Advertisement
ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರಕ್ಕೆ ಸೇರಿದ ಬೊಂದೆಲ್‌ನಲ್ಲಿರುವ ವೃತ್ತಕ್ಕೆ “ತ್ರಿಪದಿ ಕವಿ ಜ್ಞಾನ ಭಂಡಾರ ಸರ್ವಜ್ಞ ವೃತ್ತ’ ಎಂದು ಹೆಸರಿಡುವಂತೆ ಶಾಸಕ ಡಾ| ಭರತ್ ಶೆಟ್ಟಿ ವೈ. ಅವರು ಪಾಲಿಕೆಗೆ ಮನವಿ ಸಲ್ಲಿಸಿದ್ದಾರೆ. ಅದರಂತೆ ಕೌನ್ಸಿಲ್‌ನಿಂದ ಪಟ್ಟಣ ಮತ್ತು ನಗರ ಯೋಜನ ಸ್ಥಾಯೀ ಸಮಿತಿಗೆ ಹೋಗಿದ್ದು, ಶೀಘ್ರ ಈ ವಿಚಾರ ಚರ್ಚೆಬರಲಿದೆ. ಸ್ಥಾಯೀ ಸಮಿತಿಯಲ್ಲಿ ಅನುಮೋದನೆ ಸಿಕ್ಕಿದ ಬಳಿಕ ಕೌನ್ಸಿಲ್ ಸಭೆಯಲ್ಲಿ ಮಂಡನೆಯಾಗಲಿದೆ. ಅಲ್ಲಿ ಅಂಗೀಕಾರವಾಗಿ ಸಾರ್ವಜನಿಕರಿಂದ ಆಕ್ಷೇಪಣೆ/ಸಲಹೆಗಳನ್ನು ಆಹ್ವಾನಿಸಲಾಗು ತ್ತದೆ. ಆಕ್ಷೇಪಣೆ ಸಲಹೆಗಳಿದ್ದಲ್ಲಿ ಪರಿಶೀಲಿಸಿ, ಸಭೆಯಲ್ಲಿ ಮಂಡಿಸಿ ಬಳಿಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಲಿದೆ. ಸರ್ವಜ್ಞ ಹೆಸರಿಡಲು ಆಕ್ಷೇಪ ಬರುವ ಸಾಧ್ಯತೆ ಕಡಿಮೆ ಇರುವುದಿಂದ ಶೀಘ್ರ ಸರಕಾರವೂ ಅನುಮತಿ ನೀಡುವ ಸಾಧ್ಯತೆಯಿದೆ.
ಸರ್ವಜ್ಞ ವೃತ್ತ ಎನ್ನುವ ಹೆಸರಿನ ಜತೆಗೆ ಜಂಕ್ಷನ್ ಅಭಿವೃದ್ಧಿ ಪಡಿಸಿ ಪ್ರತಿಮೆ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ನಗರದಲ್ಲಿ ಬ್ರಹ್ಮಶ್ರೀ ನಾರಾಯಣಗುರು, ಮಂಜೇಶ್ವರ ಗೋವಿಂದ ಪೈ ಅವರ ಪ್ರತಿಮೆಗಳನ್ನು ನಿರ್ಮಿಸಲಾಗಿದ್ದು, ಸರ್ವಜ್ಞನ ಪ್ರತಿಮೆಯೂ ಆದೇ ಮಾದರಿಯಲ್ಲಿ ರಚನೆಯಾಗಲಿದೆ. ಈ ಮೊದಲು ಅವೈಜ್ಞಾನಿಕವಾಗಿದ್ದ ಬೊಂದೇಲ್ ವೃತ್ತವನ್ನು ಸದ್ಯ ತುಸು ಮಾರ್ಪಾಡು ಮಾಡಲಾಗಿದೆ. ಬೊಂದೇಲ್ ಒಂದು ಪ್ರಮುಖ ಶಿಕ್ಷಣ ಕೇಂದ್ರವಾಗಿರುವುದರಿಂದ ಸರ್ವಜ್ಞನ ಹೆಸರು ಇಡುವುದು ಸೂಕ್ತವಾಗಿದೆ. ಇದಕ್ಕೆ ಸ್ಥಳೀಯರು, ಶಿಕ್ಷಣ ಸಂಸ್ಥೆಗಳ ಪ್ರಮುಖರಿಂದಲೂ ಶ್ಲಾಘನೆ ವ್ಯಕ್ತವಾಗಿದೆ ಎಂದು ಕಾರ್ಪೋರೆಟರ್ ಸಂಗೀತಾ ನಾಯಕ್ ತಿಳಿಸಿದ್ದಾರೆ.
