ಆತ ಕಾಸಿಲ್ಲದೇ ಕನೆಕ್ಟ್ ಆಗುವ ವ್ಯಕ್ತಿಯಲ್ಲ, ಸೆಂಟಿಮೆಂಟ್‌ಗಿಂತ ಸೆಟ್ಲಮೆಂಟ್ ಮುಖ್ಯ ಎಂಬ “ಕಮಿಟ್‌ಮೆಂಟ್’ನೊಂದಿಗೆ ಬದುಕುತ್ತಿರುವ ಹುಡುಗ..ಇಂತಹ ರಗಡ್ ಹುಡುಗನ ದಿಲ್‌ಗೊಂದು ಪ್ರೀತಿಯ ಸಿಂಚನ, ಅಲ್ಲಿಂದ “ಬಿಸಿ’ ರಕ್ತ ಕೂಲ್ ಕೂಲ್… ಹೀಗೆ “ತಂಪಾಗಿ’ ಪ್ರೀತಿಯ ಅಮಲಿನಲ್ಲಿ ಇರುವ ಆತನ ಹಿಂದೊಂದು ಸಂಚು, ಹೊಂಚು… ಕ್ಲೈಮ್ಯಾಕ್ಸ್‌ನಲ್ಲೊಂದು ಬಿಗ್ ಟ್ವಿಸ್ಟ್….
ಈ ವಾರ ತೆರೆಕಂಡಿರುವ “ಬಾಂಡ್ ರವಿ’ ಆ್ಯಕ್ಷನ್ ಇಮೇಜ್ ನೊಂದಿಗೆ ಆರಂಭವಾಗಿ ಲವ್‌ಸ್ಟೋರಿ ಮೂಲಕ ಕೊನೆಯಾಗುವ ಸಿನಿಮಾ. ಒಂದು ಮಾಸ್ ಸಿನಮಾದಲ್ಲಿ ಏನೆಲ್ಲಾ ಇರಬೇಕೋ, ಆ ಎಲ್ಲಾ ಅಂಶಗಳು ಈ ಸಿನಿಮಾದಲ್ಲಿದೆ. ಮಾಸ್ ಎಂಟ್ರಿ, ಫೈಟ್, ಹಾಡು.. ಹೀಗೆ ಎಲ್ಲವೂ “ಬಾಂಡ್ ರವಿ’ಯಲ್ಲಿದೆ. ಕಥೆಯ ವಿಚಾರಕ್ಕೆ ಬರುವುದಾದರೆ ಮಾಸ್ ಕಥೆಗೆ ಲವ್ ಟಚ್ ಕೊಡಲಾಗಿದೆ.
ಮೊದಲರ್ಧ ಸಿನಿಮಾ ಜೈಲು, ಗಲಾಟೆ, ಸೆಟ್ಲಮೆಂಟ್‌ಗಳಲ್ಲಿ ಸಾಗಿದರೆ, ಸಿನಿಮಾದ ನಿಜವಾದ ಜೀವಾಳ ದ್ವಿತೀಯಾರ್ಧ. ಅದರಲ್ಲೂ ಚಿತ್ರದ ಕ್ಲೈಮ್ಯಾಕ್ಸ್. ಆರಂಭದಲ್ಲಿ ಪ್ರೇಕ್ಷಕನ ಊಹೆಗೆ ತಕ್ಕಂತೆ ಸಿನಿಮಾ ಸಾಗಿದರೆ, ಚಿತ್ರದ ಕ್ಲೈಮ್ಯಾಕ್ಸ್ ಮಾತ್ರ ಭಿನ್ನವಾಗಿದೆ. ಆ ಮಟ್ಟಿಗೆ ನಿರ್ದೇಶಕರ ಶ್ರಮವನ್ನು ಮೆಚ್ಚಬಹುದು.
ಕೆಲವೇ ಕೆಲವು ಲೊಕೇಶನ್‌ಗಳಲ್ಲಿ ಈ ಸಿನಿಮಾವನ್ನು ಕಟ್ಟಿಕೊಡುವ ಮೂಲಕ ಸಿನಿಮಾ ಒಂದೇ ಕಡೆ ಸುತ್ತಿದಂತೆ ಭಾಸವಾಗುತ್ತದೆ. ಆರಂಭದಲ್ಲಿ ಬರುವ ಒಂದಷ್ಟು ಜೈಲು ದೃಶ್ಯಗಳಿಗೆ ಕತ್ತರಿ ಹಾಕಿ, ಸಿನಿಮಾದ ಕಥೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಅವಕಾಶ ನಿರ್ದೇಶಕರಿಗಿತ್ತು. ಚಿತ್ರದ ಹೈಲೈಟ್‌ಗಳಲ್ಲಿ ಸಂಭಾಷಣೆ ಕೂಡಾ ಒಂದು. ಮಾಸ್ ಸಿನಿಮಾಗಳಿಗೆ ಬೇಕಾದ ಪಂಚಿಂಗ್ ಡೈಲಾಗ್ ಮೂಲಕ ಸಿನಿಮಾದ “ಖದರ್’ ಹೆಚ್ಚಿಸಲು ಪ್ರಯತ್ನಿಸಿದ್ದಾರೆ.
ನಾಯಕ ಪ್ರಮೋದ್ ಮತ್ತೂಮ್ಮೆ ತಾನು ಭವಿಷ್ಯದ ಮಾಸ್ ಹೀರೋ ಎಂಬುದನ್ನು ಸಾಬೀತು ಮಾಡಿದ್ದಾರೆ. ರಗಡ್ ಲುಕ್‌ನಲ್ಲಿ ಅವರ ಮ್ಯಾನರಿಸಂ, ಡೈಲಾಗ್ ಡೆಲಿವರಿ ಶೈಲಿ ಎಲ್ಲವೂ “ಮಾಸ್’ ಇಮೇಜ್‌ಗೆ ಒತ್ತು ನೀಡುವಂತಿದೆ. ನಾಯಕಿ ಕಾಜಲ್ ಕುಂದರ್ ಕ್ಲೈಮ್ಯಾಕ್ಸ್‌ನಲ್ಲಿ ಮಿಂಚಿದ್ದಾರೆ. ಉಳಿದಂತೆ ಶೋಭರಾಜ್, ರವಿಕಾಳೆ ಸೇರಿದಂತೆ ಇತರರು ನಟಿಸಿದ್ದಾರೆ. ಒಂದು ಮಾಸ್ ಲವ್‌ಸ್ಟೋರಿ ಇಷ್ಟಪಡುವವರಿಗೆ ಬಾಂಡ್ ರವಿ ಮೆಚ್ಚುಗೆಯಾಗಬಹುದು.
ರವಿಪ್ರಕಾಶ್ ರೈ