Advertisement

ಮೂಳೆಗಳ ಆರೋಗ್ಯದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್‌ “ಡಿ’ಗಳ ಪಾತ್ರ

03:45 AM Feb 05, 2017 | |

ವಿಟಾಮಿನ್‌ “ಡಿ’ಯನ್ನು “”ಇಂಟನ್ಯಾìಷನಲ್‌ ಯುನಿಟ್ಸ್‌ ” ಅಥವಾ IUs ಎಂದು ಕರೆಯಲಾಗುವ ಪ್ರಮಾಣದಲ್ಲಿ ಅಳೆಯುತ್ತಾರೆ. ವೈದ್ಯಕೀಯ ಸಂಸ್ಥೆಗಳ-ಆಹಾರ ಮತ್ತು ಪೋಷಕಾಂಶ ಸಮಿತಿ, ಆರೋಗ್ಯ ಮತ್ತು ಆಹಾರ ಪೂರಣಗಳ ರಾಷ್ಟ್ರೀಯ ಸಂಸ್ಥೆಗಳು ಮಕ್ಕಳಿಗೆ ಶಿಫಾರಸು ಮಾಡುವ ದಿನನಿತ್ಯದ ವಿಟಾಮಿನ್‌ ಡಿ ಪ್ರಮಾಣಕಗಳು ಅಂದರೆ:
0-12 ತಿಂಗಳಿನ ಮಕ್ಕಳಿಗೆ ದಿನಕ್ಕೆ      400 IU
1-18 ವರ್ಷಗಳ ಮಕ್ಕಳಿಗೆ ದಿನಕ್ಕೆ   600 IU
ವಿಟಾಮಿನ್‌ ಡಿ ಯ ಕೊರತೆಯಿಂದ ಬಳಲುವ ಮಕ್ಕಳಲ್ಲಿ ರಿಕೆಟ್ಸ್‌ ಎಂದು ಕರೆಯಲಾಗುವ ಒಂದು ರೋಗ ಪರಿಸ್ಥಿತಿ ಬೆಳೆಯುತ್ತದೆ. ಇದರಲ್ಲಿ ಮೂಳೆಗಳ ದೌರ್ಬಲ್ಯ, ಕಾಲಿನ ಮೂಳೆಗಳು ಬಾಗುವುದು ಮತ್ತು ಮೂಳೆಗಳ ಸಂರಚನೆಗೆ ಸಂಬಂಧಿಸಿದ ಹಾಗೆ ಇನ್ನಿತರ ವ್ಯತ್ಯಾಸಗಳು ಅಂದರೆ ದೇಹದ ಭಂಗಿಯು ರೂಪಗೊಳ್ಳುವಂತಹ ನ್ಯೂನತೆಗಳು ಕಾಣಿಸಿಕೊಳ್ಳುತ್ತವೆ. 

Advertisement

ನಮ್ಮ ಹಿರಿಯರು ಹೊಲದಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿ ಕಾರ್ಖಾನೆಗಳಲ್ಲಿ ದುಡಿಯಲು ಆರಂಭಿಸಿದ ಹಾಗೆಲ್ಲಾ ರಿಕೆಟ್‌ ಒಂದು ಸಮಸ್ಯೆ ಆಗಿ ಬೆಳೆಯಿತು. ಸಾಮಾನ್ಯವಾಗಿ ಈ ತೊಂದರೆಯು ಉತ್ತರದ ಪ್ರದೇಶಗಳಲ್ಲಿ ಚಳಿಗಾಲದಲ್ಲಿ  ವಿಶೇಷವಾಗಿ ಕಾಣಿಸಿಕೊಳ್ಳುತ್ತದೆ. 

ಕಾಡ್‌ ಲಿವರ್‌ ಎಣ್ಣೆಯ (ಮೀನಿನ ಸಾರದ ಎಣ್ಣೆ) ಪೂರಣವನ್ನು ತೆಗೆದುಕೊಂಡಿದ್ದ ಮಕ್ಕಳಲ್ಲಿ ಅಪರೂಪವಾಗಿ ರಿಕಿಟ್‌ ಕಾಣಿಸಿಕೊಂಡಿರುವ ವರದಿ 1920ರ ಸುಮಾರಿಗೆ ಬಂದಿತ್ತು. ಇದು ವಿಟಾಮಿನ್‌ “ಡಿ’ ಸಂಶೋಧನೆಗೆ ಮತ್ತು ಆಹಾರದಲ್ಲಿ ಈ ಪೂರಣದ ಬಳಕೆಗೆ ಹಾದಿ ಮಾಡಿಕೊಟ್ಟಿತು ಎನ್ನಬಹುದು. 

