ಬೆಂಗಳೂರು: ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಆರೋಪದಡಿ ಬಂಧನಕ್ಕೊಳಗಾಗಿರುವ ಆನೇಕಲ್ ಕೃಷ್ಣಪ್ಪ, ಖಾಲಿ ಬಾಂಡ್ ಪೇಪರ್‌ಗಳಿಗೆ ಸಾಲಗಾರರ ಸಹಿ ಹಾಕಿಸಿಕೊಂಡು ಅವರ ಆಸ್ತಿಗಳನ್ನೆಲ್ಲ ಅಕ್ರಮವಾಗಿ ತನ್ನ ಹೆಸರಿಗೆ ಮಾಡಿಕೊಂಡು ವಂಚಿಸುತ್ತಿದ್ದ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.
ಆನೇಕಲ್ ಮೂಲದ ಕೃಷ್ಣಪ್ಪ ಕಳೆದ ಹತ್ತು ವರ್ಷಗಳಿಂದ ಸಾರ್ವಜನಿಕರಿಗೆ ಶೇ.10ರಷ್ಟು ಬಡ್ಡಿ ದರದಲ್ಲಿ ಲಕ್ಷಾತಂರ ರೂ. ಸಾಲ ನೀಡುತ್ತಿದ್ದ. ಸಾಲ ಕೊಡುತ್ತಿದ್ದ ವೇಳೆ ಸಾಲಗಾರರಿಂದ ಖಾಲಿ ಬಾಂಡ್ ಪೇಪರ್‌ಗಳ ಮೇಲೆ ಸಹಿ ಮಾಡಿಸಿಕೊಳ್ಳುತ್ತಿದ್ದ. ನಿಗದಿತ ಸಮಯಕ್ಕೆ ಸಾಲ ವಾಪಸ್ ಕೊಡದಿದ್ದರೆ, ಸಾಲಗಾರರ ಮನೆ ಬಳಿ ಹೋಗಿ ಗಲಾಟೆ ಮಾಡುತ್ತಿದ್ದ.
ಒಂದು ವೇಳೆ ಆರು ತಿಂಗಳು, ವರ್ಷವಾದರೂ ಹಣ ಹಿಂದಿರುಗಿಸದಿದ್ದರೆ, ಖಾಲಿ ಬಾಂಡ್ ಪೇಪರ್‌ಗಳ ಮೇಲೆ ಆಸ್ತಿ ಖರೀದಿಸಿರುವುದಾಗಿ ಬರೆದುಕೊಂಡು ವಂಚಿಸುತ್ತಿದ್ದ. ಇದನ್ನು ಯಾರಾದರೂ ಪ್ರಶ್ನಿಸಿದರೆ, ಅಂತಹ ಸಾಲಗಾರರ ವಿರುದ್ಧ ಈತನೇ ಕೋರ್ಟ್‌ಗಳಲ್ಲಿ ಸಿವಿಲ್ ದಾವೆ ಹೂಡುತ್ತಿದ್ದ.
ವಿಚಾರಣೆ ಆರಂಭವಾಗುತ್ತಿದ್ದಂತೆ ಸಾಲಗಾರರಿಗೆ ನೋಟಿಸ್ ಜಾರಿ ಮಾಡಲಾಗುತ್ತಿತ್ತು. ಆದರೆ, ಆರೋಪಿ ತನ್ನ ಪ್ರಭಾವ ಬಳಸಿ ಸಾಲಗಾರರಿಗೆ ನೋಟಿಸ್ ತಲುಪದಂತೆ ನೋಡಿಕೊಳ್ಳುತ್ತಿದ್ದ. ಈ ಮೂಲಕ ಆಸ್ತಿ ಕಬಳಿಸುತ್ತಿದ್ದ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ಹೇಳಿದರು.
ಸಂಘಟನೆ ಮುಖ್ಯಸ್ಥ: ಆರೋಪಿ “ಪ್ರಜಾ ವಿಮೋಚನಾ ಚಳವಳಿ’ ಎಂಬ ಸಂಘಟನೆ ಕಟ್ಟಿದ್ದು, ಅದರ ಮುಖ್ಯಸ್ಥ ಕೂಡ ಆಗಿದ್ದಾನೆ. ಈ ಸಂಘಟನೆ ನಕಲಿಯೋ ಅಥವಾ ಅಸಲಿಯೋ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮಧ್ಯಮ ವರ್ಗದವರು, ದುರ್ಬಲರನ್ನೇ ಗುರಿಯಾಗಿಸಿಕೊಂಡು ದಂಧೆ ನಡೆಸುತ್ತಿದ್ದ ಆರೋಪಿ, ರೌಡಿಗಳ ಮೂಲಕ ಸಾಲಗಾರರಿಗೆ ಬೆದರಿಕೆ ಹಾಕುತ್ತಿದ್ದ. ಇದುವರೆಗೂ ಆರೋಪಿಯ ವಿರುದ್ಧ 8 ಮಂದಿ ದೂರು ಕೊಟ್ಟಿದ್ದಾರೆ. ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದರು.
100ಕ್ಕೂ ಹೆಚ್ಚು ಪ್ರಕರಣ: ಸಾರ್ವಜನಿಕರ ಜಮೀನುಗಳನ್ನು ಕಬಳಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿವೇಶನಗಳನ್ನು ಮಾರಾಟ ಮಾಡುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮಿರ್ಲೆ ವರದರಾಜು ವಿರುದ್ಧ ಇದುವರೆಗೂ 100ಕ್ಕೂ ಹೆಚ್ಚು ಮಂದಿ ದೂರು ನೀಡಿದ್ದಾರೆ. ಇನ್ನಷ್ಟು ಮಂದಿ ದೂರು ನೀಡುವ ಸಾಧ್ಯತೆಯಿದ್ದು, ತನಿಖೆ ಮುಂದುವರಿದಿದೆ.
ಪ್ರತ್ಯೇಕ ಖಾತೆ: ಅಂಬಿಡೆಂಟ್ ವಂಚನೆ ಪ್ರಕರಣ ಸಂಬಂಧ ಪ್ರತ್ಯೇತ ಖಾತೆ ತೆರೆಯಲಾಗಿದೆ. ಕಂಪನಿಯಿಂದ ಹಣ ಪಡೆದವರು ಡಿಡಿ ಮೂಲಕ ಆ ಖಾತೆಗೆ ಹಣ ಜಮೆ ಮಾಡಲು ಪೊಲೀಸರು ಸೂಚಿಸಿದ್ದಾರೆ. ಕಂಪನಿಯಿಂದ ಹಣ ಪಡೆದ ಪೈಕಿ ಕೆಲವರು ಹಣ ವಾಪಸ್ ಕೊಡಲು ಒಪ್ಪಿಕೊಂಡಿದ್ದಾರೆ.