Related Articles
ಬೊಂದೇ ಲ್ ಪ್ರದೇಶದ ಹಲವು ವಿದ್ಯಾ ಸಂಸ್ಥೆಗಳನ್ನು ಹೊಂದಿರುವ ಪ್ರಮುಖ ಶಿಕ್ಷಣ ಕೇಂದ್ರವಾಗಿದೆ. ಜಂಕ್ಷನ್ ಪಕ್ಕದಲ್ಲೇ ಪ್ರಸಿದ್ಧ ವಿದ್ಯಾ ಸಂಸ್ಥೆಗಳಾದ ಸರಕಾರಿ ಮಹಿಳಾ ಪಾಲಿಟೆಕ್ನಿಕ್, ಬೆಸೆಂಟ್ ಮ್ಯಾನೇಜ್‌ಮೆಂಟ್ ಕಾಲೇಜು, ಮಹಾತ್ಮಾ ಗಾಂಧಿ ಸೆಂಟನರಿ ಪ್ರೌಢಶಾಲೆ ಮತ್ತು ಪ.ಪೂ. ವಿಭಾಗವಿದೆ. ಉಳಿದಂತೆ ಮಂಗಳೂರು ವಿದ್ಯುತ್ಛಕ್ತಿ ವಿಭಾಗದ ಕಾವೂರು ಉಪವಿಭಾಗ ಕಚೇರಿ, ಕುದುರೆ ಮುಖ ಕಬ್ಬಿಣದ ಅದಿರುವ ಸಂಸ್ಥೆ ಸಿಬಂದಿಯ ವಸತಿಗೃಹ, ಲೋಕೋಪಯೋಗಿ ಇಲಾಖಾ ಸಿಬಂದಿ ವಸತಿ ಗೃಹ, ಕರ್ನಾಟಕ ಗೃಹ ಮಂಡಳಿಯ ಮನೆಗಳು ಇಲ್ಲಿವೆ. ಬ್ಯಾಂಕ್, ಸರಕಾರಿ ಕಚೇರಿಗಳೂ ಇವೆ. ಮಂಗಳೂರು ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯೂ ಇದಾಗಿದ್ದು, ಮೂರ್ತಿ ನಿರ್ಮಾಣವಾದರೆ ಪರಿಸರ ಇನ್ನಷ್ಟು ಸುಂದರವಾಗಲಿದೆ.
Advertisement
ಶೀಘ್ರ ಅಗತ್ಯ ಪ್ರಕ್ರಿಯೆ ಪೂರ್ಣಬೊಂದೇ ಲ್ ವೃತ್ತಕ್ಕೆ ಸರ್ವಜ್ಞನ ಹೆಸರಿಡುವ ವಿಚಾರ ಸ್ಥಾಯೀ ಸಮಿತಿ ಸಭೆಯಲ್ಲಿ ಶೀಘ್ರ ಚರ್ಚೆಗೆ ಬಂದು ನಿರ್ಣಯವಾಗಲಿದೆ. ಮುಂದಿನ ಸಭೆಯಲ್ಲೇ ಚರ್ಚೆಗೆ ಬರುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಬಳಿಕ ಮುಂದಿನ ಪ್ರಕ್ರಿಯೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಸರಕಾರಕ್ಕೆ ಕಳುಹಿಸಲಾಗುವುದು. -ಪ್ರೇಮಾನಂದ ಶೆಟ್ಟಿ, ಮನಪಾ ಮುಖ್ಯ ಸಚೇತಕ – ಭರತ್ ಶೆಟ್ಟಿಗಾರ್