ಇತ್ತೀಚಿನ ಸಂಶೋಧನೆಗಳು ವಿಟಾಮಿನ್‌ “ಡಿ’ಯ ಮಹತ್ವವನ್ನು ಒತ್ತಿ ಹೇಳುತ್ತಿವೆ – ಕೇವಲ ಮೂಳೆಗಳ ಆರೋಗ್ಯಕ್ಕೆ ಅಷ್ಟೇ ಅಲ್ಲ ನಮಗೆ ವಯಸ್ಸು ಹೆಚ್ಚುತ್ತಾ ಹೋದ ಹಾಗೆಲ್ಲಾ ಬಾಧಿಸುವ ದೀರ್ಘ‌ಕಾಲಿಕ ಕಾಯಿಲೆಗಳನ್ನು ತಡೆಯುವ ನಿಟ್ಟಿನಲ್ಲಿಯೂ ಸಹ ವಿಟಮಿನ್‌ “ಡಿ’ ಮಹತ್ವದ ಪಾತ್ರವನ್ನು ವಹಿಸುತ್ತದೆ. ಆದರೆ ಈ ದಿನಗಳಲ್ಲಿ ಬಹಳಷ್ಟು ಮಕ್ಕಳು ಸಾಕಷ್ಟು ಪ್ರಮಾಣದಲ್ಲಿ ವಿಟಾಮಿನ್‌ “ಡಿ’ಯನ್ನು ಪಡೆಯುತ್ತಿಲ್ಲ ಎಂದು ಹೇಳಬಹುದು.  

ಈ ದಿನಗಳಲ್ಲಿ ಮಕ್ಕಳು ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್‌ “ಡಿ’ಯನ್ನು ಪಡೆಯದೆ ಇರುವುದಕ್ಕೆ ಸಾಕಷ್ಟು ಕಾರಣಗಳಿವೆ. ವಿಟಮಿನ್‌ “ಡಿ’ಯು ಕೆಲವೇ ಕೆಲವು ಆಹಾರಗಳಲ್ಲಿ ಮಾತ್ರ ಸಾಕಷ್ಟು ಪ್ರಮಾಣದಲ್ಲಿ ಇರುವುದು ಇದಕ್ಕೆ ಒಂದು ಪ್ರಮುಖ ಕಾರಣ. ಮಕ್ಕಳು ಸೇವಿಸುತ್ತಿರುವ ಆರೋಗ್ಯಕರ ಆಹಾರವೂ ಸಹ ಸಾಕಷ್ಟು ಪ್ರಮಾಣದಲ್ಲಿ ವಿಟಾಮಿನ್‌ “ಡಿ’ಯನ್ನು ಅವರಿಗೆ ಪೂರೈಸುವಲ್ಲಿ ಅಸಮರ್ಥವಾಗುತ್ತಿವೆ.  

Advertisement

ಹೀಗಾಗಲು ಬದಲಾದ ಜೀವನಶೈಲಿಯು ಸಹ ಒಂದು ಪ್ರಮುಖ ಕಾರಣ. ಈಗಿನ ಆಧುನಿಕ ಮಕ್ಕಳ ಬಾಲ್ಯದ ರೀತಿ ನೀತಿಗಳು ವಿಟಮಿನ್‌ “ಡಿ’ ಪೂರೈಕೆಯ ಮೇಲೆ ಪ್ರಭಾವ ಉಂಟು ಮಾಡುತ್ತಿದೆ. ಇಂದಿನ ಮಕ್ಕಳು ಹೊರಗಡೆ ಆಡುವುದಕ್ಕೆ ಬದಲಾಗಿ ಕಂಪ್ಯೂಟರ್‌ ಮತ್ತು ಟಿ. ವಿ. ಯ ಮುಂದೆ ಗಂಟೆಗಟ್ಟಲೆ ಸಮಯ ಕಳೆಯುತ್ತಾರೆ. ಕೆಲವೇ ಕೆಲವು ಮಕ್ಕಳು ನಿತ್ಯವೂ ನಡೆದುಕೊಂಡು ಶಾಲೆಗೆ ಹೋಗುತ್ತಾರೆ. ಬಾಸ್ಕೆಟ್‌ಬಾಲ್‌, ವಾಲಿಬಾಲ್‌ ಮತ್ತು ಜಿಮ್ನಾಸ್ಟಿಕ್‌ನಂತಹ ಅನೇಕ ಜನಪ್ರಿಯ ಆಟಗಳು ಇಂದು ಒಳಾಂಗಣ ಆಟಗಳು ಎನಿಸಿವೆ. 

