ ಪುರಸ್ಕೃತರು ಸಂಪುಟ 2 ಕೃತಿಯು ಉತ್ತಮವಾಗಿದೆ ಎಂದರು.
ಡಾ. ಎಂ.ಆರ್.ರಾಜಶೇಖರ್ ಶೆಟ್ಟಿ ಅವರ ಬಗ್ಗೆ ಎಲ್ಲಿಯೂ ಲಿಖೀತ ದಾಖಲೆಯಿಲ್ಲ. ಈ ಪುಸ್ತಕದಲ್ಲಿ ಅವರ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಪ್ರೊ.ಎಸ್.ಎನ್.ಹೆಗಡೆ ಅವರು ವಿಜ್ಞಾನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಕನ್ನಡದಲ್ಲಿ ಈ ರೀತಿಯ ಕೃತಿಗಳ ಅವಶ್ಯಕತೆ ಹೆಚ್ಚಿದೆ. ಬರೆವಣಿಗೆಯ ಮೂಲಕ ಅಪಾರ ಜನರನ್ನು ತಲುಪಿದ್ದಾರೆ ಎಂದು ಹೇಳಿದರು.
ಮೈಸೂರು ವಿವಿ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್.ಆರ್. ರಮೇಶ್, ಪ್ರಾಧ್ಯಾಪಕಿ ಡಾ.ಲಲಿತಾ, ಮೈಸೂರು ವಿವಿ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಸುತ್ತೂರು ಎಸ್.ಮಾಲಿನಿ, ಡಾ. ಬಸವರಾಜಪ್ಪ, ಲೇಖಕ ಡಾ. ಎಸ್.ಎನ್. ಹೆಗಡೆ ಇದ್ದರು.