Advertisement

ಗಡ್ಡಿಹಳ್ಳ ಸೇತುವೆಯಲ್ಲಿ ಬೋಂಗಾ; ವಾಹನ ಸಂಚಾರ ಬಂದ್‌

02:14 PM Dec 16, 2018 | |

ಲಿಂಗಸುಗೂರು: ತಾಲೂಕಿನ ಕಸಬಾಲಿಂಗಸುಗೂರು ಬಳಿಯ ಜೇವರ್ಗಿ-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ 150ಎ ರಸ್ತೆಯ ಗಡ್ಡಿಹಳ್ಳದ ಸೇತುವೆಗೆ ಬೋಂಗಾ ಬಿದ್ದಿದ್ದು ಅದೃಷ್ಟವಶಾತ್‌ ಅನಾಹುತ ತಪ್ಪಿದೆ. ಮುಂಜಾಗ್ತಾ ಕ್ರಮವಾಗಿ ಸೇತುವೆ ಮೇಲೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.

Advertisement

ಸುಮಾರು 50 ವರ್ಷಗಳ ಹಿಂದೆ ಗಡ್ಡಿಹಳ್ಳ ಸೇತುವೆ ನಿರ್ಮಿಸಲಾಗಿದೆ. ಈ ಸೇತುವೆ ಒಂದೇ ವಾಹನ ಸಂಚರಿಸುವಷ್ಟು ಕಿರಿದಾಗಿದೆ. ರಾಷ್ಟ್ರೀಯ ಹೆದ್ದಾರಿ 150ಎ ಆಗಿದ್ದರಿಂದ ಸೇತುವೆ ಮೇಲೆ ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇದರಿಂದ ಗಡ್ಡಿಹಳ್ಳ ಸೇತುವೆಯಲ್ಲಿ ಈ ಹಿಂದೆಯೇ ಸಣ್ಣ ಪ್ರಮಾಣದಲ್ಲಿ ಬೋಂಗಾ ಬಿದ್ದಿತ್ತು. ಆದರೆ ದುರಸ್ತಿಗೆ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ನಿರ್ಲಕ್ಷ್ಯ ವಹಿಸಿದ್ದರಿಂದ ಕ್ರಮೇಣವಾಗಿ ಬೋಂಗಾ ದೊಡ್ಡದಾಗಿದೆ. ಇದಲ್ಲದೇ ಸೇತುವೆ ಕೆಳಗಡೆ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದೆ. ಸೇತುವೆ ಮೇಲ್ಭಾಗದಲ್ಲೂ ಇನ್ನೂ ಎರಡು ಸಣ್ಣ ಆಕಾರದ ಬೋಂಗಾಗಳಿವೆ. ತಡೆಗೋಡೆಯಲ್ಲಿ ಸಹ ಬಿರುಕು ಕಾಣಿಸಿಕೊಂಡಿದೆ. 

ಸಂಚಾರ ಸ್ಥಗಿತ: ಕಲುಬುರಗಿ, ಜೇವರ್ಗಿ, ಶಹಾಪುರ, ಸುರಪುರ ಲಿಂಗಸುಗೂರು ಮಾರ್ಗವಾಗಿ ಬೆಂಗಳೂರಿಗೆ ಸೇರಿ ಇನ್ನಿತರ ನಗರಗಳಿಗೆ ನಿತ್ಯವೂ ಸಾವಿರಾರು ವಾಹನ ಈ ಸೇತುವೆ ಮಾರ್ಗವಾಗಿ ಸಂಚರಿಸುತ್ತವೆ. ಸೇತುವೆ ಬೋಂಗಾ ಬಿದ್ದಿದ್ದರಿಂಧ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸೇತುವೆ ಮೇಲೆ ವಾಹನ ಸಂಚಾರ ನಿಷೇಧಿಸಿದ್ದು, ಪರ್ಯಾಯವಾಗಿ ಮುದಗಲ್‌ ಮಾರ್ಗವಾಗಿ ವಾಹನಗಳ ಸಂಚಾರಕ್ಕೆ ಕ್ರಮ ಕೈಗೊಂಡಿದ್ದಾರೆ.

ನಿರ್ಲಕ್ಷ್ಯ: ರಾಷ್ಟ್ರೀಯ ಹೆದ್ದಾರಿ 150ಎ ಹಾದು ಹೋಗಿರುವ ಈ ಸೇತುವೆ ಅಲ್ಲದೇ ಈ ಮಾರ್ಗವಾಗಿ ಅನೇಕ ಸೇತುವೆಗಳು ದುಸ್ಥಿತಿಯಲ್ಲಿದ್ದರೂ ದುರಸ್ತಿ ಮಾಡಬೇಕಾದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮೈಮರೆತು ಕುಳಿದಿದೆ. ಇದರಿಂದ ವಾಹನ ಸವಾರರು ಹಾಗೂ ಚಾಲಕರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾಗಿದೆ. ಸೇತುವೆಗಳ ಬಗ್ಗೆ ಪರಿಶೀಲಿಸಲು ಪ್ರಾಧಿಕಾರದ ಯಾವೊಬ್ಬ ಅಧಿಕಾರಿ ಭೇಟಿ ನೀಡಿಲ್ಲ ಹಾಗೂ ಸಂಪರ್ಕ ಸಿಗುತ್ತಿಲ್ಲ. ಇದರ ಕಚೇರಿ ಬಾಗಲಕೋಟೆ ಜಿಲ್ಲೆಯ ಹುನುಗುಂದದಲ್ಲಿದೆ. ಹೀಗಾಗಿ ಇಲ್ಲಿನ ಪರಿಸ್ಥಿತಿ ಅವರ ಅರಿವಿಗೆ ಬಾರದಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next