ಸೋಡಾ ಹಾಗೂ ಜ್ಯೂಸ್‌ಗಳ ಜನಪ್ರಿಯತೆಯ ಕಾರಣದಿಂದಾಗಿ ಮಕ್ಕಳು ಹಾಲು ಸೇವಿಸುವುದೂ ಕಡಿಮೆಯಾಗಿದೆ. ಇಂದಿನ ಮಕ್ಕಳು ಬಹು ಸಮಯವನ್ನು ಒಳಾಂಗಣದಲ್ಲಿ ಚಟುವಟಿಕೆ ಇಲ್ಲದೆ ಕಳೆದು ಬಿಡುತ್ತಾರೆ. ಈ ಕಾಲದ ಮಕ್ಕಳಲ್ಲಿ  ಫಿಟ್‌-ನೆಸ್‌ ಮಟ್ಟವು ಕುಸಿಯುತ್ತಿರುವುದು ಮತ್ತು ಬೊಜ್ಜು ಬೆಳೆಯುತ್ತಿರುವುದು ವರದಿಗಳಿಂದ ದೃಢಪಟ್ಟಿದೆ. ಮಕ್ಕಳು ಪ್ರತಿದಿನ ಕನಿಷ್ಠ 35 ರಿಂದ 60 ನಿಮಿಷಗಳವರೆಗೆ ವ್ಯಾಯಾಮದಲ್ಲಿ ತೊಡಗಬೇಕು. ಇಷ್ಟು ವ್ಯಾಯಾಮ ಮಾಡದಿದ್ದರೆ ಮಕ್ಕಳಲ್ಲಿ ಆರೋಗ್ಯಕರ ಶರೀರ (ಅಥವಾ ಆರೋಗ್ಯಕರ ಮೂಳೆಗಳ) ಬೆಳವಣಿಗೆ ಅಸಾಧ್ಯ. 

ಮಕ್ಕಳು ಒಳಾಂಗಣದಲ್ಲಿ ಬಹಳ ಸಮಯವನ್ನು ಕಳೆಯುವುದರಿಂದ ಅವರ ಪಿಟ್‌-ನೆಸ್‌ ಮಟ್ಟವು ಕುಸಿಯುವುದಷ್ಟೇ ಅಲ್ಲ, ಇದರಿಂದ ಅವರ ಶರೀರವು ಉತ್ಪಾದಿಸುವ ವಿಟಾಮಿನ್‌ “ಡಿ’ ಪ್ರಮಾಣದ ಮೇಲೆಯೂ ಪರಿಣಾಮ ಉಂಟಾಗುತ್ತದೆ. ನಾವು ಸೂರ್ಯನ ಬೆಳಕಿಗೆ ನಮ್ಮ ತ್ವಚೆಯನ್ನು ಅಥವಾ ಶರೀರವನ್ನು ಒಡ್ಡಿಕೊಂಡಾಗ ನಮ್ಮ ಚರ್ಮದಲ್ಲಿ ಬಹಳಷ್ಟು ವಿಟಾಮಿನ್‌ “ಡಿ’ ಉತ್ಪಾದನೆ ಆಗುತ್ತದೆ. ಆದರೆ ಈ ಕಾರಣಕ್ಕಾಗಿ ಅತಿಯಾಗಿ ಸೂರ್ಯನ ಬೆಳಕಿಗೆ ಅಥವಾ ಪ್ರಖರ ಬಿಸಿಲಿಗೆ ಮೈಯೊಡ್ಡಿಕೊಳ್ಳುವುದೂ ಒಳ್ಳೆಯದಲ್ಲ, ಇದರಿಂದ ಸೂರ್ಯನಿಂದ ಬರುವ ಅತಿ ನೇರಳೆ (ಅಲ್ಟ್ರಾ  ವಯಾಲೆಟ್‌ ಕಿರಣ) ಕಿರಣಗಳಿಂದಾಗಿ ಚರ್ಮದ ಕ್ಯಾನ್ಸರ್‌ ಬರುವ ಅಪಾಯ ಇದೆ ಎಂಬುದಾಗಿ ಅಮೆರಿಕನ್‌ ಅಕಾಡೆಮಿ ಆಫ್ ಡರ್ಮಟಾಲಜಿ ಎಚ್ಚರಿಕೆಯನ್ನು ನೀಡಿದೆ. ನಾವು ಹೊರಾಂಗಣದಲ್ಲಿ ಇರುವಾಗ ನಮ್ಮ ಚರ್ಮವನ್ನು ಸನ್‌ಸ್ಕ್ರೀನ್‌ ಮೂಲಕ ರಕ್ಷಿಸಿಕೊಳ್ಳುವುದು ಬಹಳ ಆವಶ್ಯಕ. 

