Advertisement

ತೋಂಟದ ಶ್ರೀ ಪುಸ್ತಕದ ಸ್ವಾಮೀಜಿ

04:08 PM Apr 18, 2022 | Team Udayavani |

ಗದಗ: ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಸರ್ಕಾರಗಳಿಗೆ ಸಮನಾಗಿ ಪುಸ್ತಕ ಪ್ರಕಟಣೆ ಮಾಡಿರುವ ತೋಂಟದಾರ್ಯ ಮಠ, ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ|ಎಂ.ಎನ್‌. ನಂದೀಶ ಹಂಚೆ ಹೇಳಿದರು.

Advertisement

ನಗರದ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಪುಸ್ತಕೋತ್ಸವದಲ್ಲಿ ಡಾ|ಎಂ.ಎಂ.ಕಲಬುರ್ಗಿ ಅಧ್ಯಯನ ಸಂಸ್ಥೆಯಿಂದ ಪ್ರಕಟಗೊಂಡ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಲಿಂಗಾಯತ ಮಠ-ಮಾನ್ಯಗಳು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿವೆ. ಸಾಹಿತ್ಯ ಕೃಷಿಯಲ್ಲೂ ಅವುಗಳ ಸಾಧನೆ ದೊಡ್ಡದಿದೆ. ಜಾತ್ರೆಯಲ್ಲೂ ಪುಸ್ತಕ ಬಿಡುಗಡೆಗೆ ವಿಶೇಷ ಆದ್ಯತೆ ನೀಡಿರುವುದು ಅಭಿನಂದನೀಯ. ಲಿಂ|ತೋಂಟದ ಸಿದ್ಧಲಿಂಗ ಶ್ರೀಗಳು ಪುಸ್ತಕದ ಸ್ವಾಮೀಜಿಗಳೆಂದೇ ಹೆಸರಾಗಿದ್ದರು ಎಂದರು.

ಲೇಖಕರು ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು ಕೃತಿಗಳನ್ನು ರಚಿಸಬೇಕಿದೆ. ಅಕ್ಷರ ಲೋಕಕ್ಕೆ ಚ್ಯುತಿ ಬರುವಂಥ ಕೃತಿ ರಚನೆಗೆ ಮುಂದಾಗಬಾರದೆಂದು ಕಿವಿಮಾತು ಹೇಳಿದರು.

ಭಾಲ್ಕಿಯ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಸಮ್ಮುಖ ವಹಿಸಿ ಮಾತನಾಡಿ, ಭಾಲ್ಕಿಯ ಹಿರೇಮಠಕ್ಕೂ ಗದುಗಿನ ತೋಂಟದಾರ್ಯ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಲಿಂಗೈಕ್ಯ ಸಿದ್ಧಲಿಂಗ ಮಹಾಸ್ವಾಮಿಗಳು ನಮಗೆ ಮಾರ್ಗದರ್ಶಿಯಾಗಿದ್ದರು. ಬಸವಣ್ಣನವರ ವಿಚಾರಧಾರಗಳನ್ನು ಗಟ್ಟಿಯಾಗಿ ನಂಬಿದ್ದ ಲಿಂಗೈಕ್ಯ ಗುರುಗಳು ಅಭಿನವ ಬಸವಣ್ಣ, ದ್ವೀತಿಯ ಅಲ್ಲಮ ಎಂದೇ ಖ್ಯಾತಿ ಪಡೆದಿದ್ದರು. ಪುಸ್ತಕಗಳನ್ನು ಬಿಡುಗಡೆಗೊಳಿಸಿ ಜ್ಞಾನಾರ್ಜನೆಗೈಯುತ್ತಿರುವ ಇಂಥ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಮ್ಮ ಸುಕೃತವಾಗಿದೆ ಎಂದರು.

Advertisement

ಸಂಡೂರ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು, ಆಲಮೇಲದ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು, ಅತ್ತಿವೇರಿಯ ಬಸವೇಶ್ವರಿ ಮಾತಾಜಿ ಸಮ್ಮುಖ ವಹಿಸಿದ್ದರು.

ಸಾನ್ನಿಧ್ಯ ವಹಿಸಿದ್ದ ಡಾ|ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹಾಗೂ ಶಿವಾನಂದ ಮಠದ ಸದಾಶಿವಾನಂದ ಭಾರತೀ ಸ್ವಾಮಿಗಳು ಆಶೀರ್ವಚನ ನೀಡಿದರು. ಇದೇ ವೇಳೆ ಡಾ|ಎಂ.ಎಂ.ಕಲಬುರ್ಗಿ ಅಧ್ಯಯನ ಸಂಸ್ಥೆಯಿಂದ ಪ್ರಕಟಗೊಂಡ ಗ್ರಂಥಗಳನ್ನು ಬಿಡುಗಡೆಗೊಳಿಸಲಾಯಿತು. ಡಾ| ರಮೇಶಕಲ್ಲನಗೌಡರ ಗ್ರಂಥಗಳನ್ನು ಪರಿಚಯಿಸಿದರು.

ರೇವಣಸಿದ್ಧಯ್ಯ ಮರಿದೇವರ ಮಠ ವಚನ ಸಂಗೀತ ನೀಡಿದರು. ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಅಮರೇಶ ಅಂಗಡಿ, ಉಪಾಧ್ಯಕ್ಷ ದಾನಯ್ಯ ಗಣಾಚಾರಿ, ಮೈಲಾರಪ್ಪ ಅರಣಿ, ಬಸವರಾಜ ಹಿರೇಹಡಗಲಿ, ಶಿವಲೀಲಾ ಅಕ್ಕಿ, ಕಾರ್ಯದರ್ಶಿ ಕೊಟ್ರೇಶ ಮೆಣಸಿನಕಾಯಿ, ಮಲ್ಲಿಕಾರ್ಜುನ ಚಂದಪ್ಪನವರ, ಚಂದ್ರಕಾಂತ ಚವ್ಹಾಣ, ಅಶೋಕ ಕುಡತಿನಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next