Advertisement

ಈರ್ವರು ಕಲಾವಿದರಿಗೆ ಬೊಂಡಾಲ ಪ್ರಶಸ್ತಿ 

12:30 AM Feb 15, 2019 | Team Udayavani |

ಹಿರಿ ತಲೆಮಾರಿನ ನುರಿತ ಅರ್ಥದಾರಿ ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ಅವರದೇ ದಾರಿಯಲ್ಲಿ ಅರ್ಥಗಾರಿಕೆಯಲ್ಲಿ ಮೆರೆದ ಅವರ ಪುತ್ರ ಬೊಂಡಾಲ ರಾಮಣ್ಣ ಶೆಟ್ಟರ ಹೆಸರಿನಲ್ಲಿ ನೀಡುವ ಬೊಂಡಾಲ ಪ್ರಶಸ್ತಿಗೆ ಕಟೀಲು ಮೇಳದ ಪಡ್ರೆ ಕುಮಾರ ಮತ್ತು ನಗ್ರಿ ಮಹಾಬಲ ರೈ ಆಯ್ಕೆಯಾಗಿದ್ದಾರೆ.ಕಟೀಲು ಮೇಳದಲ್ಲಿ ಸೇವೆಗೈದ ಕಲಾವಿದರಿಗಾಗಿಯೇ ಎಂಟು ವರ್ಷಗಳಿಂದ ನೀಡಲಾಗುತ್ತಿರುವ ಬೊಂಡಾಲ ಪ್ರಶಸ್ತಿಯನ್ನು ಫೆ.15ರಂದು ಬಂಟ್ವಾಳದ ಶಂಭೂರಿನ ಬೊಂಡಾಲದಲ್ಲಿ ಜರಗುವ ಕಟೀಲು ಮೇಳದ ಬಯಲಾಟದ ರಂಗಸ್ಥಳದಲ್ಲಿ ಪ್ರದಾನಿಸಲಾಗುವುದು.

Advertisement

ಪಡ್ರೆ ಕುಮಾರ 
ತೆಂಕುತಿಟ್ಟಿನ ಯಕ್ಷಗುರುವೆಂದೇ ಖ್ಯಾತರಾಗಿದ್ದ ಪಡ್ರೆ ಚಂದು ಪುತ್ರರಾಗಿರುವ ಪಡ್ರೆ ಕುಮಾರರಿಗೆ ಯಕ್ಷಗಾನದಲ್ಲಿ ತಂದೆಯೇ ಗುರು.ಹನ್ನೆರಡನೇ ವಯಸ್ಸಿನಲ್ಲೇ ಅವರು ಮೇಳ ಸೇರಿದರು. ಕಟೀಲು ಮೇಳದಲ್ಲಿ ಗೆಜ್ಜೆಕಟ್ಟಿ ಐದು ದಶಕಗಳಿಂದ ಒಂದೇ ಮೇಳದಲ್ಲಿ ಸೇವೆ ಸಲ್ಲಿಸಿದ ಖ್ಯಾತಿ ಅವರದು. ಈ ನಡುವೆ ಒಂದು ವರ್ಷ ಇರಾ ಸೋಮನಾಥೇಶ್ವರ ಮೇಳದಲ್ಲೂ ಅವರು ತಿರುಗಾಟ ನಡೆಸಿದ್ದಾರೆ.

 ಬಣ್ಣದ ವೇಷವನ್ನು ಹೊರತುಪಡಿಸಿ, ಮಿಕ್ಕೆಲ್ಲ ಪ್ರಕಾರದ ವೇಷಗಳನ್ನು ಅವರು ಮಾಡಿದ್ದಾರೆ. ಕೋಡಂಗಿ, ನಿತ್ಯವೇಷ, ಸ್ತ್ರೀವೇಷ, ಹಾಸ್ಯ ಪಾತ್ರಗಳನ್ನೂ ನಿರ್ವಹಿಸಿದ್ದಾರೆ. ಪುಂಡುವೇಷ ಮತ್ತು ರಾಜವೇಷಗಳಲ್ಲಿ ಪಡ್ರೆ ಕುಮಾರರಿಗೆ ಅಪಾರ ಜನಪ್ರಿಯತೆ ಲಭಿಸಿದೆ. ಶ್ರೀರಾಮ, ಕೃಷ್ಣ, ದೇವೇಂದ್ರ, ಅರ್ಜುನ, ಹನೂಮಂತ, ಮಧು-ಕೈಟಭ, ಚಂಡ-ಮುಂಡ, ದಾರುಕ, ನಕ್ಷತ್ರಿಕ, ಜಮದಗ್ನಿ, ಮಾಲಿನಿ, ಸೀತೆ, ಲಕ್ಷ್ಮೀ ಇತ್ಯಾದಿ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಕೊರವಂಜಿ ಅವರ ಪ್ರಸಿದ್ಧ ಪಾತ್ರ. 72ರ ಇಳಿವಯಸ್ಸಿನಲ್ಲೂ ತಿರುಗಾಟವನ್ನು ಮುಂದುವರಿಸಿದ್ದಾರೆ. 

ನಗ್ರಿ ಮಹಾಬಲ ರೈ 
ಶ್ರೀ ದೇವಿ ಮಹಾತ್ಮೆಯ ಮಹಿಷಾಸುರ ಪಾತ್ರದಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ನಗ್ರಿ ಮಹಾಬಲ ರೈ ಕಳೆದ 29 ವರ್ಷಗಳಿಂದ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಪುತ್ತೂರು ಶೀನಪ್ಪ ಭಂಡಾರಿಯವರಲ್ಲಿ ನಾಟ್ಯಾಭ್ಯಾಸ ಮಾಡಿ ಹದಿನೈದು ವರ್ಷಗಳ ಕಾಲ ಸುಬ್ರಹ್ಮಣ್ಯ ಮೇಳದಲ್ಲಿ ತಿರುಗಾಟ ನಡೆಸಿ ಮುಂದೆ ಒಂದು ವರ್ಷ ಧರ್ಮಸ್ಥಳ ಮೇಳದಲ್ಲೂ ಸೇವೆ ಸಲ್ಲಿಸಿದ್ದಾರೆ. ಆ ಮೇಲೆ ಕಟೀಲು ಮೇಳವನ್ನು ಸೇರಿಕೊಂಡ ಅವರು ಮತ್ತೆ ತಿರುಗಿ ನೋಡಲಿಲ್ಲ. ನಾಲ್ಕೂವರೆ ದಶಕಗಳ ಅವರ ಯಕ್ಷಗಾನ ಸೇವೆಯಲ್ಲಿ ಬಣ್ಣದ ವೇಷದ್ದೇ ಸಿಂಹಪಾಲು. ಅವರು ಮಾಡುತ್ತಿರುವ ಮಹಿಷಾಸುರ ಪಾತ್ರದ ಆವೇಶ-ಅಬ್ಬರ ಕಲಾಭಿಮಾನಿಗಳ ಮನಗೆದ್ದಿದೆ. 

ಭಾಸ್ಕರ ರೈ ಕುಕ್ಕುವಳ್ಳಿ 

Advertisement
Advertisement

Udayavani is now on Telegram. Click here to join our channel and stay updated with the latest news.

Next