ಮಕ್ಕಳು ಹೊರಾಂಗಣದಲ್ಲಿ ಪ್ರಖರ ಬಿಸಿಲಲ್ಲಿ ಆಟವಾಡುತ್ತಿರುವಾಗ ಹಿರಿಯರು ಅವರ ತ್ವಚೆಗೆ ಸನ್‌ಸ್ಕ್ರೀನ್‌ ಹಚ್ಚಬೇಕು. ಆದರೆ ಈ ಸನ್‌ಸ್ಕ್ರೀನ್‌ ವಿಟಾಮಿನ್‌ “ಡಿ’ಯನ್ನು ತಯಾರಿಸುವ ನಮ್ಮ ಚರ್ಮದ ಸಾಮರ್ಥ್ಯವನ್ನು ತಡೆಯುತ್ತದೆ. ಆರೋಗ್ಯಕರ ಆಹಾರ ಮತ್ತು ಹೊರಾಂಗಣ ಆಟ ಮಾತ್ರ ಈಗಿನ ಮಕ್ಕಳಿಗೆ ಸಾಕಷ್ಟು ಪ್ರಮಾಣದಲ್ಲಿ ವಿಟಾಮಿನ್‌ “ಡಿ’ಯನ್ನು ಒದಗಿಸಲಾರದು. ಹಾಗಿದ್ದರೆ ಅವರಿಗೆ ವಿಟಾಮಿನ್‌ “ಡಿ’ ಅಂಶವು ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿವೆ ಎಂಬುದನ್ನು ಹೇಗೆ ಖಚಿತ ಪಡಿಸಿಕೊಳ್ಳುವುದು? ಮಕ್ಕಳು ಸುರಕ್ಷಿತವಾಗಿ, ಸರಿಯಾದ ಪ್ರಮಾಣದಲ್ಲಿ ವಿಟಮಿನ್‌ “ಡಿ’ಯನ್ನು ಪಡೆಯುವ ಅತ್ಯುತ್ತಮ ವಿಧಾನ ಅಂದರೆ ವಿಟಮಿನ್‌ “ಡಿ’ ಪೂರಣಗಳನ್ನು ಸೇವಿಸುವುದು. 

– ಡಾ| ಸುರೇಂದ್ರ ಯು. ಕಾಮತ್‌, 
ಪ್ರೊಫೆಸರ್‌ ಮತ್ತು  ಮುಖ್ಯಸ್ಥರು, 
ಮೂಳೆ ರೋಗಗಳ ಚಿಕಿತ್ಸಾ ವಿಭಾಗ, 
ಕೆ ಎಂ ಸಿ ಆಸ್ಪತ್ರೆ, ಡಾ. ಬಿ ಆರ್‌ ಅಂಬೇಡ್ಕರ್‌ ವೃತ್ತ, ಮಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next